
ಮೀಸಲಾತಿ: ರಾಜ್ಯಸಭೆಯಲ್ಲಿ ಮಾರಾಮಾರಿ
ಆದರೆ, ಸಮಾಜವಾದಿ ಪಕ್ಷದ ಸಂಸದರ ವಿರುದ್ಧ ತಿರುಗುಬಿದ್ದ ಬಹುಜನ ಸಮಾಜವಾದಿ ಪಕ್ಷದ ಸಂಸದರು ಬಾವಿಗಿಳಿದು ಕೈ ಕೈ ಮಿಲಾಯಿಸಿದ ಘಟನೆ ನಡೆದಿದೆ.
ಸಮಾಜವಾದಿ ಪಕ್ಷದ ನರೇಶ್ ಅಗರವಾಲ್ ಹಾಗೂ ಬಹುಜನ ಸಮಾಜವಾದ ಪಕ್ಷದ ಅವತಾರ್ ಸಿಂಗ್ ಅವರು ಕೈ ಕೈ ಮಿಲಾಯಿಸಿದ ಸಂಸದರಾಗಿದ್ದಾರೆ.
ಪರಿಶಿಷ್ಟ ಜಾತಿ-ವರ್ಗ ಹಾಗೂ ಇತರ ಹಿಂದುಳಿದ ವರ್ಗಗಳಿಗೆ ಉದ್ಯೋಗದಲ್ಲಿ ಮೀಸಲಾತಿಗೆ ನೀಡಲು ಉತ್ತರಪ್ರದೇಶದ ಸಮಾಜವಾದಿ ಪಕ್ಷ ಒಪ್ಪಿದರೂ, ಬಡ್ತಿಯಲ್ಲಿ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಸಮಾಜವಾದಿ ಪಕ್ಷ ಪ್ರತಿಪಾದಿಸುತ್ತಾ ಬಂದಿದೆ.
ರಾಜ್ಯಸಭೆಯಲ್ಲಿ ಪಕ್ಷದ ವರಿಷ್ಠ ಮುಲಾಯಂಸಿಂಗ್ ಯಾದವ್ ಮಾತನಾಡಿ, "ಇದು ಅಸಂವಿಧಾನಿಕವಾಗಿದೆ. ಮಸೂದೆ ಬಗ್ಗೆ ಚರ್ಚೆ ನಡೆಯದೆ ಅನುಮೋದನೆ ಪಡೆಯಲು ಹೊರಟಿರುವ ಯುಪಿಎ ಕ್ರಮ ಸರಿಯಿಲ್ಲ. ನಾವು ಸರ್ಕಾರದ ವಿರುದ್ಧ ಜನರ ಬಳಿ ನ್ಯಾಯ ಕೇಳುತ್ತೇವೆ. ಮಸೂದೆ ಮಂಡನೆ ಬಗ್ಗೆ ನಮ್ಮ ಪಕ್ಷವನ್ನು ಕೇಳುವ ಸೌಜನ್ಯ ಕೂಡಾ ಯುಪಿಎ ಬಳಿ ಇಲ್ಲ ಎಂದು ಹೇಳಿದ್ದಾರೆ.
ಆದರೆ, ಮಸೂಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಹುಜನ ಸಮಾಜವಾದಿ ಪಕ್ಷದ ವರಿಷ್ಠೆ ಮಾಯಾವತಿ, ತಾವು ಮಸೂದೆಯನ್ನು ಸ್ವಾಗತಿಸುತ್ತೇವೆ. ಅದಕ್ಕಾಗಿ ತಾವು ಬಹಳಷ್ಟು ಹೋರಾಡಿದ್ದೇವೆ. ಬಿಎಸ್ಪಿಯೇ ಈ ವಿಷಯವನ್ನು ಮೊದಲ ಬಾರಿಗೆ ರಾಜ್ಯಸಭೆಯಲ್ಲಿ ಎತ್ತಿತ್ತು. ಅದನ್ನನುಸರಿಸಿ ಸರಕಾರವು ಸರ್ವಪಕ್ಷ ಸಭೆಯೊಂದನ್ನು ನಡೆಸಲು ಒಪ್ಪಿತ್ತು' ಎಂದಿದ್ದಾರೆ.
ತಿದ್ದುಪಡಿ ಮಸೂದೆಯ ಪರ ಮತ ನೀಡುವಂತೆ ಅವರು ಎನ್‌ಡಿಎಯನ್ನು ವಿನಂತಿಸಿದ್ದಾರೆ. ಮಾಯಾವತಿ ಲೋಕಸಭೆಯ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ರನ್ನು ಭೇಟಿಯಾಗಿ ಈ ಮಸೂದೆಯು ಸದನದಲ್ಲಿ ಅಂಗೀಕಾರಗೊಳ್ಳಲು ಅನುಕೂಲವಾಗುವಂತೆ ಕಲ್ಲಿದ್ದಲು ಗಣಿ ಹಗರಣದ ಕುರಿತ ಬಿಜೆಪಿಯ ಪ್ರತಿಭಟನೆಯನ್ನು ಒಂದು ದಿನ ಮುಂದೂಡುವಂತೆ ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಸಂಪನ್ಮೂಲ ಖಾತೆ ರಾಜ್ಯ ಸಚಿವ ವಿ ನಾರಾಯಣ ಸ್ವಾಮಿ ಅವರು ಬುಧವಾರ(ಸೆ.5) ಮೇಲ್ಮನೆಯಲ್ಲಿ ಎಸ್ಸಿ/ಎಸ್ಟಿ ವರ್ಗಗಳಿಗೆ ಸರ್ಕಾರಿ ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನೀಡುವ ವಿವಾದಿತ ಮಸೂದೆಯನ್ನು ಮಂಡಿಸಿದರು. ಎಲ್ಲಾ ಸಂಸದರು ಈ ಮಸೂದೆಗೆ ಒಮ್ಮತ ಸೂಚಿಸುವಂತೆ ಯುಪಿಎ ಸರ್ಕಾರದ ಪರವಾಗಿ ಮನವಿ ಮಾಡಿಕೊಂಡರು.
ಅದರೆ, ರಾಜ್ಯಸಭೆಯಲ್ಲಿ ಸಮಾಜವಾದಿ ಹಾಗೂ ಬಹುಜನ ಸಮಾಜವಾದಿ ಪಕ್ಷದ ಸಂಸದರ ಮಾರಾಮಾರಿಯಿಂದ ಕಲಾಪ ಮುಂದೂಡಲಾಯಿತು. ಲೋಕಸಭೆಯ ಕಲಾಪ ಕೂಡಾ ಗುರುವಾರಕ್ಕೆ ಮುಂದೂಡಲಾಗಿದೆ.
ಕಲ್ಲಿದ್ದಲು ಹಗರಣ ನೆಪದಲ್ಲಿ ಈಗಾಗಲೇ 11 ದಿನಗಳ ಕಾಲ ಕಲಾಪ ನಡೆಯದೆ ಬರೀ ಪರಸ್ಪರ ಕೆಸರೆರೆಚಾಟದಲ್ಲೇ ಪಕ್ಷಗಳು ತೊಡಗಿದೆ. ಜನರ ದುಡ್ಡು ನೀರಿನಲ್ಲಿ ಹೋಮ ಮಾಡಿದಂತೆ ಆಗುತ್ತಿದೆ.