ಗುರುವಿಗೆ ಗೂಗ್ಲಿ: ಬಿಎಂಟಿಎಫ್ ನಿಂದ ಅಶೋಕ್ ಗೆ ಗುನ್ನ

ಈ ರೀತಿ ಗೃಹ ಸಚಿವರೊಬ್ಬರಿಗೆ ಆರೋಪದ ಮೇಲೆ ನೋಟಿಸ್ ಜಾರಿ ಮಾಡಿ ಮೂರು ದಿನದೊಳಗೆ ಖುದ್ದು ಹಾಜಾರಾಗಿ ಸಾಕ್ಷಿ ಹೇಳುವಂತೆ ನೋಟಿಸ್ ನೀಡಿರುವುದು ರಾಜ್ಯ ರಾಜಕೀಯ ಇತಿಹಾಸದಲ್ಲಿ ಇದೇ ಮೊದಲು.
ಅಶೋಕ್ ಗೆ ನೋಟಿಎಸ್ ಏಕೆ?: ಬಗರ್ ಹುಕುಂ ಯೋಜನೆ ಅಡಿಯಲ್ಲಿ 8 ಎಕರೆ ಭೂಮಿಯನ್ನು ಮೇಯರ್ ಡಿ. ವೆಂಕಟೇಶ್ ಮೂರ್ತಿ ಅವರಿಗೆ ಆರ್ ಅಶೋಕ್ ಅವರು ಮಂಜೂರು ಮಾಡಿದ ಆರೋಪದ ಮೇಲೆ ಬಿಎಂಟಿಎಫ್ ಅಧ್ಯಕ್ಷ ಆರ್ ಪಿ ಶರ್ಮ ನೋಟಿಸ್ ಜಾರಿ ಮಾಡಿದ್ದಾರೆ.
2004ರಲ್ಲಿ ಉತ್ತರಹಳ್ಳಿ ಕ್ಷೇತ್ರದ ಶಾಸಕರಾಗಿದ್ದ ಆರ್ ಅಶೋಕ್ ಅವರು ಬಗರ್ ಹುಕುಂ ಸಮಿತಿ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ ಹಾಲಿ ಮೇಯರ್ ಆಗಿರುವ ವೆಂಕಟೇಶ್ ಮೂರ್ತಿ ಹಾಗೂ ಅವರ ಪತ್ನಿಗೆ ಉತ್ತರ ಹಳ್ಳಿ ಸಮೀಪದ ಸುಮನಹಳ್ಳಿಯಲ್ಲಿ 8 ಎಕರೆ ಜಮೀನನ್ನು ಅಶೋಕ್ ಮಂಜೂರು ಮಾಡಿದ್ದರು.
ಸಾಮಾನ್ಯವಾಗಿ ಬಗರ್ ಹುಕುಂ ಜಮೀನನ್ನು ಆರ್ಥಿಕವಾಗಿ ಹಿಂದುಳಿದ ಹಾಗೂ ಬಡತನದ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ಸರ್ಕಾರದ ವತಿಯಿಂದ ನೀಡಲಾಗುತ್ತದೆ. ಅದರೆ, ಮೇಯರ್ ವೆಂಕಟೇಶ್ ಮೂರ್ತಿ ಅವರು 2004ರಲ್ಲಿ ಸರ್ಕಾರಕ್ಕೆ ಸುಳ್ಳು ದಾಖಲಾತಿ ನೀಡಿ ಜಮೀನು ಪಡೆದಿದ್ದರು ಎಂದು ಆರೋಪಿಸಲಾಗಿದೆ.
ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಸರ್ಕಾರಿ ಜಮೀನು ಒತ್ತುವರಿ ಬಗ್ಗೆ ತನಿಖೆ ನಡೆಸುವಂತೆ ಐಪಿಎಸ್ ಅಧಿಕಾರಿ ಬಿಎಂಟಿಎಫ್ ಮುಖ್ಯಸ್ಥ ಆರ್ ಪಿ ಶರ್ಮ ಅವರಿಗೆ ಸರ್ಕಾರ ಆದೇಶಿಸಿತ್ತು. ಅದರಂತೆ ಹಲವು ತಿಂಗಳು ತನಿಖೆ ನಡೆಸಿದ ಶರ್ಮ ಅವರ ತಂಡ, ಈಗ ಮೇಯರ್ ಅವರು ಸುಳ್ಳು ದಾಖಲೆ ಸಲ್ಲಿಸಿ ಜಮೀನು ಪಡೆದಿರುವುದನ್ನು ಪತ್ತೆ ಮಾಡಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಎಂಎಂ ನ್ಯಾಯಾಲಯದಲ್ಲಿ ಮೇಯರ್ ದಂಪತಿ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಶರ್ಮ ಅವರ ಎತ್ತಂಗಡಿಗೆ ಈಶ್ವರಪ್ಪ ಸೇರಿದಂತೆ ಹಲವು ಪ್ರಮುಖ ನಾಯಕರ ಪ್ರಭಾವ ಬಳಸಲು ಯತ್ನಿಸಿದ ಮೇಯರ್ ವೆಂಕಟೇಶ್ ಮೂರ್ತಿ ಸೋತಿದ್ದಾರೆ. ಈಗ ಇದರ ಮುಂದುವರೆದ ಭಾಗವಾಗಿ ಆರ್ ಅಶೋಕ್ ಅವರ ಆಪ್ತ ಕಾರ್ಯದರ್ಶಿ ಕೆಂಪೇಗೌಡ ಅವರಿಗೆ ನೋಟಿಸ್ ಕಳುಹಿಸಲಾಗಿತ್ತು. ಅದರೆ, ನೋಟಿಸ್ ಪಡೆಯಲು ನಿರಾಕರಿಸಿದ ಹಿನ್ನೆಲೆಯಲ್ಲಿ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳಿಸಲಾಗಿದೆ ಎಂದು ತಿಳಿದುಬಂದಿದೆ.
ಆಶೋಕ್ ಹೇಳಿಕೆ: ನನಗೆ ಇನ್ನೂ ನೋಟಿಸ್ ಸಿಕ್ಕಿಲ್ಲ. ನೋಟಿಸ್ ಗೆ ತಕ್ಕ ಉತ್ತರ ನೀಡುವೆ. ನಾನು ಯಾವುದೇ ಕಾನೂನು ಉಲ್ಲಂಘನೆ ಮಾಡಿ ಜಮೀನು ಪಡೆದಿಲ್ಲ ಎಂದು ಅಶೋಕ್ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications