ವಿದ್ಯಾರ್ಥಿನಿಯರ ಮೇಲೆ ಕನಕಪುರ ಕಿರಾತಕರ ದೌರ್ಜನ್ಯ

ಕಾವೇರಿ ತಟದ ಮುತ್ತತ್ತಿ ಮತ್ತು ಸಂಗಮಕ್ಕೆ ಪಿಕ್ನಿಕ್ ತೆರಳಿದ್ದ ಬೆಂಗಳೂರಿನ ಕುಮಾರಸ್ವಾಮಿ ಲೇಔಟಿನ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ 8 ಮಂದಿ ವಿದ್ಯಾರ್ಥಿಗಳ ತಂಡದ ಮೇಲೆ ಈ ದೌರ್ಜನ್ಯ ನಡೆದಿದೆ. ಅದರಲ್ಲಿ ಇಬ್ಬರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಬಂಧಿತರು ಫಿರ್ದೋಸ್ ಅಹಮದ್, ಸಯ್ಯದ್ ಮಾಟಿನ್, ಅರ್ಶದ್ ಖಾನ್, ವಸೀಂ ಅಕ್ರಂ ಖಾನ್ ಮತ್ತು ರಿಜ್ವಾನ್ ಅಹಮದ್.
ಕಿರಾತಕರು, ತಂಡದಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಗೋಳುಹೊಯ್ದುಕೊಂಡಿದ್ದಾರೆ. ಈ ವಿದ್ಯಾರ್ಥಿನಿಯರ ಬಟ್ಟೆಗಳನ್ನು ಹರಿದುಹಾಕಿದ್ದಾರೆ. ಇದಕ್ಕೆಲ್ಲ ಕಪ್ಪುಚುಕ್ಕೆಯಿಟ್ಟಂತೆ ಬಸ್ ಸ್ಟಾಂಡಿನಲ್ಲಿದ್ದ ಯಾರೊಬ್ಬರೂ ಈ ವಿದ್ಯಾರ್ಥಿನಿಯರ ಸಹಾಯಕ್ಕೆ ಬಂದಿಲ್ಲ.
ಇನ್ನೂ ದೌರ್ಭಾಗ್ಯದ ಸಂಗತಿಯೆಂದರೆ ಹಿರಿಯ ಕಾಂಗ್ರೆಸ್ ನಾಯಕರೊಬ್ಬರ ಪುತ್ರ ಧಮ್ಕಿ ಹಾಕಿದ ಕಾರಣ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ.
ಘಟನೆಯ ನಂತರ ಎಚ್ಚೆತ್ತ ಸ್ಥಳೀಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆಗ ಪೊಲೀಸರು ತಡವಾಗಿ ಐದು ಮಂದಿ ದುಷ್ಕರ್ಮಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾಗ ಕೆಲವು ಪುಂಡರು ಪ್ರತಿಭಟನಾನಿರತರ ಮೇಲೆ ಕಲ್ಲುಗಳನ್ನೆಸದಿದ್ದಾರೆ. ಇದರಿಂದ ಪರಿಸ್ಥಿತಿ ಉದ್ವಿಗ್ನಕ್ಕೆ ತಿರುಗಿದ್ದು, ಪಟ್ಟಣದಲ್ಲಿ ಈಗ ನಿಷೇದಾಜ್ಞೆ ಜಾರಿಗೆಗೊಳಿಸಲಾಗಿದೆ.
ಪೊಲೀಸರು ಹೇಳುವುದೇನು?: 6 ವಿದ್ಯಾರ್ಥಿಗಳು ಮತ್ತು 2 ವಿದ್ಯಾರ್ಥಿನಿಯರು ಹುಟ್ಟುಹಬ್ಬ ಆಚರಿಸಲು ಸಂಗಮ ಮತ್ತು ಮುತ್ತತ್ತಿಗೆ ಆಗಮಿಸಿದ್ದರು. ಇವರೆಲ್ಲ ಉತ್ತರ ಭಾರತದವರು. ಮತ್ತಿತ್ತಿಯಲ್ಲೇ ಕಿರಾತಕರ ದರ್ಶನವಾಗಿದೆ. ಇದರಿಂದ ಕೆಂಗೆಟ್ಟ ತಂಡ ತಮ್ಮ ವಾಹನದಲ್ಲಿ ಕನಕಪುರದತ್ತ ಧಾವಿಸಿದ್ದಾರೆ. ಆದರೆ ಕಿರಾತಕರು ಬೈಕುಗಳಲ್ಲಿ ಅವರನ್ನು ಹಿಂಬಾಲಿಸಿದ್ದಾರೆ.
ಕಿರಾತಕರು ಮಾರ್ಗ ಮಧ್ಯೆ ತಮ್ಮ ಇತರೆ ಕಿರಾತಕ ಗೆಳೆಯರಿಗೆ ಮೊಬೈಲಿನಲ್ಲಿ ಫೋನ್ ಮಾಡಿ, ವಿದ್ಯಾರ್ಥಿಗಳ ತಂಡವನ್ನು ತಡೆಯುವಂತೆ ಸೂಚಿಸಿದ್ದಾರೆ. ಕೊನೆಗೆ ಕನಕಪುರ ಬಸ್ ನಿಲ್ದಾಣದ ಬಳಿ ಕಿರಾತಕರು ವಿದ್ಯಾರ್ಥಿಗಳ ತಂದ ಮೇಲೆ ಮುಗಿಬಿದ್ದಿದ್ದಾರೆ.
ರಾಜಸ್ತಾನ ಮೂಲದ ಅಭಿಷೇಕ್ ನ ಹುಟ್ಟುಹಬ್ಬ ಆಚರಿಸಲು ಅಸ್ಸಾಂ, ಬಿಹಾರ, ಗುಜರಾತ್ ಮೂಲದವರಾದ ಸೌರವ್, ಪ್ರೀತಿ, ಮಾಲತೇಶ್, ಸ್ವಾತಿ, ಅಭಿನವ್, ರೋಹಿತ್ ಮುತ್ತಿತ್ತಿಗೆ ತೆರಳಿದ್ದರು.
'ಮೊದಲು ವಿದ್ಯಾರ್ಥಿಗಳ ಮೇಲೆ ದೈಹಿಕ ಹಲ್ಲೆ ನಡೆಸಿ, ಅವರನ್ನು ಸುಮ್ಮನಾಗಿಸಿದ ಕಿರಾತಕರು ಬಳಿಕ ಇಬ್ಬರು ಯುವತಿಯರ ಮೇಲೆ ಮುಗಿಬಿದ್ದಿದ್ದಾರೆ. ಅವರಿಗೆ ಲೈಂಗಿಕ ಕಿರುಕುಳ ನೀಡಿದರು' ಎಂದು ಪ್ರತ್ಯಕ್ಷದರ್ಶಿಯೊಬ್ಬರು (ಆ ಪ್ರತ್ಯಕ್ಷದರ್ಶಿ ತಮ್ಮ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ) ತಿಳಿಸಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಅನೇಕ ಹಿಂದೂ ಸಂಘಟನೆಗಳು ಗುರುವಾರ ತೀವ್ರ ಪ್ರತಿಭಟನೆ ನಡೆಸಿವೆ. ಪೊಲೀಸರು ಆ ವೇಳೆ ಲಾಠಿ ಪ್ರಹಾರ ಸಹ ನಡೆಸಿದ್ದಾರೆ. '20ರ ಹರಯದ ಐದು ಯುವಕರನ್ನು ಬಂಧಿಸಲಾಗಿದೆ. ಆರೋಪಿಗಳ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಇತರೆ ದುಷ್ಕರ್ಮಿಗಳನ್ನೂ ಬಂಧಿಸಲಾಗುವುದು' ಎಂದು ಪೊಲೀಸ್ ಡಿವೈ.ಎಸ್ಪಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.












Click it and Unblock the Notifications