ಬಿಬಿಎಂಪಿ ಕಸ ವಿಂಗಡನೆಗೆ ಕೈಹಾಕಿ ಪುಣ್ಯ ಕಟ್ಟಿಕೊಳ್ಳಿ!
ಬೆಂಗಳೂರು, ಸೆ.17: ಇತ್ತೀಚೆಗೆ ತನ್ನನ್ನು ಇನ್ನಿಲ್ಲದಂತೆ ಕಾಡಿ, ಕಾಲಕಸವಾಗಿಸಿದ್ದ ಕಸಕ್ಕೆ ಮುಕ್ತಿ ನೀಡಲು ಬೆಂಗಳೂರು ಮಹಾನಗರ ಪಾಲಿಕೆ (BBMP) ಬಯಸಿದೆ. ಮನೆಯಲ್ಲಿಯೇ ಕಸ ವಿಂಗಡಿಸುವ ಸಂಬಂಧ BBMP ಅಧಿಸೂಚನೆ ಹೊರಡಿಸಿದೆ.
ಆದರೆ ತಕ್ಷಣಕ್ಕೆ ದಂಡದ ಭೀತಿ ಹುಟ್ಟಿಸಿಲ್ಲವಾದರೂ ಅ.1 ರಿಂದ ಕಸ ವಿಂಗಡಿಸುವ ನಿಯಮ ಕಡ್ಡಾಯವಾಗಿ ಜಾರಿಗೆ ತಂದಿದೆ. ಈ ಸಂಬಂಧ ರಾಜಧಾನಿಯ ಜನರಲ್ಲಿ ಜಾಗೃತಿ ಮೂಡಿಸಲು ದಿನಪತ್ರಿಕೆಗಳಲ್ಲಿ ಇಂದು ಪುಟಗಟ್ಟಳೆ 'ಸಾರ್ವಜನಿಕ ಪ್ರಕಟಣೆ' ಜಾಹೀರಾತು ನೀಡಿದೆ.

ನಿಯಮದ ನೀತಿಪಾಠ ? ಮನೆಯಲ್ಲಿ ಹಸಿ ಮತ್ತು ಒಣ ಕಸ ವಿಂಗಡಿಸಬೇಕು. ಪಾಲಿಕೆಯ ಪೌರ ಕಾರ್ಮಿಕರಿಗೆ ಕಸವನ್ನು ನೇರವಾಗಿ ಹಸ್ತಾಂತರಿಸಬೇಕು. ಮನೆ ಮುಂದೆ ಕವರುಗಳಲ್ಲಿ, ಡಸ್ಟ್ ಬಿನ್ ಗಳಲ್ಲಿ ಇಡುವಂತಿಲ್ಲ.
ಪ್ಲಾಸ್ಟಿಕ್ ಬೇರ್ಪಡಿಸಿ ಕಸ ನೀಡಬೇಕು. ಪ್ರತಿ ನಿತ್ಯ ಹಸಿ ಕಸವನ್ನು ಮತ್ತು ವಾರಕ್ಕೊಮ್ಮೆ ಒಣ ಕಸವನ್ನು ಸಂಗ್ರಹಿಸಲಾಗುವುದು. ಖಾಲಿ ನಿವೇಶನಗಳಲ್ಲಿ ಕಸ ಸುರಿಯುವಂತಿಲ್ಲ. ಈ ನಿಟ್ಟಿನಲ್ಲಿ ಬೆಂಗಳೂರಿಗರು ಬಿಬಿಎಂಪಿ ಕಸ ವಿಂಗಡನೆಗೆ ಕೈಹಾಕಿ ಪುಣ್ಯ ಕಟ್ಟಿಕೊಳ್ಳಲಿ ಎಂದು ಆಶಿಸಲಾಗಿದೆ.
ಪ್ರಜ್ಞಾವಂತ ನಾಗರಿಕನನ್ನು ಎಚ್ಚರಿಸಿರುವ ಪಾಲಿಕೆಯು ಕಸ ವಿಂಡಗಣೆ ಬಗ್ಗೆ 'ಸಾರ್ವಜನಿಕ ಪ್ರಕಟಣೆ' ಜಾಹೀರಾತಿನಲ್ಲಿ ಸಾದ್ಯಂತವಾಗಿ ವಿವರಿಸಿದೆ. ಒಮ್ಮೆ ಜಾಹೀರಾತನ್ನು ನೋಡಿ. ತಪ್ಪದೆ ಅಲ್ಲಿರುವ ನಿಯಮಗಳನ್ನು ಪಾಲಿಸಿ.
ಕಿವಿಯ ಮೇಲೆ ಲಾಲ್ ಬಾಗ್ : ಆದರೆ ಕಸ ಸಂಗ್ರಹಿಸುವವರಿಗೆ ತಿಂಗಳಿಗೆ 30-40 ನೀಡುವ ಅಲಿಖಿತ ನಿಯಮ ಜಾರಿಯಲ್ಲಿರುತ್ತದಾ? ಎಂದು BBMPಯನ್ನು ಕೇಳಿದರೆ, ಹೌದಾ? ನೀವು ಕಸ ಎತ್ತೋರಿಗೆ ಅಷ್ಟೆಲ್ಲ ದುಡ್ಡು ಕೊಡ್ತೀರಾ? ನಮ್ಗೆ ಗೊತ್ತೇ ಇಲ್ಲ ಅಲ್ರೀ' ಎಂದು ನಮ್ಮ ವಿಶಾಲ ಕಿವಿಯ ಮೇಲೆ ಅನಾಮತ್ತಾಗಿ ಇಡೀ ಲಾಲ್ ಬಾಗ್ ಅನ್ನೇ ಎತ್ತಿಡುತ್ತದೆ.












Click it and Unblock the Notifications