ವಿದ್ಯಾಪೀಠ ಸರ್ಕಲ್ ATMನಲ್ಲಿ 11ಲಕ್ಷ ದೋಚಿದ್ಯಾರು?

ATM ದೋಚಲಾಗಿದೆ ಎಂಬ ದೂರು ಬಂದಾಕ್ಷಣ ಹನುಮಂತನಗರ ಪೊಲೀಸ್ ಇನ್ಸ್ ಪೆಕ್ಟರ್ ವೆಂಕಟಸ್ವಾಮಿ ಸ್ಥಳಕ್ಕೆ ತೆರಳಿ ಎಲ್ಲ ಕೂಲಂಕಷ ತನಿಖೆ ನಡೆಸಿದ್ದಾರೆ. 'ಆದರೆ ಎಲ್ಲೂ ಯಾವುದೇ ಸುಳಿವು ಸಿಗಲಿಲ್ಲ, ಮೇಡಂ' ಎಂದು ಹನುಮಂತನಗರ ಇನ್ಸ್ ಪೆಕ್ಟರ್ ವರದಿ ನೀಡಿದ್ದನ್ನು ನೋಡಿ ದಕ್ಷಿಣ ಡಿಸಿಪಿ ಸೋನಿಯಾ ನಾರಂಗ್ ಅವರೂ ತಲೆಯ ಮೇಲೆ ಕೈಹೊತ್ತು ಕುಳಿತರು.
ಆದರೆ ಏನು ಮಾಡೋದು ಕರ್ತವ್ಯ ನಿಭಾಯಿಸಲೇಬೇಕು. ತಕ್ಷಣ ತಮ್ಮ ಪೊಲೀಸ್ ಬುದ್ಧಿ ಓಡಿಸಿದವರೇ 'ಆ ATMಗೆ ಹಣ ತುಂಬಿದವರನ್ನೇ ಎತ್ಹಾಕ್ಕೊಂಡು ಬನ್ನಿ. ನಾನೇ ಸ್ವಲ್ಪ ವಿಚಾರಿಸುವೆ' ಎಂದು ಆಜ್ಞಾಪಿಸಿದ್ದಾರೆ.
ಅದರಂತೆ ಪೊಲೀಸರು ATM ಯಂತ್ರಕ್ಕೆ ಹಣ ತುಂಬುವ ಸರಣಿಯಲ್ಲಿ ಎರಡನೆಯ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 28 ವರ್ಷದ ಎನ್ ಶಿವರಾಜ್ ಎಂಬ ಯುವಕನನ್ನು ಕರೆತಂದು ಮೇಡಂ ಮುಂದೆ ನಿಲ್ಲಿಸಿದ್ದಾರೆ.
ಖಡಕ್ ಅಧಿಕಾರಿ ಸೋನಿಯಾ ಮೇಡಂರನ್ನು ನೋಡಿದ್ದೇ ತಡ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಎನ್ ಜಿ ಕೊಪ್ಪಲು ಗ್ರಾಮದ ಶಿವರಾಜ ತಡಬಡಾಯಿಸಿದ್ದಾನೆ. ವಿದ್ಯಾಪೀಠ ಸರ್ಕಲಿನ ಎಟಿಎಂ ಸಮೀಪವೇ ಶ್ರೀನಿವಾಸನಗರದಲ್ಲಿ ಮನೆ ಮಾಡಿಕೊಂಡಿರುವ ಶಿವರಾಜ ಶೋಕಿಲಾಲನಾಗಿದ್ದ. ದಿಢೀರ್ ಹಣ ಮಾಡಿ ಮೋಜಿನ ಜೀವನ ನಡೆಸಲು ಹೊಂಚುಹಾಕುತ್ತಿದ್ದ. ಅದಕ್ಕೆ ಅನ್ನಕೊಡುವ ಮನೆಗೆ ಗುನ್ನ ಇಟ್ಟಿದ್ದಾನೆ ಎಂಬುದು ಬಯಲಾಗಿದೆ.
ICICI ಬ್ಯಾಂಕಿನ ಎಟಿಎಂಗೆ ಹಣ ತುಂಬುವ ಹೊಣೆ ಹೊತ್ತಿರುವ Writer Safeguard Ltd ಸಂಸ್ಥೆಯವರು ಆಗಸ್ಟ್ 14ರಂದು ATM ಯಂತ್ರಕ್ಕೆ 14 ಲಕ್ಷ ರೂಪಾಯಿಯನ್ನು ತುಂಬಿದ್ದಾರೆ. ಆದರೆ 2 ದಿನಗಳ ನಂತರ ಆಗಸ್ಟ್ 16ರಂದು audit ಮಾಡಿದಾಗ ಭಾರಿ ಮೊತ್ತದ ನಗದು ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಆದರೆ ಯಾವಾಗ ಶಿವರಾಜನನ್ನು ಸೋನಿಯಾ ಮೇಡಂ ಮುಂದೆ ತಂದು ನಿಲ್ಲಿಸಿದರೋ ಅವ 'ಹೌದು ಮೇಡಂ ಐದು ವರ್ಷದ ಹಿಂದೆಯೇ ನಮ್ಮೂರು ಹಾಸನ ಬಿಟ್ಟು ಬೆಂಗಳೂರಿಗೆ ಬಂದೆ. ಇಲ್ಲಿನ ಥಳಕುಬಳಕು ಬದುಕು ನೋಡಿ ಮಾರುಹೋದೆ. ನಾನೂ ಐಷಾರಾಮಿಯಾಗಿ ಬದುಕಬೇಕು ಅಂತ ಕನಸು ಕಂಡೆ. ಅದಕ್ಕಾಗಿ ಹಗಲಿನಲ್ಲೇ ನಾನು ಕೆಲಸ ಮಾಡುತ್ತಿದ್ದ ATM ಯಂತ್ರಕ್ಕೇ ಗುನ್ನವಿಟ್ಟೆ.
ಆಗಸ್ಟ್ 16ರಂದು ಬೆಳಗ್ಗೆಯೇ ATM ಕೇಂದ್ರಕ್ಕೆ ಬಂದೆ. ATM ಕೋಡ್ ಎಲ್ಲ ನನಗೆ ತಿಳಿದಿತ್ತು. ಅದಕ್ಕೆ ಸಲೀಸಾಗಿ ATM cash box ಓಪನ್ ಮಾಡಿದೆ. ಅಷ್ಟೂ ಹಣ ದೋಚುವ ಆಲೋಚನೆ ಬಂತು. ಆದರೆ ಅನುಮಾನ ಬರುತ್ತದೆ ಎಂದು ಒಂದಷ್ಟು ಹಣವನ್ನು ಅಲ್ಲಿಯೇ ಬಿಟ್ಟು ಸುಮಾರು 11 ಲಕ್ಷ ರೂಪಾಯಿಯಷ್ಟು ನಗದನ್ನು ಎತ್ತಿಕೊಂಡು ಹೋದೆ.
ಯಾರಿಗೂ ಅನುಮಾನ ಬಂದಿರಲಿಲ್ಲ. ಆದರೆ ಕೆಲವೇ ಗಂಟೆಗಳಲ್ಲಿ ನಮ್ಮ ಸಂಸ್ಥೆಯವರು audit ಮಾಡಿದ್ದಾರೆ. ಆಗ ಹಣ ಮಾಯವಾಗಿರುವುದು ಬೆಳಕಿಗೆ ಬಂದಿದೆ. ಆವಾಗ ನನ್ನತ್ತಲೇ ಅನುಮಾನದ ಮುಳ್ಳು ತಿರುಗಿದೆ. ಹಾಗಾಗಿ ಸುಲಭವಾಗಿ ಸಿಕ್ಕಿಹಾಕಿಕೊಂಡೆ' ಎಂದು ಹಾಸನದ ಶಿವರಾಜ ಮಾಯ್ಬಿಟ್ಟಿದ್ದಾನೆ.












Click it and Unblock the Notifications