ವರದಕ್ಷಿಣೆ ಭೂತಕ್ಕೆ ಬಲಿಯಾದ ಟೀನೇಜ್ ಪ್ರೇಮಿ

ದೇವನ ಹಳ್ಳಿ ವಿಮಾನ ನಿಲ್ದಾಣ ಪೊಲೀಸ್ ಠಾಣೆ ವ್ಯಾಪ್ತಿಯ ವಾಲ್ಮೀಕಿ ನಗರದ ಚೇತನಾ ಹಾಗೂ ಕಾನ್ ಸ್ಟೇಬಲ್ ಒಬ್ಬರ ಪುತ್ರನಾದ ಅಭಿಷೇಕ್ ಸುಮಾರು 4 ವರ್ಷಗಳಿಂದ ಪ್ರೀತಿಸುತ್ತಿದ್ದರು. ಬಳಿಕ ಕಳೆದ 4 ತಿಂಗಳ ಹಿಂದಷ್ಟೇ ಮನೆ ಬಿಟ್ಟು ಹೋಗಿ ಭದ್ರಾವತಿ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದರು.
ನಂತರ ಈ ದಂಪತಿ ನಗರದ ಹೊರವಲಯದ ಬಾಗಲೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಆದರೆ ವಿವಾಹವಾದ ನಂತರ ಅಭಿಷೇಕ್ ಸಂಪೂರ್ಣ ಬದಲಾಗಿಬಿಟ್ಟ. ಹಣಕ್ಕಾಗಿ ಚೇತನಾಳನ್ನು ಪೀಡಿಸುತ್ತಿದ್ದ. ಚೇತನಾಳ ಹಣ ತರಲು ಅಸಮರ್ಥಳಾಗಿದ್ದು ಕಂಡು ಆಕ್ರೋಶಗೊಂಡು ಆಕೆಗೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದ.
ಟೀನೇಜ್ ಲವ್ ಸ್ಟೋರಿ : ಇಬ್ಬರದ್ದು ಅಮರ ಮಧುರ ಬಾಲಪ್ರೇಮ ಕಥೆ. ಇಬ್ಬರು ಒಟ್ಟಿಗೆ ಶಾಲೆಯಲ್ಲಿ ಓದುತ್ತಿದ್ದರು. ಕಾನ್ಸ್ ಟೇಬರ್ ಶಾಂತಕುಮಾರ್ ಅವರ ಮಗ ಅಭಿಷೇಕ್ ಶಾಲೆ ನಂತರವೂ ಚೇತನಾಳ ಹಿಂದೆ ಮುಂದೆ ಸುತ್ತುತ್ತಿದ್ದ. ಇಬ್ಬರ ಪ್ರೇಮ ಪ್ರಕರಣ ವಾಲ್ಮೀಕಿ ನಗರದ ಗಲ್ಲಿ ಗಲ್ಲಿಯಲ್ಲಿ ಪ್ರಸಿದ್ದಿಗೆ ಬರತೊಡಗಿತು.
ಆಕೆಗೆ 18 ವರ್ಷ ತುಂಬುತ್ತಿದ್ದಂತೆ 21 ವರ್ಷದ ಅಭಿಷೇಕ್ ಓಡಿಸಿಕೊಂಡು ಹೋಗಿ ಮದುವೆಯಾಗೇ ಬಿಟ್ಟ. ಮದುವೆಯಾದ ಕೆಲ ತಿಂಗಳ ನಂತರ ಆಕೆ ಗರ್ಭ ಧರಿಸಿರುವುದು ಗೊತ್ತಾಯಿತು. ಆದರೆ, ಅಭಿಷೇಕ್ ಗೆ ಈಗಲೇ ಮಕ್ಕಳು ಮರಿ ಸಂಸಾರ ತಾಪತ್ರಯ ಬೇಕಿರಲಿಲ್ಲ. ಅವನ ಮನಸ್ಸು ಇನ್ನು ಯುವ ಪ್ರೇಮಲೋಕದಲ್ಲಿ ತೇಲುತ್ತಿತ್ತು.
ವಿಶೇಷ ಎಂದರೆ ಇಬ್ಬರ ಮದುವೆಗೆ ಒಬ್ಬೇ ಒಬ್ಬ ಗೆಳೆಯ ಮಾತ್ರ ಸಾಕ್ಷಿಯಾಗಿದ್ದ. ಯಾವುದೇ ಫೋಟೊ ತೆಗೆಯಲಿಲ್ಲ. ಯಾವುದೇ ವಿಡಿಯೋ ಚಿತ್ರೀಕರಣ ಇರಲಿಲ್ಲ. ಬಾಡಿಗೆ ಮನೆಯಲ್ಲಿ ಕೆಲ ಕಾಲ ಸುಖದಿಂದ ಸಂಸಾರ ಮಾಡಿಕೊಂಡಿದ್ದರು.
ಆದರೆ, ಹಣದ ವಾಸನೆ ಅಮಲು ಏರಿಸಿಕೊಂಡ ಅಭಿಷೇಕ್ ಗೆ ಚೇತನಾಳನ್ನು ಹಿಂಸಿಸುವುದೇ ಕಾಯಕವಾಗಿಬಿಟ್ಟಿತು. ಚೇತನಾಳ ತಂದೆ ಈಗಷ್ಟೇ ದೊಡ್ಡ ಮಗಳಿಗೆ ಮದುವೆ ಮಾಡಿ ಸುಧಾರಿಸಿಕೊಳ್ಳುತ್ತಿದ್ದರು. ಕೊನೆ ಮಗಳ ಗಂಡ ಅಭಿಷೇಕ್ ಇಟ್ಟ ಬೇಡಿಕೆ ಕಂಡು ಕುಸಿದು ಬಿದ್ದರು.
ನಾನು ಅವರಿಬ್ಬರಿಗೂ ಹೇಳಿದೆ. ಇಲ್ಲೇ ಬಂದು ನಮ್ಮ ಜೊತೆ ಇದ್ದು ಬಿಡು ಮನೆ ಇದೆ. ಬಾಡಿಗೆ ಏನು ಕೊಡುವುದು ಬೇಡ ಎಂದು ಆದರೆ, ಅವನಿಗೆ ಹಣವೇ ಮುಖ್ಯವಾಗಿತ್ತು. ಅನ್ಯಾಯವಾಗಿ ನನ್ನ ಮಗಳನ್ನು ಕೊಂದುಬಿಟ್ಟ ಎಂದು ಚೇತನಾಳ ತಂದೆ ಮುನಿರಾಜು ಗೋಳಾಡಿದ್ದಾರೆ. ಮುನಿರಾಜು ಅವರು ನೀಡಿದ ದೂರಿನ ಮೇರೆಗೆ ಅಭಿಷೇಕ್ ನನ್ನು ಮೈಸೂರು ರಸ್ತೆ ಬಳಿ ಪೊಲೀಸರು ಬಂಧಿಸಿದ್ದಾರೆ.
18 ವರ್ಷಕ್ಕೆ ಪ್ರೀತಿಸಿ, ಮದುವೆಯಾಗಿ ಗಂಡನಿಂದ ಸೀಮೆಎಣ್ಣೆ ಸುರಿಸಿಕೊಂಡು ಬೆಂಕಿಗೆ ಆಹುತಿಯಾದ ಗರ್ಭಿಣಿ ಚೇತನಾಳ ಕೊಲೆಗೆ ಕಾರಣನಾದ ಪತಿ ಅಭಿಷೇಕ್ ಯಾವುದೇ ನೋವಿಲ್ಲದೆ ಪೊಲೀಸರ ವಶದಲ್ಲಿದ್ದಾನೆ. ಹೆತ್ತವರ ಮಾತು ಕೇಳದ ಯುವ ಪ್ರೇಮಿಗಳ ಕತೆ ದುರಂತ ಅಂತ್ಯ ಕಂಡಿದೆ.












Click it and Unblock the Notifications