ಸರ್ಕಾರಕ್ಕೆ 'ಕಸ'ವಿಸಿ; ಬೆಂಗಳೂರು ಬಂದ್ ಗೆ ನಿರ್ಧಾರ

ಬಿಬಿಎಂಪಿ ಕಾರ್ಯವೈಖರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ ಪಕ್ಷದ ಮುಖಂಡರು, ನಗರದಲ್ಲಿ ಕಸದ ರಾಶಿ ಬಿದ್ದಿದೆ. ಮಳೆಯಿಂದಾಗಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಬೆಂಗಳೂರು ನಗರ ಗಬ್ಬೆದ್ದು ನಾರುತ್ತಿದೆ.
ವಾರದಲ್ಲಿ ಕಸ ತೆಗೆಯದಿದ್ದರೆ ಬೆಂಗಳೂರು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರ ಎಂಟು ಸಾವಿರ ಕೋಟಿ ರು.ಗಳ ನೆರವು ನೀಡಿದೆ. ಅದನ್ನು ರಸ್ತೆ, ಕುಡಿಯುವ ನೀರು, ಪಾದಚಾರಿ ಮಾರ್ಗ ನಿರ್ಮಾಣಕ್ಕೆ ಬಳಕೆ ಮಾಡಿಕೊಂಡಿಲ್ಲ ಎಂದು ಕಾಂಗ್ರೆಸ್ ಮುಖಂಡರು ಕಿಡಿಕಾರಿದರು.
ಕಸ ಅಸಮರ್ಕಪಕ ವಿಲೇವಾರಿಯಲ್ಲಿ ಬಿಬಿಎಂಪಿ ಮೇಯರ್ ಹಾಗೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಇದನ್ನು ದೊಡ್ಡ ಸಮಸ್ಯೆಯನ್ನಾಗಿ ಮಾಡಿರುವುದು ಬಿಬಿಎಂಪಿಯಲ್ಲಿ ಆಡಳಿತ ಅನುಭವದ ಕೊರತೆಯೇ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಆರೋಪಿಸಿದರು.
ಬಿವಿಕೆ ಅಯ್ಯಂಗಾರ್ ರಸ್ತೆಯ ಚಿಕ್ಕಪೇಟೆ ವೃತ್ತದಲ್ಲಿ ಶಾಸಕ ದಿನೇಶ್ ಗುಂಡೂರಾವ್, ಡಿಜೆ ಹಳ್ಳಿ ಪೆರಿಯಾರ್ ವೃತ್ತದಲ್ಲಿ ಶಾಸಕ ಪ್ರಸನ್ನ ಕುಮಾರ್, ಶಿವಾಜಿನಗರ ರಸೂಲ್ ಮಾರುಕಟ್ಟೆ ಬಳಿ ಶಾಸಕ ರೋಷನ್ ಬೇಗ್, ಬಿಬಿಎಂಪಿ ಪ್ರತಿಪಕ್ಷದ ನಾಯಕ ಎಂ.ಕೆ. ಗುಣಶೇಖರ್, ಎಂಜಿ ರಸ್ತೆ ಬಳಿ ಶಾಸಕ ಎನ್.ಎ. ಹ್ಯಾರಿಸ್, ದಾಸರಹಳ್ಳಿ ಜಯಮುನಿರಾವ್ ವೃತ್ತದಲ್ಲಿ ಶಾಸಕ ಪ್ರಿಯಕೃಷ್ಣ, ವಿಜಯನಗರ ಬಸ್ ನಿಲ್ದಾಣದ ಬಳಿ ಶಾಸಕ ಎಂ ಕೃಷ್ಣಪ್ಪ ಅವರು ಪ್ರತಿಭಟನೆ ನಡೆಸಿದರು.
ಕೃಷ್ಣಾನಂದ ನಗರದಲ್ಲಿ ಶಾಸಕ ನೆ.ಲ.ನರೇಂದ್ರ ಬಾಬು, ಬಾಣಸವಾಡಿ ಮುಖ್ಯರಸ್ತೆಯ ಬಳಿ ಶಾಸಕ ಕೆ.ಜೆ.ಜಾರ್ಜ್, ಮಾಜಿ ಶಾಸಕ ಎ. ಕೃಷ್ಣಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಬಿಎಂಪಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.
ಏತನ್ಮಧ್ಯೆ ನಗರದ ಕಸ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಹೊಸದಾಗಿ ಗುರುತಿಸಿರುವ ಡಂಪಿಂಗ್ ಯಾರ್ಡ್ ಗಳ ಸುತ್ತಮುತ್ತಲಿನ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತವಾಗಿದೆ. ಬಿಬಿಎಂಪಿಗೆ ಮತ್ತಷ್ಟು ತಲೆನೋವಾಗಿ ಪರಿಣಮಿಸಿದೆ. ಹೊಸ ಡಂಪಿಂಗ್ ಯಾರ್ಡ್ ಗಳನ್ನು ಗುರುತಿಸಿದ್ದರೂ ಅಲ್ಲಿ ಕಸ ಸುರಿಯುವ ಮುನ್ನವೇ ಗ್ರಾಮಸ್ಥರಿಂದ ಪ್ರತಿಭಟನೆ ಎದುರಿಸಬೇಕಾಗಿದೆ. ಇದರಿಂದ ಮುಂದೇನು ಎಂಬ ಸಮಸ್ಯೆ ಬಿಬಿಎಂಪಿಗೆ ಎದುರಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಸಮೀಪ 78 ಎಕರೆ ಪ್ರದೇಶದಲ್ಲಿ ನಗರದ ಕಸ ಸುರಿಯಲು ಬಿಬಿಎಂಪಿ ನಿರ್ಧಾರ ಹೊರ ಬೀಳುತ್ತಿದ್ದಂತೆ ಅಲ್ಲಿನ ಶಾಸಕ ಸುಧಾಕರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಾರಣಕ್ಕೂ ಚಿಂತಾಮಣಿ ಸುತ್ತಮುತ್ತ ಕಸ ಸುರಿಯಲು ಬಿಡುವುದಿಲ್ಲ ಎಂದು ಗುಡುಗಿದ್ದಾರೆ.












Click it and Unblock the Notifications