ಮೂಗು ಮುಚ್ಕೊಂಡು ಓಡಾಡ್ರಿ, ಮೋರಿ ಉಕ್ಕಿಹರಿಯುತ್ತಿದೆ

ವಾರ್ಡ್ ನಂ. 57 ಸಿ.ವಿ. ರಾಮನ್ ನಗರ ವಾರ್ಡ್‌ನಲ್ಲಿ ಬರುವ, ಬಿಇಎಂಎಲ್ ಗೇಟ್ ಬಳಿಯಿರುವ ಜಿಎಂ ಪಾಳ್ಯ(ಗರಕಮಾಂತ ಪಾಳ್ಯ)ದಲ್ಲಿ, ಈ ರಸ್ತೆಯ ಸುತ್ತಮುತ್ತ ವಾಸಿಸುತ್ತಿರುವ ಜನರು, ಆ ರಸ್ತೆಯಲ್ಲಿ ಅಡ್ಡಾಡುತ್ತಿರುವ ನಾಗರಿಕರು ದಿನನಿತ್ಯ ಅಕ್ಷರಶಃ ನರಕದಲ್ಲಿ ಅಡ್ಡಾಡುವಂತಾಗಿದೆ. ಜನರು ಮೂಗಿಗೆ ಕರ್ಚೀಫು ಕಟ್ಟಿಕೊಂಡು ಅಡ್ಡಾಡುತ್ತಿರುವುದು ಇಲ್ಲಿ ನಿತ್ಯಸತ್ಯ ದರ್ಶನ.
ಸಂಜೆ ಹೊತ್ತು ಅಲ್ಪವಿರಾಮ ತೆಗೆದುಕೊಳ್ಳುವ ಚರಂಡಿ ಬೆಳಗಿನ ಜಾವ ಮತ್ತೆ ತನ್ನ ವಿರಾಟ್‌ರೂಪ ತೋರುತ್ತದೆ. ಎರಡು ಹೆಜ್ಜೆ ಅಂತರದಲ್ಲಿ ಆಂಜನೇಯ ದೇವಸ್ಥಾನವಿದೆ, ಕೂಗಳತೆ ದೂರದಲ್ಲಿ ಸರಕಾರಿ ಶಾಲೆಯಿದೆ. ಮಕ್ಕಳು ಶಾಲೆ ಸೇರಲು ಆ ರಸ್ತೆಯ ಮುಖಾಂತರವೇ ಸಾಗಬೇಕು. ಕಾಲು ಇಡಲೂ ಜಾಗ ಇಲ್ಲದಂತೆ ಮೋರಿಯ ನೀರು ಆಕ್ರಮಿಸಿಕೊಂಡಾಗ ಮಕ್ಕಳು ಅದನ್ನು ದಾಟುವುದಾದರೂ ಎಂತು?
ಅಡ್ಡಾಡುವವರ ಗೋಳು ಒಂದು ರೀತಿಯದಾದರೆ, ದ್ವಿಚಕ್ರವಾಹನ ಚಾಲಕರು ರಸ್ತೆ ದಾಟುವಾಗ ಕಾಲು ಮೇಲೆತ್ತಿ ವಾಹನ ಚಲಿಸದಿದ್ದರೆ, ಹೊಲಸು ನೀರು ಅವರ ಪಾದ ಸ್ಪರ್ಶಿಸಿ ಪಾವನ ಮಾಡುವುದು ಗ್ಯಾರಂಟಿ. ಹಾಗೆಯೆ, ಆ ವಾಹನದ ಹಿಂದೆ ಯಾರಾದರೂ ಬರುತ್ತಿದ್ದರೆ ಅಥವಾ ಪಕ್ಕದಲ್ಲಿ ಯಾರಾದರೂ ಹೋಗುತ್ತಿದ್ದರೆ ಚರಂಡಿಯಿಂದ ಉಕ್ಕಿ ಬರುವ 'ಪವಿತ್ರ' ನೀರಿನ ಸಿಂಚನ. ಯಾರಿಗುಂಟು ಯಾರಿಗಿಲ್ಲ?
ಬಿಬಿಎಂಪಿಯ ವ್ಯಾಪ್ತಿಯಲ್ಲಿ ಬರುವ ಈ ವಾರ್ಡಿನ ಕಾರ್ಪೊರೇಟರ್ ಶ್ರೀಮತಿ ಸುಮಿತ್ರಾ ವಿಜಯಕುಮಾರ್. ಜಿಎಂ ಪಾಳ್ಯದಲ್ಲಿ ವಾಸಿಸುವ ನಾಗರಿಕರು ಅನೇಕ ದೂರುಗಳನ್ನು ನೀಡಿದ್ದರೂ ಈ ನರಕದಿಂದ ಮುಕ್ತಿ ಸಿಕ್ಕಿಲ್ಲ. ಇಂಥವರಿಗೆ ನಾವು ಮತವನ್ನಾದರೂ ಯಾಕೆ ಹಾಕಬೇಕಿತ್ತು ಎಂದು ವಾರ್ಡಿನ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಈ ವಾರ್ಡಿನಲ್ಲಿ ಮೂಲಭೂತ ಸೌಕರ್ಯಗಳೇ ಕಡಿಮೆ. ಸರಿಯಾದ ರಸ್ತೆಯಿಲ್ಲ, ನೀರಿಲ್ಲ, ಸ್ವಚ್ಛವಾದ ವಾತಾವರಣವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.
ಜಿಎಂ ಪಾಳ್ಯದ ನಿವಾಸಿಯಾಗಿರುವ, ಜಯನಗರದಲ್ಲಿ ಮೂರನೇ ಬ್ಲಾಕಿನಲ್ಲಿ ಕೆಲಸ ಮಾಡುತ್ತಿರುವ ವೆಂಕಟಪತಿ ರಾಜು ಅವರು ಹೇಳುವುದೇನೆಂದರೆ, ಸಿಮೆಂಟು ರಸ್ತೆಯ ನಟ್ಟನಡುವಿನಲ್ಲಿ ಮೋರಿ ಇರುವುದರಿಂದ ಪಾದಚಾರಿಗಳಿಗೆ ಭಾರೀ ತೊಂದರೆಯಾಗುತ್ತಿದೆ. ಮೊದಲೇ ಕುಡಿಯುವ ನೀರಿಗೂ ಇಲ್ಲಿ ಸಂಚಕಾರ, ಈಗ ರಸ್ತೆಗುಂಟ ಹರಿಯುವ ಹೊಲಸು ನೀರಿನಿಂದ ಇಲ್ಲಿ ಅಡ್ಡಾಡುವುದೇ ಅಸಾಧ್ಯವಾಗಿದೆ. ಕಾರ್ಪೊರೇಟರಿಗೆ ಆ ಹಣಮಪ್ಪನೇ ಬುದ್ಧಿ ಹೇಳಬೇಕು ಎಂದು ಕೆಂಡ ಕಾರುತ್ತಾರೆ.











Click it and Unblock the Notifications