ಸಿಗರೇಟ್ ಸೇದಿದ್ದಕ್ಕೆ ಏಟು ತಿಂದ ವಿದ್ಯಾರ್ಥಿ ಆತ್ಮಹತ್ಯೆ

ಏನಾಯಿತೆಂದರೆ, ಶಿಕ್ಷಕರ ದಿನಾಚಣೆಯ ಮಾರನೆಯ ದಿನ ಇಲ್ಲಿನ ದೀನನಾಥ್ ಜೂನಿಯರ್ ಕಾಲೇಜಿನ 12ನೆ ತರಗತಿಯ ವಿದ್ಯಾರ್ಥಿ ಅಕ್ಷಯ್ ಲೋಖಂಡೆ ಧೂಮಪಾನ ಮಾಡುತ್ತಿದ್ದ. ಇದನ್ನು ಕಣ್ಣಂಚಿನಲ್ಲೇ ಕಂಡ ಒಬ್ಬ ಶಿಕ್ಷಕಿ ಅವನನ್ನು ಹತ್ತಿರ ಕರೆದು, ಬುದ್ಧಿವಾದ ಹೇಳಿದರು. ಅಷ್ಟೇ ಅಲ್ಲ ಮನೆಯವರಿಗೂ ಮಾಹಿತಿ ನೀಡಿದರು. ಇದರಿಂದ ಅವಮಾನಗೊಂಡ ಸದರಿ ವಿದ್ಯಾರ್ಥಿ ಸಾವಿಗೆ ಶರಣಾಗಿದ್ದಾನೆ.
ವಿದ್ಯಾರ್ಥಿಯು ಕಾಲೇಜಿನ ಆವರಣದಲ್ಲೇ ಧೂಮಪಾನ ಮಾಡುತ್ತಿರುವುದು ಮೊದಲು ಶಿಕ್ಷಕಿಯ ಕಣ್ಣಿಗೆ ಬಿತ್ತು. ಅವರೋ ಸೀದಾ ಆಡಳಿತ ಮಂಡಳಿಗೆ ದೂರು ನೀಡಿದರು. ನಂತರ ಶಾಲೆಯ ಹಿರಿಯರು ಸದರಿ ವಿದ್ಯಾರ್ಥಿಯ ಪೋಷಕರನ್ನು ಕರೆಸಿ ಅವನ ಬಗ್ಗೆ ಹೀಗೀಗೆ ಎಂದು ಮಾಹಿತಿ ನೀಡಿದ್ದಾರೆ.
ಅದೇ ವೇಳೆ ಶಿಕ್ಷಕರೊಬ್ಬರು ಅವನಿಗೆ ಬಾರಿಸಿದ್ದಾರೆ. ಇದರಿಂದ ಅವನಿಗೆ ಎಲ್ಲಿ, ಏನು ಅವಮಾನವಾಯಿತೋ ಗುರುವಾರ ಸಾಯಂಕಾಲ ಸೀದಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಾಲೆಯ ಆಡಳಿತ ಮಂಡಳಿ ಅವಮಾನಿಸಿದ್ದೇ ತಮ್ಮ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವಾಗಿದೆ ಎಂದು ಆರೋಪಿಸಿ ಬಾಲಕನ ಕುಟುಂಬದವರು ಮತ್ತು ಸ್ನೇಹಿತರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸಿ, ಕಾಲೇಜಿನ ಪ್ರಿನ್ಸಿಪಾಲ್, ಶಿಕ್ಷಕರು ಮತ್ತು ಆಡಳಿತಾಧಿಕಾರಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ಆದರೆ ಪೋಷಕರ ಆರೋಪವನ್ನು ನಿರಾಕರಿಸಿರುವ ಕಾಲೇಜಿನ ಆಡಳಿತಾಧಿಕಾರಿ ತೃಪ್ತಿ ಘೋಶ್, ಕಾಲೇಜು ಸಿಬ್ಬಂದಿಯ ಮುಂದೆಯೇ ಪೋಷಕರಿಗೆ ಆತನ ಅಸಭ್ಯ ನಡವಳಿಕೆಗಳ ಕುರಿತು ತಿಳಿಸಲಾಗಿದ್ದು, ಪೋಷಕರು ಆರೋಪಿಸಿರುವಂತೆ ಆತನನ್ನು ಕಾಲೇಜಿನಿಂದ ಹೊರಹಾಕಿರಲಿಲ್ಲ ಎಂದಿದ್ದಾರೆ.












Click it and Unblock the Notifications