ಅಡ್ವಾಣಿಗೆ ಯಡಿಯೂರಪ್ಪನವರಿಂದ ರಾಜಕೀಯ ಪಾಠ

ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿ ಯಡಿಯೂರಪ್ಪನವರು ಅಡ್ವಾಣಿಯವರಿಗೆ ಖಾರವಾದ ಪತ್ರ ಬರೆದಿದ್ದು, ವಿಧಾನಸಭೆ ಚುನಾವಣೆ ಇನ್ನೇನು ಸನಿಹ ಬಂದಿರುವ ಸಂದರ್ಭದಲ್ಲಿ ಇನ್ನು ಮುಂದಾದರೂ ಈ ರೀತಿ ಪಕ್ಷದ ಕಾರ್ಯಕರ್ತರ ವಿಶ್ವಾಸ ಕುಗ್ಗಿಸುವಂತಹ ಹೇಳಿಕೆಗಳನ್ನು ನೀಡುವ ಬದಲು, ಪಕ್ಷದ ಸಾಮರ್ಥ್ಯವನ್ನು ಮತ್ತು ವರ್ಚಸ್ಸನ್ನು ವೃದ್ಧಿಸುವಂತಹ ಮಾತುಗಳನ್ನಾಡಿರಿ ಎಂದು ಯಡಿಯೂರಪ್ಪ ಅವರು ಅಡ್ವಾಣಿ ಅವರಿಗೇ ಬುದ್ಧಿವಾದ ಹೇಳಿದ್ದಾರೆ.
ಯಡಿಯೂರಪ್ಪ ಕುರಿತು ಅಡ್ವಾಣಿ ಅವರ ನಿಲುವೇನು ಎಂಬುದು ಇಡೀ ದೇಶಕ್ಕೆ ತಿಳಿದ ವಿಷಯ. ಯಡಿಯೂರಪ್ಪ ಅವರ ಹೆಸರು ಅಕ್ರಮ ಗಣಿಗಾರಿಕೆಯಲ್ಲಿ ಬಂದಾಗ, ನಂತರ ಜೈಲಿಗೆ ಹೋದಾಗ ಯಡಿಯೂರಪ್ಪ ಅವರನ್ನು ಅಡ್ವಾಣಿ ಸಂಪೂರ್ಣವಾಗಿ ನಿರ್ಲಕ್ಷಿಸಿದ್ದರು ಮತ್ತು ಯಾರಿಗೆ ಏನು ಶಿಕ್ಷೆಯಾಗಬೇಕೋ ಅದು ಆಗಲೇಬೇಕು ಎಂದು ನುಡಿದಿದ್ದರು. ನಂತರ ಶೆಟ್ಟರ್ ಅವರನ್ನು ಮುಂದಿಟ್ಟುಕೊಂಡು ರಾಜಕೀಯದಾಟ ಶುರು ಮಾಡಿದಾಗ ಕೂಡ ಅಡ್ವಾಣಿ ಅವರು ಯಡಿಯೂರಪ್ಪನವರನ್ನು ಹತ್ತಿರ ಕೂಡ ಸೇರಿಸಿರಲಿಲ್ಲ.
ತಮ್ಮ ವಿರುದ್ಧ ಅಡ್ವಾಣಿಯವರನ್ನು ಎತ್ತಿಕಟ್ಟುವಲ್ಲಿ ರಾಜ್ಯ ಅನೇಕರ ಕೈವಾಡವಿದೆಯೆಂದು ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ಯಡಿಯೂರಪ್ಪ ಹೇಳಿ, ಪರೋಕ್ಷವಾಗಿ ಡಿವಿ ಸದಾನಂದ ಗೌಡರ ವಿರುದ್ಧ ಹರಿಹಾಯ್ದಿದ್ದರು. ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳುತ್ತಾರೆಂಬ ಭರವಸೆ ನನಗಿದೆ ಎಂದಿದ್ದರು. ಈಗ ಅಡ್ವಾಣಿಯವರಿಗೆ ಬರೆದ ಪತ್ರದಲ್ಲಿ ಖುದ್ದು ಭೇಟಿಯಾಗಿ ಎಲ್ಲ ಗೊಂದಲ ಮತ್ತು ತಪ್ಪು ತಿಳಿವಳಿಕೆಗಳನ್ನು ನಿವಾರಿಸುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಈ ಬಾರಿಯಾದರೂ ಅಡ್ವಾಣಿಯವರು ಯಡಿಯೂರಪ್ಪನವರನ್ನು ಹತ್ತಿರ ಸೇರಿಸುತ್ತಾರಾ?
ಪತ್ರದಲ್ಲಿ, ಕರ್ನಾಟಕದಲ್ಲಿ ನಡೆದಿರುವ ವಿದ್ಯಮಾನದಿಂದ ಬಿಜೆಪಿಯ ವರ್ಚಸ್ಸಿಗೆ ಎಳ್ಳಷ್ಟೂ ಧಕ್ಕೆಯಾಗಿಲ್ಲ. ರಾಜ್ಯದಲ್ಲಿ ಬಿಜೆಪಿಯ ರಾಜಕೀಯ ಭವಿಷ್ಯ ಹೇಗಿದೆಯೆಂದು ಬೇಕಿದ್ದರೆ ಸಮೀಕ್ಷೆ ಮಾಡಿ ಅಡ್ವಾಣಿಯವರು ತಿಳಿದುಕೊಳ್ಳಲಿ ಎಂದಿರುವ ಯಡಿಯೂರಪ್ಪ, ರಾಜ್ಯಕ್ಕೆ ತಾವು ನೀಡಿರುವ ಕೊಡುಗೆಯ ಬಗ್ಗೆ ಭೇಟಿಯಾಗಿ ವಿವರಿಸಲು ಸಿದ್ಧ ಎಂದಿದ್ದಾರೆ. ರಾಜ್ಯದಲ್ಲಿ ಅದಿರಿನ ಅಕ್ರಮ ಸಾಗಾಣಿಕೆಯನ್ನು ನಿಷೇಧಿಸಿದ್ದು ಮತ್ತು ನಾನಾ ಉಪಚುನಾವಣೆಯಲ್ಲಿ ಜಯಭೇರಿ ಸಾಧಿಸಿದ್ದರ ಬಗ್ಗೆ ಅಡ್ವಾಣಿಯವರಿಗೆ ವಿವರಣೆ ನೀಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ.












Click it and Unblock the Notifications