ಬಾಂಗ್ಲಾ ವಲಸಿಗರಿಂದ 40 ಲಕ್ಷ ಖೋಟಾ ನೋಟು ವಶ

ಜತೆಗೆ, ಬಂಧಿತ ಬಾಂಗ್ಲಾ ಯುವಕರು ರೌಡಿಗಳು ಮತ್ತು ಸಮಾಜ ಘಾತುಕ ಶಕ್ತಿಗಳಿಗೆ ವಿದೇಶಿ ನಿರ್ಮಿತ ಸ್ಟೆನ್ ಗನ್ ಸಹಿತ ನಾನಾ ನಮೂನೆಯ ಮಾರಕಾಸ್ತ್ರ ಪೂರೈಸುತ್ತಿದ್ದರು. ಬಂಧಿತರಿಂದ 500 ಮತ್ತು 1000 ರೂಪಾಯಿ ಮೌಲ್ಯದ ಒಟ್ಟು 40 ಲಕ್ಷ ರೂಪಾಯಿ ಮೌಲ್ಯದ ಖೋಟಾ ನೋಟು, 3 ಕಾರ್ಬೈಟ್ ಸ್ಟೆನ್ ಗನ್, 6 ಪಿಸ್ತೂಲು, ಹಾಗೂ 60 ಗುಂಡುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಸಂಪಂಗಿರಾಮನಗರದ ಒಂದು ಲಾಡ್ಜ್ ನಲ್ಲಿ ಅಡಗಿದ್ದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಗಳನ್ನು 14 ದಿನ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಗುರಿಪಡಿಸಿದ್ದಾರೆ. ಸಂಪಂಗಿರಾಮನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕರಾಚಿ ಸರಕಾರಿ ಮುದ್ರಣಾಲಯದಲ್ಲಿ ಖೋಟಾ ನೋಟು ಪ್ರಿಂಟ್: ಆರೋಪಿಗಳಿಂದ ವಶಪಡಿಸಿಕೊಂಡಿರುವ ಖೋಟಾ ನೋಟಿಗೆ ಪಾಕಿಸ್ತಾನವೇ ಮೂಲವಾಗಿದೆ. ಪಾಕ್ ಗೂಢಚರ ಸಂಸ್ಥೆ ಐಎಸ್ಐ ಬಾಂಗ್ಲಾ ವಲಸಿಗರ ಮೂಲಕ ಖೋಟಾ ನೋಟನ್ನು ಭಾರತದೊಳಕ್ಕೆ ಸಾಗಿಸಿದೆ. ಕರಾಚಿಯಲ್ಲಿರುವ ಸರಕಾರಿ ಮುದ್ರಣಾಲಯದಲ್ಲಿ ಖೋಟಾ ನೋಟು ಮುದ್ರಣವಾಗಿರುವ ಶಂಕೆ ವ್ಯಕ್ತವಾಗಿದೆ.
ಮೇಡ್ ಇನ್ ಚೀನಾ ಸ್ಟೆನ್ ಗನ್: ಬಂಧಿತರಿಂದ ವಶಪಡಿಸಿಕೊಂಡಿರುವ ಸ್ಟೆನ್ ಗನ್ ಗಳ ಮೇಲೆ Made in China ಎಂಬ ಮುದ್ರೆ ಇದೆ. ಈ ಸ್ಟೆನ್ ಗನ್ನುಗಳು ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕೆ ಪೂರೈಕೆಯಾಗಿದ್ದು, ಅಲ್ಲಿಂದ ಭಾರತದೊಳಕ್ಕೆ ಕಳ್ಳಸಾಗಣೆ ಮಾಡಿರುವ ಸಾಧ್ಯತೆ ಇದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದಿಂದ ವಲಸೆ ಬಂದಿರುವ ರೆಹಮಾನ್ (32), ಮಾಜಿದ್ (26), ದಿವಾಣ್ ಹರ್ಮಿತ್ (26), ಸಂತೂರ್ ಸಿಂಗ್ (21), ರಂಜಿತ್ (26), ಪ್ರತೀಕ್ (28), ಬೆಂಗಳೂರು ಮೂಲದ ಬಾಲು (34), ತಮಿಳುನಾಡಿನ ಧರ್ಮಾವರಂ ನಿವಾಸಿ ಸಾಂಬಶಿವ (35) ಹಾಗೂ ಮೋಹನ್ (34) ಬಂಧಿತರು.
ಬೆತ್ತನಗೆರೆಗೂ ಶಸ್ತ್ರಾಸ್ತ್ರ ಪೂರೈಸಿದ್ದರು: ಸಿಕ್ಕಿಬಿದ್ದಿರುವ ಆರೋಪಿಗಳ ಜತೆ ನಂಟು ಹೊಂದಿರುವ ಸಮಾಜಘಾತುಕ ಶಕ್ತಿಗಳ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ. ಈಚೆಗೆ ಎನ್ ಕೌಂಟರಿನಲ್ಲಿ ಸತ್ತ ರೌಡಿ ಬೆತ್ತನಗೆರೆ ಸೀನ, ಜೆಸಿಬಿ ನಾರಾಯಣ, ಸೈಲೆಂಟ್ ಸುನೀಲ, ಬೆತ್ತನಗೆರೆ ಶಂಕರ, ಬಾಲಾಜಿ, ಕವಳ ಸೇರಿದಂತೆ ನಗರದ ಕುಖ್ಯಾತ ಪಾತಕಿಗಳಿಗೆ ಬಂಧಿತ ಆರೋಪಿಗಳು ಶಸ್ತ್ರಾಸ್ತ್ರ ಪೂರೈಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications