ಅಂತೂ ಇಂತೂ ಉದ್ಘಾಟನೆಯಾಗಲಿದೆ ಸೈಕಲ್ ಪಥ

Jayanagar bicycle friendly street inauguration
ಬೆಂಗಳೂರು, ಸೆ. 21 : ನಗರದ ಜಯನಗರ 3ನೇ, 4ನೇ ಮತ್ತು 5ನೇ ಬಡಾವಣೆಯಲ್ಲಿ ಅಡ್ಡಾಡಿದವರಿಗೆ ಪ್ರಮುಖ ರಸ್ತೆಯ ಎರಡೂ ಬದಿಗೆ ಬಿಳಿ ಬಣ್ಣದ ಪಟ್ಟಿ ಬಳಿದಿದ್ದು, ಅದರಲ್ಲಿ ಅಲ್ಲಲ್ಲಿ ಸೈಕಲ್ ಚಿತ್ರ ಕಣ್ಣಿಗೆ ಬಿದ್ದೇ ಬಿದ್ದಿರುತ್ತದೆ. ಹಾಗೆಯೆ, ಜಾಗದಲ್ಲಿ ಸೈಕಲ್ ಬದಲಾಗಿ ಕಾರುಗಳನ್ನು ನಿಲ್ಲಿಸಿರುವುದು, ಸೈಕಲ್ ಚಿತ್ರವೇ ಹಾಳಾಗಿರುವಷ್ಟು ರಸ್ತೆ ಕಿತ್ತುಹೋಗಿರುವುದು ಕೂಡ ಕಣ್ಣಿಗೆ ಬಿದ್ದಿರುತ್ತದೆ.

ಸೈಕಲ್ ಪಥ ನಿರ್ಮಿಸಲಾಗಿದ್ದರೂ ಯಾರೂ ಯಾಕೆ ಸೈಕಲ್ ಓಡಿಸುತ್ತಿಲ್ಲ ಎಂಬ ಪ್ರಶ್ನೆಯೂ ಉದ್ಭವವಾಗಿರುತ್ತದೆ. ಈ ಪ್ರಶ್ನೆಗಳಿಗೆ ಉತ್ತರ ನೀಡುವ ಮತ್ತು ಸೈಕಲ್ ಬಳಕೆಯನ್ನು ಉತ್ತೇಜಿಸಿ ಪರಿಸರವನ್ನು ಕಾಪಾಡುವ ಉದ್ದೇಶ ಸಾಕಾರಗೊಳ್ಳುವ ಸಂದರ್ಭ ಬಂದುಬಿಟ್ಟಿದೆ.

ಹೌದು, ಸೆಪ್ಟೆಂಬರ್ 22ರಂದು ಶನಿವಾರ ಬೆಳಿಗ್ಗೆ 9.30ಕ್ಕೆ 'ಜಯನಗರ ಸೈಕಲ್ ಸ್ನೇಹಿ ಬೀದಿಗಳ' ಉದ್ಘಾಟನೆಗೊಳ್ಳಲಿದೆ. ಜಯನಗರದ ಶಾಸಕ ಮತ್ತು ಅಪ್ಪಟ ಪರಿಸರ ಪ್ರೇಮಿ ಬಿ.ಎನ್. ವಿಜಯಕುಮಾರ್ ಅವರ ಕನಸು ಕಡೆಗೂ ಸಾಕಾರಗೊಳ್ಳುತ್ತಿದೆ. ಉಪ ಮುಖ್ಯಮಂತ್ರಿ ಮತ್ತು ಗೃಹ ಸಚಿವ ಆರ್ ಅಶೋಕ್ ಅವರು ಸೈಕಲ್ ಪಥವನ್ನು ಉದ್ಘಾಟಿಸಲಿದ್ದಾರೆ.

ಕಾರ್ಯಕ್ರಮದ ವಿವರ

ದಿನಾಂಕ : 22ನೇ ಸೆಪ್ಟೆಂಬರ್, 2012
ಸ್ಥಳ : ಚಂದ್ರಗುಪ್ತ ಮೌರ್ಯ ಪಾರ್ಕ್ (ಶಾಲಿನಿ ಗ್ರೌಂಡ್ಸ್), 10ನೇ ಮುಖ್ಯರಸ್ತೆ, 38ನೇ ಕ್ರಾಸ್, ಜಯನಗರ 5ನೇ ಬ್ಲಾಕ್, ಬೆಂಗಳೂರು.
ಸಮಯ : ಬೆಳಿಗ್ಗೆ 9.30ಕ್ಕೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಕಾರದೊಂದಿಗೆ ಸೈಕಲ್ ಪಥಗಳನ್ನು ರೂಪಿಸಲಾಗಿದ್ದು, ಬೆಂಗಳೂರು ಮೇಯರ್ ಡಿ. ವೆಂಕಟೇಶ ಮೂರ್ತಿ ಮತ್ತು ಬಿಬಿಎಂಪಿ ಕಮಿಷನರ್ ರಜನೀಶ್ ಗೋಯೆಲ್ ಅವರು ಕೂಡ ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ.

ಸೆ.22 ಕಾರ್ ರಹಿತ ದಿನ : ಅಂದ ಹಾಗೆ, ಸೆಪ್ಟೆಂಬರ್ 22ರಂದು ವಿಶ್ವದಾದ್ಯಂತ ಕಾರ್ ಫ್ರೀ ಡೇ ಆಚರಿಸಲಾಗುತ್ತಿದೆ. ಅದರರ್ಥ, ಕಾರನ್ನು ಗ್ಯಾರೇಜಿನಿಂದ, ಮನೆ ಮುಂದಿನ ಪೋರ್ಟಿಕೋದಿಂದ, ಅಪಾರ್ಟ್‌ಮೆಂಟಿನ ಪಾರ್ಕಿಂಗ್ ಜಾಗದಿಂದ, ರಸ್ತೆಬದಿಯಿಂದ ಹೊರತೆಗೆಯದೆ ಬಸ್ಸಿನಲ್ಲಿ ಅಥವಾ ಸೈಕಲ್ (ಇದ್ದರೆ) ಬಳಸಿ ಕಚೇರಿಗಳಿಗೆ ಬರಬಹುದಾಗಿದೆ.

ಜಯನಗರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಭಾಗವಹಿಸುವವರು ಕೂಡ ಸೈಕಲ್‌ನಲ್ಲಿ ಬರಬೇಕೆಂದು ಆಗ್ರಹಿಸಲಾಗಿದೆ. ಸಾಮಾನ್ಯ ಪ್ರಜೆಗಳೇನೋ ಸೈಕಲ್‌ನಲ್ಲಿ ಬರಬಹುದು. ಆದರೆ, ಜಯನಗರ ಶಾಸಕರು, ಉದ್ಘಾಟನೆಗೆ ಬರುವವರು, ಬಿಬಿಎಂಪಿ ಪ್ರಮುಖರು ಸೈಕಲ್‌ನಲ್ಲಿ ಬರುತ್ತಾರಾ? ಉದ್ಘಾಟನೆಯ ದಿನದಂದಾರೂ ಅವರೆಲ್ಲ ಸೈಕಲ್‌ನಲ್ಲಿ ಬಂದು ಉಳಿದವರಿಗೂ ಮೇಲ್ಪಂಕ್ತಿ ಹಾಕಿಕೊಡುತ್ತಾರಾ?

ಆರಂಭ ಶೂರತ್ವ ಆಗದಿರಲಿ : ಪರಿಸರ ದಿನಾಚರಣೆಯಂದು ಮಾತ್ರ ಗಿಡ ನೆಟ್ಟು ಪ್ರೇಮ ತೋರಿಸುವುದು, ಕನ್ನಡ ರಾಜ್ಯೋತ್ಸವದಂದು ಮಾತ್ರ ಕನ್ನಡ ಮಾತನಾಡುವುದು, ತಂಬಾಕು ರಹಿತ ದಿನದಂದು ಮಾತ್ರ ಸಿಗರೇಟು ಸೇದುವುದು ಬಿಡುವುದು ನಮ್ಮ ಜನರ ಜಾಯಮಾನ. ಹಾಗೆಯೆ, ಸೈಕಲ್ ಪಥ ಉದ್ಘಾಟನೆಯ ದಿನ ಮಾತ್ರ ಜನರು ಸೈಕಲ್ ಬಳಸದಿರಲಿ. ಸೈಕಲು ಬಳಸುವುದನ್ನು ಪ್ರತಿದಿನ ರೂಢಿಮಾಡಿಕೊಳ್ಳಲಿ. ಹಾಗೆಯೆ, ಬಿಬಿಎಂಪಿ ಮತ್ತು ಜಯನಗರದ ಸಚಿವರು ಸೈಕಲ್‌ಗಳನ್ನು ಕಡಿಮೆ ದರದಲ್ಲಿ ಮಾರಾಟ ಮಾಡಿ ಸೈಕಲ್ ಬಳಕೆಯನ್ನು ಹೆಚ್ಚಾಗುವಂತೆ ಮಾಡಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+