ನೋಟಿಸ್ ಜಾರಿಯಾಯ್ತು; ಬಿದರಿ ಮನೆಗೆ ರಾಮುಲು ದೌಡು

ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜನಾರ್ದನ ರೆಡ್ಡಿಗೆ ಜಾಮೀನು ದೊರಕಿಸಲು ಜಡ್ಜುಗಳಿಗೇ ಲಂಚ ತಿನ್ನಿಸಿದ ಪ್ರಕರಣದಲ್ಲಿ ಈ ನೋಟಿಸ್ ಜಾರಿಯಾಗಿದೆ.
ಶಂಕರ ಬಿದರಿ ಮನೆಗೆ ರಾಮುಲು ದೌಡು: ಹೈದರಾಬಾದಿನಲ್ಲಿರುವ ACB ಕಚೇರಿಗೆ ತಕ್ಷಣ ಹಾಜರಾಗುವಂತೆ ನೋಟಿಸಿನಲ್ಲಿ ರಾಮುಲುಗೆ ಸೂಚಿಸಲಾಗಿದೆ. ನೋಟಿಸ್ ಕೈಸೇರುತ್ತಿದ್ದಂತೆ ರಾಮುಲು ಅವರು ಕಾನೂನು ಸಲಹೆ ಪಡೆಯಲು ರಾಜ್ಯ ಮಾಜಿ ಪೊಲೀಸ್ ಮಹಾನಿರ್ದೇಶಕ ಶಂಕರ ಬಿದರಿ ಅವರ ಮನೆಗೆ ದೌಡಾಯಿಸಿದ್ದಾರೆ.
ನಗರದ ಬಿಟಿಎಂ ಲೇಔಟಿನ ಪೊಲೀಸ್ ವಸತಿ ಸಮುಚ್ಚದಲ್ಲಿರುವ ಶಂಕರ ಬಿದರಿ ಅವರ ನಿವಾಸಕ್ಕೆ ಇಂದು ಬೆಳಗ್ಗೆ ರಾಮುಲು ಭೇಟಿ ನೀಡಿದ್ದರು. ಉಪಾಹಾರ ಸೇವನೆಗೆಂದು ತೆರಳಿದ್ದ ರಾಮುಲು ಅವರು ACBಯಿಂದ ತಮಗೆ ಬಂದಿರುವ ನೋಟಿಸ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ.
ACB ನೋಟಿಸ್ ಜಾರಿಯಾಗಿರುವುದರಿಂದ ಮುಂದೆ ಕಾನೂನಾತ್ಮಕವಾಗಿ ಹೇಗೆ ನಡೆದುಕೊಳ್ಳಬೇಕು. ಮುಂದಿನ ಕಾರ್ಯತಂತ್ರ ಹೇಗಿರಬೇಕು' ಎಂಬುದರ ಕುರಿತು ಸುದೀರ್ಘವಾಗಿ ರಾಮುಲು ಅವರು ಬಿದರಿ ಜತೆ ಚರ್ಚಿಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೆಡ್ಡಿಗೆ ಸಿಕ್ತ ಜಾಮೀನು: ಗಡಿ ಒತ್ತುವರಿ ಹಾಗೂ ಕೊಲೆ ಬೆದರಿಕೆ ಪ್ರಕರಣದ ಸಂಬಂಧ ಇಂದು ವಿಚಾರಣೆಗೆ ಹಾಜರಾಗಿದ್ದ ಬಳ್ಳಾರಿ ಗಣಿಧಣಿ ಗಾಲಿ ಜನಾರ್ದನ ರೆಡ್ಡಿಗೆ ಸಂಡೂರಿನ JMFC ನ್ಯಾಯಾಧೀಶ ಶಿವಾನಂದ ಮಾರುತಿ ಜಪಾರೆ ಅವರು ಜಾಮೀನು ಮಂಜೂರು ಮಾಡಿದರು. ಇದೇ ವೇಳೆ ಪ್ರಕರಣದ ವಿಚಾರಣೆಯನ್ನು ನವೆಂಬರ್ 28ಕ್ಕೆ ಮುಂದೂಡಿದರು.
ಆದರೆ ಇದರಿಂದ ಜನಾರ್ದನ ರೆಡ್ಡಿಗೆ ಬಿಡುಗಡೆ ಭಾಗ್ಯ ಇಲ್ಲವಾಗಿದೆ. ಏಕೆಂದರೆ ಅವರಿನ್ನೂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಇಂದೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ವಾಪಸಾಗಬೇಕಾಗಿದೆ.
ಅತ್ತ ಜಾಮೀನು ದೊರೆಯುತ್ತಿದ್ದಂತೆ ನ್ಯಾಯಾಲಯದಿಂದ ಹೊರ ಬಂದ ಜನಾರ್ದನ ರೆಡ್ಡಿ ತಮ್ಮ ಬೆಂಬಲಿಗರೊಂದಿಗೆ ಮಾತನಾಡಿದರು. ಕಳೆದ ಸೆ. 5ರಂದು ಜೈಲು ಸೇರಿದ ಬಳಿಕ ರೆಡ್ಡಿ ಇದೇ ಮೊದಲ ಬಾರಿಗೆ ಮಾಧ್ಯಮಗಳ ಮೂಲಕ ಸಾರ್ವಜನಿಕವಾಗಿ ಮಾತನಾಡಿದ್ದಾರೆ.
'ದೇವರಲ್ಲಿ ನನಗೆ ಅಪಾರವಾದ ನಂಬಿಕೆಯಿದೆ. ಎಲ್ಲ ಆರೋಪಗಳಿಂದ ಮುಕ್ತನಾಗಿ ಹೊರಬರುವೆ. ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ನನ್ನ ಬಂಧನದಿಂದ ಆತ್ಮಸ್ಥೈರ್ಯ ಕಳೆದುಕೊಳ್ಳಬೇಡಿ. ನಾನು ಮತ್ತೆ ನವೆಂಬರ್ 28ಕ್ಕೆ ಬರುವೆ' ಎಂದು ರೆಡ್ಡಿ ತಮ್ಮ ಅಭಿಮಾನಿಗಳನ್ನುದ್ದೇಶಿಸಿ ಹೇಳಿದ್ದಾರೆ.












Click it and Unblock the Notifications