ಹಫ್ತಾ ವಸೂಲಿಗೆ ಬಂದ ಇಬ್ಬರು ರೌಡಿಗಳ ಶೂಟೌಟ್

ಮಾಗಡಿ ಬಳಿಯ ಸೋಲೂರು ಬಳಿಯ ವಡ್ಡರಹಳ್ಳಿಯಲ್ಲಿ ಭಾನುವಾರ ರಾತ್ರಿ 9 ಗಂಟೆಯಲ್ಲಿ ಈ ಘಟನೆ ನಡೆದಿದೆ. ಕುಖ್ಯಾತ ರೌಡಿ ಬೆತ್ತನಗೆರೆ ಶಂಕರನ (ಬೆತ್ತನಗೆರೆ ಸೀನನ ಕಡು ವೈರಿ) ಬಿಡುಗಡೆಗಾಗಿ ಹಫ್ತಾ ವಸೂಲಿ ಮಾಡಲು ಹೋಗಿದ್ದ ಅವನ ಸಹಚರರ ಮೇಲೆ ಕೃಷಿಕ ಶಿವಣ್ಣ ಅವರು ಗುಂಡು ಹಾರಿಸಿದಾಗ ಸಿದ್ದರಾಜು ಮತ್ತು ಸುನಿಲ್ ಎಂಬ ರೌಡಿಗಳು ಗುಂಡೇಟಿಗೆ ಬಲಿಯಾಗಿದ್ದಾರೆ.
ನಿರಂತರ ಅಪರಾಧ ಕೃತ್ಯಗಳಿಂದ ಬೇಸತ್ತು, ಶಾಂತಿ ಬಯಸುತ್ತಿದ್ದ ಬೆತ್ತನಗೆರೆ ನಿವಾಸಿಗಳು ಕುಖ್ಯಾತ ರೌಡಿಯೊಬ್ಬನ ಎನ್‌ಕೌಂಟರ್‌ನಿಂದ ನೆಮ್ಮದಿ ಕಂಡುಕೊಳ್ಳುವಷ್ಟರಲ್ಲಿ ಶಂಕರನ ಸಹಚರರ ಗೂಂಡಾ ವರ್ತನೆಯಿಂದ ಮತ್ತೆ ಭಯದಲ್ಲೇ ಬದುಕು ದೂಡುವಂತಾಗಿದೆ.
ಘಟನೆ ಸಂಬಂಧ ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರ್‌ವಾಲ್ ಡಿವೈಎಸ್‌ಪಿ ರಾಮಕೃಷ್ಣಪ್ಪ ಅವರು ಶಿವಣ್ಣನ ಮನೆಗೆ ತೆರಳಿ ಪರಿಶೀಲನೆ ನಡೆಸಿದರು.
ರೌಡಿಗಳು ದಾಳಿ ನಡೆಸಿದ್ದರಿಂದ ಆತ್ಮರಕ್ಷಣೆಗಾಗಿ ಶಿವಣ್ಣ ಗುಂಡು ಹಾರಿಸಿದ್ದಾರೆ. ಸೀನನೊಂದಿಗೆ ಅವರಿಗೆ ಅಷ್ಟೇನು ನಿಕಟ ಸಂಪರ್ಕವಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
'ಕಳವು, ದರೋಡೆ, ಜೀವಬೆದರಿಕೆ ಸೇರಿದಂತೆ ಸಿದ್ದರಾಜು ವಿರುದ್ಧ ಕೂದೂರು ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು.
ಸದ್ಯ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿರುವ ಶಂಕರ, ಸೀನನ ಎನ್‌ಕೌಂಟರ್ ನಂತರ ಜೈಲಿನಿಂದ ಹೊರಬರುವ ತವಕದಲ್ಲಿದ್ದನು. ಅದಕ್ಕಾಗಿ ಭಾನುವಾರ ಬೆಳಿಗ್ಗೆ ತನ್ನ ಸಹಚರನನ್ನು ಜೈಲಿಗೆ ಕರೆಸಿಕೊಂಡು ಮಾತುಕತೆ ನಡೆಸಿದ್ದಾನೆ ಎಂಬ ಮಾಹಿತಿ ಇದೆ' ಎಂದು ಪೊಲೀಸ್ ಮೂಲಗಳು ಹೇಳಿವೆ.
ರೌಡಿ ಸಿದ್ದರಾಜು ಐದು ಕಾರುಗಳಲ್ಲಿ ಸುಮಾರು ಮೂವತ್ತು ಮಂದಿ ಸಹಚರರೊಂದಿಗೆ ಹಫ್ತಾ ವಸೂಲಿ ಮಾಡಲು ವಡ್ಡರಹಳ್ಳಿಯಲ್ಲಿರುವ ಶಿವಣ್ಣ ಅವರ ತೋಟದ ಮನೆಗೆ ಹೋಗಿದ್ದ. ಈ ವೇಳೆ ಅವರ ನಡುವೆ ಜಗಳವಾಗಿದ್ದು, ಪರವಾನಿಗೆ ಪಡೆದಿದ್ದ ರಿವಾಲ್ವಾರ್‌ನಿಂದ ಶಿವಣ್ಣ ಗುಂಡು ಹಾರಿಸಿದ್ದಾರೆ. ಘಟನೆಯಲ್ಲಿ ಸಿದ್ದರಾಜು ಮತ್ತು ಸುನಿಲ್ ಎಂಬುವರು ಗುಂಡು ತಗುಲಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿದ್ದರಾಜು ಸಹಚರರು ಭಾನುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶಿವಣ್ಣ ಅವರ ಮನೆಗೆ ಹೋಗಿ ಹಣ ನೀಡುವಂತೆ ದಾಂದಲೆ ನಡೆಸಿದ್ದರು. ಆಗ ಮನೆಯಲ್ಲಿ ಶಿವಣ್ಣ ಇರಲಿಲ್ಲ. ಶಂಕರನ ಬಿಡುಗಡೆಗೆ 50 ಸಾವಿರ ಹಣ ನೀಡುವಂತೆ ಶಿವಣ್ಣನಿಗೆ ಹೇಳುವಂತೆ ಅವರ ಪತ್ನಿಗೆ ಬೆದರಿಕೆ ಹಾಕಿ ಹೋಗಿದ್ದರು. ಸಂಜೆ ಶಿವಣ್ಣ ಮತ್ತು ಅವರ ಮಗ ಮಣಿ ಮನೆಗೆ ಬಂದಾಗ ಅವರಿಗೆ ಈ ವಿಷಯ ಗೊತ್ತಾಯಿತು.
ರಾತ್ರಿ 8 ಗಂಟೆ ಸುಮಾರಿಗೆ ಶಿವಣ್ಣನಿಗೆ ಮತ್ತೆ ಕರೆ ಮಾಡಿದ ಸಿದ್ದರಾಜು, ಹಣ ಸಿದ್ದಪಡಿಸಿಕೊಳ್ಳುವಂತೆ ಹೇಳಿದ್ದ. 8.30ರ ಸುಮಾರಿಗೆ ಶಿವಣ್ಣ ಅವರ ಮನೆಗೆ ಬಂದ ದುಷ್ಕರ್ಮಿಗಳು ಹಣ ನೀಡುವಂತೆ ಬೆದರಿಕೆ ಹಾಕಿದರು. ಅಲ್ಲದೇ, ಮಾರಕಾಸ್ತ್ರಗಳಿಂದ ಶಿವಣ್ಣ ಅವರ ಮನೆಯ ಕಿಟಕಿ ಗಾಜುಗಳನ್ನು ಪುಡಿ ಪುಡಿ ಮಾಡಿದ್ದಾರೆ. ಅವರ ಕೃತ್ಯದಿಂದ ಕಾರು ಜಖಂಗೊಂಡಿದೆ. ಅಲ್ಲದೇ, ಕುರಿಗಳು ಮತ್ತು ಹಸುಗಳ ಮೇಲೂ ಕಲ್ಲು ತೂರಾಟ ನಡೆಸಿದರು ಎಂದು ಪೊಲೀಸರು ಮಾಹಿತಿ ನೀಡಿದರು.
ಅವರ ವರ್ತನೆಯಿಂದ ಆಕ್ರೋಶಗೊಂಡ ಶಿವಣ್ಣ, ರಿವಾಲ್ವಾರ್‌ನಿಂದ ಸಿದ್ದರಾಜು ಮೇಲೆ ಗುಂಡು ಹಾರಿಸಿದರು. ಘಟನೆಯಿಂದ ಭಯಭೀತರಾದ ಆತನ ಸಹಚರರು ಪರಾರಿಯಾಗಲು ಯತ್ನಿಸಿದರು. ಈ ವೇಳೆ ಶಿವಣ್ಣ ಹಾರಿಸಿದ ಮತ್ತೊಂದು ಗುಂಡು ಸುನಿಲ್‌ನ ದೇಹ ಸೇರಿತು. ರಕ್ತಸ್ರಾವದಿಂದ ಆತ ಸ್ಥಳದಲೇ ಸಾವನ್ನಪ್ಪಿದನು.
ಶಿವಣ್ಣ ಅವರು ಕುದೂರಿನಿಂದ 30 ಕಿ ಮೀ ದೂರದಲ್ಲಿರುವ ವಡ್ಡರಹಳ್ಳಿಯ ತೋಟದ ಮನೆಯಲ್ಲಿ ಪತ್ನಿ ಮಕ್ಕಳೊಂದಿಗೆ ವಾಸವಾಗಿದ್ದಾರೆ. ಕುರಿ ಸಾಕಾಣೆ, ಪಶುಸಂಗೋಪನೆ ಮಾಡಿಕೊಂಡು ಗ್ರಾಮದಲ್ಲಿ ಪ್ರಗತಿಪರ ರೈತ ಎಂದು ಗುರುತಿಸಿಕೊಂಡಿದ್ದರು












Click it and Unblock the Notifications