ಗಣೇಶ ಬಿಡೋಕೆ ನೀರಿಲ್ಲ,ಇನ್ನೆಲ್ಲಿಂದ ಬಿಡೋದು ಕಾವೇರಿ ನೀರು?

ಪ್ರಧಾನಿ ಅಧ್ಯಕ್ಷತೆಯಲ್ಲಿ ಗಣೇಶ ಹಬ್ಬದ ದಿನವಾದ ಬುಧವಾರ (ಸೆ 19) ಕಾವೇರಿ ನದಿ ಪ್ರಾಧಿಕಾರದ ನಿರ್ಣಾಯಕ ಸಭೆ ಸಂಜೆ ಐದು ಗಂಟೆಗೆ ಆರಂಭವಾಗಲಿದೆ.
ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯದ ಮುಖ್ಯಮಂತ್ರಿಗಳು, ಕಾರ್ಯದರ್ಶಿಗಳು, ನೀರಾವರಿ ತಜ್ಞರು ಮತ್ತು ಸಚಿವರುಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ.
ದೆಹಲಿಯಲ್ಲಿ ಬೀಡು ಬಿಟ್ಟಿರುವ ನೀರಾವರಿ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಮುಖ್ಯ ಕಾರ್ಯದರ್ಶಿ ರಂಗನಾಥ್ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಎಸ್ ಎಂ ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ ಎಚ್ ಮುನಿಯಪ್ಪ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ, ನಡೆಸುವವರಿದ್ದಾರೆ.
ನಾನೂ ಮಂಡ್ಯ ಭಾಗದವನು, ಕಾವೇರಿ ಸಮಸ್ಯೆ ನನಗೆ ಚೆನ್ನಾಗಿ ತಿಳಿದಿದೆ. ಪ್ರಧಾನಿಯವರನ್ನು ಭೇಟಿ ಮಾಡಿ ವಸ್ತು ಸ್ಥಿತಿ ವಿವರಿಸುತ್ತೇನೆ ಎಂದು ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ಹೇಳಿಕೆ ನೀಡಿದ್ದಾರೆ. ಸಚಿವ ಮುನಿಯಪ್ಪ ಕೂಡಾ ಸಂಪೂರ್ಣ ಸಹಕಾರದ ಭರವಸೆ ನೀಡಿದ್ದಾರೆ.
ಮಂಗಳವಾರ (ಸೆ 18) ಸಂಜೆ ಬೊಮ್ಮಾಯಿ ಮತ್ತು ರಂಗನಾಥ್ ರಾಜ್ಯದ ಪರವಾಗಿ ವಾದಿಸುತ್ತಿರುವ ಎಸ್ ಎಸ್ ನಾರಿಮನ್ ಅವರನ್ನು ಭೇಟಿಯಾಗಲಿದ್ದಾರೆ.
ಸೆ19ರ ವರೆಗೆ ದಿನಕ್ಕೆ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕೆನ್ನುವ ಸುಪ್ರೀಂಕೋರ್ಟ್ ಡೆಡ್ ಲೈನ್ ನಾಳೆಗೆ ಮುಗಿಯಲಿದೆ.
ದೆಹಲಿಯಲ್ಲಿರುವ ಮುಖ್ಯಮಂತ್ರಿ ಶೆಟ್ಟರ್, ನಾವು ಎದುರಿಸುತ್ತಿರುವ ಬರ ಸಮಸ್ಯೆಯನ್ನು ಪ್ರಧಾನಿಗೆ ಮನದಟ್ಟು ಮಾಡುತ್ತೇವೆ. ಯಾವ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಗೌರಿ, ಗಣೇಶ ಹಬ್ಬದ ಶುಭಾಶಯಗಳೊಂದಿಗೆ ರಾಜ್ಯದ ಜನತೆಗೆ ಭರವಸೆ ನೀಡಿದ್ದಾರೆ.
ಮಂಡ್ಯದಲ್ಲಿ ಈಗಾಗಲೇ ಕಾವೇರಿ ವಿಚಾರಕ್ಕಾಗಿ ಕಳೆದ ವಾರ ಯಶಸ್ವಿ ಬಂದ್ ನಡೆದು ಹೋಗಿದೆ. ಹಿರಿಯ ಮುಖಂಡ ಮಾದೇಗೌಡ (80 ವರ್ಷ) ನೇತೃತ್ವದ ಹೋರಾಟಕ್ಕೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿವೆ. ರೆಬೆಲ್ ಸ್ಟಾರ್ ಅಂಬರೀಶ್ ಕೂಡಾ ಆಖಾಡಕ್ಕೆ ಇಳಿದಿದ್ದಾರೆ.
ಮನಮೋಹನ್ ಸಿಂಗ್ ಪ್ರಧಾನಿಯಾದ ಮೇಲೆ ಮೊದಲ ಬಾರಿಗೆ ಈ ಸಭೆ ನಡೆಯಲಿದೆ. ಆರ್ಥಿಕ ತಜ್ಞರಾಗಿರುವ ಮೃದು ಮತ್ತು ಮಿತ ಭಾಷೆ ಪ್ರಧಾನಿಯವರು ದಶಕಗಳಿಂದ ಪರಿಹಾರ ಕಾಣದ ಈ ಅಂತರ್ ರಾಜ್ಯ ನೀರಿನ ಸಮಸ್ಯೆಗೆ ಯಾವ ರೀತಿ ಸ್ಪಂದಿಸುತ್ತಾರೆ ಎನ್ನುವುದು ಕುತೂಹಲ.
ಈ ಸಭೆಯಲ್ಲಿ ಬರುವ ಫಲಿತಾಂಶ ಪಕ್ಷಪಾತಿಯಾಗದಿರಲಿ, ನಮ್ಮ ರೈತರ ಪಾಲಿಗೆ ಮರಣಶಾಸನ ವಾಗದಿರಲಿ ಎನ್ನುವುದು ಕನ್ನಡಿಗರ ಆಶಯ.












Click it and Unblock the Notifications