ಅಂಬೇಡ್ಕರ್ ಪ್ರತಿಮೆಯಿಂದ ತೆವಳುತ್ತಿರುವ ಮೆಟ್ರೋ

ಅಂಬೇಡ್ಕರ್ ಅವರ ಪುತ್ಥಳಿಯನ್ನು ಸ್ಥಳಾಂತರಿಸಲು ದಲಿತ ಸಂಘರ್ಷ ಸಮಿತಿಯಿಂದ ಭಾರೀ ಪ್ರತಿರೋಧ ಬಂದ ಕಾರಣ ಸರಕಾರ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ನಿಗಮಕ್ಕೆ ಅನುಮತಿ ನೀಡಲು ಹಿಂದುಮುಂದು ನೋಡುತ್ತಿದೆ. ಯೋಜನೆ ಮುಗಿಯುವುದು ತಡವಾದರೆ ಎಷ್ಟು ಹೆಚ್ಚು ಹಣ ಭರಿಸಬೇಕಾಗುತ್ತದೆ ಎಂಬ ಬಗ್ಗೆ ಇನ್ನೂ ನಿಖರವಾದ ಅಂಕಿಅಂಶಗಳು ದಕ್ಕಿಲ್ಲ.
ಫೇಸ್ 1ರ ಯೋಜನೆಗೆ 11,609 ಕೋಟಿ ರು. ಅಂದಾಜು ಮಾಡಲಾಗಿದ್ದು, ಯೋಜನೆ ಇನ್ನೂ ತಡವಾದರೆ ಖಂಡಿತ ಹೆಚ್ಚಿನ ಹಣವನ್ನು ವ್ಯಯಿಸಬೇಕಾಗುತ್ತದೆ ಎಂದು ಹೇಳಿರುವ ಬಿಎಂಆರ್‌ಸಿಎಲ್ ನಿರ್ವಾಹಕ ನಿರ್ದೇಶಕ ಎನ್. ಸಿವಸೈಲಮ್ ಅವರು, ಕಾಮಗಾರಿ ನಡೆಸುತ್ತಿರುವ ಪ್ರಕ್ರಿಯೆ ಹಿಂದಿಗಿಂತ ವಿಭಿನ್ನವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಐಐಟಿ ಮದ್ರಾಸ್‌ನ ಸಿವಿಲ್ ಇಂಜಿನಿಯರಿಂದ ವಿಭಾಗ, ಮೆಟ್ರೋ ಕಾಮಗಾರಿಗೆ ಯಾವುದೇ ವ್ಯತ್ಯಯವಾಗದಂತೆ ಅಂಬೇಡ್ಕರ್ ಅವರ ಪುತ್ಥಳಿಯನ್ನು ಸೂಕ್ತ ಜಾಗಕ್ಕೆ ಸ್ಥಳಾಂತರಿಸುವ ಕುರಿತಂತೆ ಒಂದು ವರದಿಯನ್ನು ನೀಡಿದೆ. ಆದರೆ, ಸರಕಾರದ ನಿರ್ಲಕ್ಷ್ಯದಿಂದ ಬೇಸತ್ತಿರುವ ಬಿಎಂಆರ್‌ಸಿಎಲ್ ಸರಕಾರದ ಅನುಮತಿಗೆ ಕಾಯದೆ ಕಾಮಗಾರಿ ಮುಂದುವರಿಸಲು ನಿರ್ಧರಿಸಿದೆ. ಇದು ಮತ್ತಷ್ಟು ಸಂಘರ್ಷಕ್ಕೆ ಎಡೆಮಾಡುವ ಸಾಧ್ಯತೆಯೂ ಇದೆ.
ಸದ್ಯಕ್ಕೆ ಅಂಬೇಡ್ಕರ್ ಅವರ ಮೂರ್ತಿಯನ್ನು ಲೋಹಗಳಿಂದ ಸಂಪೂರ್ಣವಾಗಿ ಮುಚ್ಚಿ, ಮೆಟ್ರೋ ಕಾಮಗಾರಿ ನಡೆಯುವಾಗ ಯಾವುದೇ ಧಕ್ಕೆಯಾಗದಂತೆ ಮುಂದುವರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. ಆದರೆ, ಮೆಟ್ರೋ ಕಾಮಗಾರಿ ತೀವ್ರಗತಿಯಿಂದ ನಡೆಯಬೇಕಿದ್ದರೆ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಳಾಂತರಿಸುವುದೇ ಅತ್ಯುತ್ತಮವಾದ ಮಾರ್ಗ ಎಂದು ಸಿವಸೈಲಮ್ ಅವರು ಅಭಿಪ್ರಾಯ ಪಟ್ಟಿದ್ದಾರೆ.












Click it and Unblock the Notifications