ಕೆಎಸ್ಸಾರ್ಟಿಸಿ ಬಂದ್ : ಸರ್ಕಾರದ ಭರವಸೆ ಏನು?

ಸಾರಿಗೆ ಸಿಬ್ಬಂದಿಗಳ ವೇತನ ಪರಿಷ್ಕರಣೆಯನ್ನು ಪ್ರತಿ ನಾಲ್ಕು ವರ್ಷಕ್ಕೆ ಒಂದು ಸಾರಿಯಂತೆ ಮಾಡಲಾಗುತ್ತಿದೆ. ಅದರಂತೆ, ಆಗಸ್ಟ್ ತಿಂಗಳ ವೇತನದಿಂದಲೇ ಜಾರಿಗೆ ಬರುವಂತೆ ಅನುಷ್ಠಾನಕ್ಕೆ ತರಲಾಗಿದೆ. ವೇತನ ಪರಿಷ್ಕರಣೆ ಸಂಬಂಧ ಸರ್ಕಾರದ ನಿರ್ದೇಶನದ ಅನ್ವಯ ಶೇ 10ರಷ್ಟು ಮಾತ್ರ ಹೆಚ್ಚಳ ಮಾಡಲು ಅವಕಾಶವಿದೆ.
* ಮೂಲ ವೇತನದಲ್ಲಿ ಆಗಿರುವ ಹೆಚ್ಚಳ ಮತ್ತು ದಿನಾಂಕ 01.04.2012ರಂತೆ ನೌಕರರು ಪಡೆಯುತ್ತಿದ್ದ ಶೇಕಡ 76.75 ತುಟ್ಟಿಭತ್ಯೆಯನ್ನು ಮೂಲವೇತನದ ತುಟ್ಟಿಭತ್ಯೆ ಎಂದು ನಿಗದಿಪಡಿಸಲಾಗಿದೆ.
* ಬೆಂಗಳೂರು ಕೇಂದ್ರ ಸ್ಥಾನದ ಚಾಲಕರ ಸೇವಾ ಅನುಗುಣವಾಗಿ ಕನಿಷ್ಠ 3000 ರು ನಿಂದ 7200 ರುವರೆಗೆ ವೇತನ ಹೆಚ್ಚಳ ಪಡೆಯಲಿದ್ದಾರೆ. ಕ್ರಮವಾಗಿ ಕನಿಷ್ಠ ಶೇಕಡ 20 ರಿಂದ ಗರಿಷ್ಠ ಶೇಕಡ 22ರಷ್ಟು ವೇತನ ಹೆಚ್ಚಳ ಆಗಲಿದೆ.
* ನಿರ್ವಾಹಕರು/ತಾಂತ್ರಿಕ ಸಹಾಯಕರು ಕನಿಷ್ಠ ರು. 2800 ದಿಂದ ಗರಿಷ್ಠ ರು.5100ರವರೆಗೆ ವೇತನ ಹೆಚ್ಚಳ ಪಡೆಯಲಿದ್ದಾರೆ. ಕ್ರಮವಾಗಿ ಕನಿಷ್ಠ ಶೇಕಡ 19 ರಿಂದ ಗರಿಷ್ಠ ಶೇಕಡ 21 ರಷ್ಟು ವೇತನ ಹೆಚ್ಚಳವಾಗಲಿದೆ.
* ರಾಜ್ಯದ ಇತರೆಡೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕನಿಷ್ಠ ರು.2200 ದಿಂದ ಗರಿಷ್ಠ ರು.5300 ರವರೆಗೆ ಮತ್ತು ನಿರ್ವಾಹಕರು/ ತಾಂತ್ರಿಕ ಸಹಾಯಕರು ಕನಿಷ್ಠ ರು.2100ದಿಂದ ಗರಿಷ್ಠ ರು.3800 ವರೆಗೆ ವೇತನ ಹೆಚ್ಚಳವನ್ನು ಪಡೆಯಲಿದ್ದು, ಸರಾಸರಿ ಶೇಕಡ 16 ದಿಂದ 17 ರಷ್ಟು ವೇತನ ಹೆಚ್ಚಳ ಆಗಿರುತ್ತದೆ.
ರಾಜ್ಯ ಕಾರ್ಮಿಕ ಆಯುಕ್ತರು/ಸಂಧಾನ ಅಧಿಕಾರಿಗಳ ಸಮ್ಮುಖದಲ್ಲಿ ಕೈಗಾರಿಕಾ ವಿವಾದ ಕಾಯಿದೆ ಸೆಕ್ಷನ್ 12(3) ಅಡಿಯಲ್ಲಿ ಒಪ್ಪಂದ ಮಾಡಿಕೊಂಡು ವೇತನ ಪರಿಷ್ಕರಣೆಯನ್ನು ಅನುಷ್ಠಾನಕ್ಕೆ ತರಲಾಗಿದೆ.
13.09.2012ರಂದು ಕರೆ ನೀಡಿರುವ ಅನಿರ್ದಿಷ್ಟಾವಧಿ ಮುಷ್ಕರವು ಕೈಗಾರಿಕಾ ವಿವಾದಗಳ ಕಾಯಿದೆಯ ಸೆಕ್ಷನ್ 22 ರ ಉಲ್ಲಂಘನೆ ಆಗುತ್ತದೆ ಹಾಗೂ ಸೆಕ್ಷನ್ 24ರ ಅನ್ವಯ ಕಾನೂನು ಬಾಹಿರ ಮುಷ್ಕರ ಎಂದು ಪರಿಗಣಿಸಲ್ಪಟ್ಟಿದೆ.
ವೇತನ ಎಲ್ಲಿಂದ ಸಿಗುತ್ತದೆ?: ಜನಸಾಮಾನ್ಯರಿಂದ ಟಿಕೆಟ್ ದರದ ಮೂಲಕ ಬರುವ ಆದಾಯದ ಮೂಲಕವೇ ಸುಮಾರು 1,08,000 ನೌಕರರಿಗೆ ವೇತನ ಮತ್ತು ಇತರೆ ಸೇವಾ ಸೌಲಭ್ಯಗಳನ್ನು ಸಾರಿಗೆ ನಿಗಮ ನೀಡುತ್ತಿದೆ. ಹಾಗಾಗಿ ಜನ ಸಾಮಾನ್ಯರಿಂದ ಬದುಕುತ್ತಿರುವ ಸಾರಿಗೆ ನೌಕಕರು ಈಗ ವೇತನ ಪರಿಷ್ಕರಣೆಗಾಗಿ ಮುಷ್ಕರ ಹೂಡಿದರೆ, ಅದರ ಪರಿಣಾಮ ನೇರವಾಗಿ ಜನ ಸಾಮಾನ್ಯರ ಮೇಲೆ ಆಗುತ್ತದೆ.
ಬರ ಪೀಡನೆಗೆ ರಾಜ್ಯ ಸಿಲುಕಿರುವಾಗ ಜನ ಸಾಮಾನ್ಯರ ಮೇಲೆ ಟಿಕೆಟ್ ದರ ಏರಿಕೆ ಹೊರೆ ಹಾಕಲು ಸಾಧ್ಯವಿಲ್ಲ. ಹೀಗಾಗಿ ಸಾರ್ವಜನಿಕ ಹಿತದೃಷ್ಟಿಯಿಂದ ಸದರಿ ಮುಷ್ಕರವನ್ನು ಕೈ ಬಿಡಬೇಕೆಂದು ಮನವಿ ಮಾಡಲಾಗಿದೆ.
ಇಂತಿ
* ಜಗದೀಶ್ ಶೆಟ್ಟರ್, ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ
* ಆರ್ ಅಶೋಕ, ಉಪ ಮುಖ್ಯಮಂತ್ರಿಗಳು, ಗೃಹ ಮತ್ತು ಸಾರಿಗೆ ಸಚಿವರು,












Click it and Unblock the Notifications