ಎಚ್ಡಿ ಬಾಲಕೃಷ್ಣೇಗೌಡರಿಗೆ ನಿರೀಕ್ಷಣಾ ಜಾಮೀನು

ಭದ್ರಾವತಿಯ ಬಾಲಕೃಷ್ಣ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ ನ್ಯಾಯಾಧೀಶ ಜಗನ್ನಾಥ ಅವರಿದ್ದ ಪೀಠ ಬಾಲಕೃಷ್ಣೇಗೌಡರ ಜಾಮೀನು ಅರ್ಜಿಯನ್ನು ಪುರಸ್ಕರಿಸಿದೆ. 2 ಲಕ್ಷ ರು ಬಾಂಡ್ 2 ಶ್ಯೂರಿಟಿ ನೀಡುವಂತೆ ಆದೇಶಿಸಲಾಗಿದೆ.
ಈ ಹಿಂದೆ ಆದಾಯ ಮೀರಿ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಹೀಗಾಗಿ ಬಾಲಕೃಷ್ಣಗೌಡ ಅವರು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಹಿರಿಯ ಪುತ್ರ ಎಚ್.ಡಿ. ಬಾಲಕೃಷ್ಣ ಗೌಡರು ಕೆಎಎಸ್ ಅಧಿಕಾರಿಯಾಗಿದ್ದಾಗ ತಮ್ಮ ಅಧಿಕಾರವಧಿಯಲ್ಲಿ 5.24 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಅಂತಿಮ ತನಿಖಾ ವರದಿಯಲ್ಲಿ ಹೇಳಿದ್ದರು.
ಲೋಕಾಯುಕ್ತ ಡಿವೈಎಸ್‌ಪಿ ಪ್ರಸನ್ನರಾಜು ನೇತೃತ್ವದಲ್ಲಿ ನಡೆದ ಸುಮಾರು 10 ತಿಂಗಳ ತನಿಖೆಯ ನಂತರ ನೂರಾರು ಪುಟಗಳ ದಾಖಲೆಯೊಂದಿಗೆ ಸುಮಾರು 176 ಪುಟಗಳ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
1985ರಿಂದ 2005ರವರೆಗೆ ಗಳಿಸಿದ ಅಕ್ರಮ ಆಸ್ತಿ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದ್ದಾರೆ. ಬಾಲಕೃಷ್ಣ ಗೌಡರು ತಮ್ಮ ಸೇವಾವಧಿಯಲ್ಲಿ ಗಳಿಸಿದ ಒಟ್ಟು ಆಸ್ತಿಯ ಮೊತ್ತ 15.18 ಕೋಟಿ ರೂ. ಇದರಲ್ಲಿ 5.24 ಕೋಟಿ ರೂ. ಅಕ್ರಮ ಆಸ್ತಿಯಾಗಿದ್ದು, ಅವರ ಗಳಿಕೆಯ ಶೇ. 43ರಷ್ಟು ಆಸ್ತಿ ಅಕ್ರಮ ಮೂಲಗಳಿಂದ ಬಂದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇದಲ್ಲದೆ, ಲೋಕಾಯುಕ್ತ ಪೊಲೀಸರು ಬಾಲಕೃಷ್ಣ ಗೌಡರು 1985ರಿಂದ 2012ರವರೆಗೆ ಹೊಂದಿರುವ ಆಸ್ತಿಗಳ ಬಗ್ಗೆಯೂ ತನಿಖೆ ನಡೆಸಲಾಗಿದೆ. ಇದರ ಪ್ರಕಾರ ಸ್ವಯಂ ನಿವೃತ್ತಿ ನಂತರವೂ ಬಾಲಕೃಷ್ಣ ಗೌಡರು ಸುಮಾರು 75 ಕೋಟಿ ರೂ. ಗಳಷ್ಟು ಆಸ್ತಿ ಗಳಿಸಿದ್ದಾರೆ ಎಂದು ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ತಿಳಿಸಿದ್ದರು.
ಬಾಲಕೃಷ್ಣ ಗೌಡರು ಮತ್ತು ಅವರ ಕುಟುಂಬವು 2006-07ರಲ್ಲಿ ಅತಿ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಿದ್ದಾರೆ ಎಂಬುದನ್ನು ತನಿಖಾ ವರದಿ ಬಹಿರಂಗಪಡಿಸಿದೆ. ಈ ಅವಧಿಯಲ್ಲಿ ಬಾಲಕೃಷ್ಣ ಗೌಡರ ಪತ್ನಿ ಕವಿತಾ ಹೆಸರಿನಲ್ಲಿ ಸುಮಾರು 12ಕ್ಕೂ ಹೆಚ್ಚು ಆಸ್ತಿಗಳನ್ನು ಖರೀದಿ ಮಾಡಲಾಗಿದೆ.
ಅಲ್ಲದೆ, ಬಾಲಕೃಷ್ಣ ಗೌಡರು ಭೂ ಕಾಯ್ದೆಯನ್ನು ಉಲ್ಲಂಘಿಸಿ ಅಪಾರ ಪ್ರಮಾಣದ ಕೃಷಿ ಜಮೀನನ್ನು ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ. ಹಾಗೆಯೇ ಅವರ ಸಂಬಂಧಿಕರ ಹೆಸರಿನಲ್ಲಿಯೂ ಕೋಟ್ಯಂತರ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಅಂದರೆ, ಬಾಲಕೃಷ್ಣ ಗೌಡರ ಕುಟುಂಬವು ಶೇ. 80ರಷ್ಟು ಆಸ್ತಿಗಳನ್ನು ಈ ಎರಡು ವರ್ಷದಲ್ಲಿ ಖರೀದಿಸಿದ್ದಾರೆ ಎಂದು ವರದಿ ಹೇಳಿತ್ತು.











Click it and Unblock the Notifications