ಅಣ್ಣಾ ಟೀಂ ಛಿದ್ರ : ನ್ಯಾ. ಹೆಗ್ಡೆ ಅ'ಸಂತೋಷ'

ಜನ ಲೋಕಪಾಲ ಮಸೂದೆ ಮಂಡನೆ ಸಾಧ್ಯವಾಗದಿರುವುದರಿಂದ ಭ್ರಮನಿರಸನಗೊಂಡಿರುವ ಅಣ್ಣಾ ಹಜಾರೆ, ಆ ಹೋರಾಟಕ್ಕಾಗಿ ಕಟ್ಟಿದ್ದ ಅಣ್ಣಾ ಟೀಂ ಅನ್ನು ವಿಸರ್ಜಿಸುತ್ತಿರುವುದಾಗಿ ಹೇಳಿ, ಅಣ್ಣಾ ಟೀಂನ್ನು ನಿರಾಶೆಯ ಮಡುವಿಗೆ ತಳ್ಳಿದ್ದಾರೆ. ಇದರ ಜೊತೆಗೆ ಅಣ್ಣಾ ಟೀಂನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೆ ಬಹಿರಂಗವಾಗಿದೆ.
ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದಿರುವ ಅಣ್ಣಾ ಹಜಾರೆ ಜನ ಲೋಕಪಾಲ್ ಮಸೂದೆ ಮಂಡನೆಗಾಗಿ ಉಪವಾಸಕ್ಕೆ ಕುಳಿತಾಗಲೆಲ್ಲ ಬೆಂಗಳೂರಿನಲ್ಲಿ ಯುವಜನರನ್ನು ಹುರಿದುಂಬಿಸಿ ಉತ್ತೇಜಿಸುತ್ತಿರುವ ನ್ಯಾ. ಸಂತೋಷ್ ಹೆಗ್ಡೆ, ಎಲ್ಲ ಭಿನ್ನಾಭಿಪ್ರಾಯಗಳು ದೂರವಾಗಿ ಅಣ್ಣಾ ಟೀಂ ಮತ್ತೆ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.
"ಬಲಿಷ್ಠ ಲೋಕಪಾಲ ಮಸೂದೆಗಾಗಿ ಅಣ್ಣಾ ಹಜಾರೆ ಆರಂಭಿಸಿದ್ದ ಹೋರಾಟ ಮುಂದುವರಿಯುವುದು ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಈ ಹೋರಾಟ ಸಾಕಷ್ಟು ಪ್ರಗತಿಯನ್ನು ಸಾಧಿಸಿತ್ತು. ಆದರೆ, ಅಣ್ಣಾ ಟೀಂ ಚುನಾವಣೆಯಲ್ಲಿ ಭಾಗವಹಿಸಬೇಕೋ ಬೇಡವೋ ಎಂಬ ವಿಷಯ ಕುರಿತು ಭಿನ್ನಾಭಿಪ್ರಾಯ ಮೂಡಿದ್ದು ನಿಜಕ್ಕೂ ದುರದೃಷ್ಟಕರ" ಎಂದು ಸಂತೋಷ್ ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಅಣ್ಣಾ ಟೀಂನಿಂದ ರಾಜಕೀಯ ಪಕ್ಷದ ಸ್ಥಾಪನೆ ಬಗ್ಗೆ ನನಗೂ ಅಸಮಾಧಾನವಿದೆ. ಆ ಕಾರಣಕ್ಕಾಗಿ ನಾನು ಅಣ್ಣಾ ಟೀಂನಿಂದ ದೂರ ಉಳಿದೆ" ಎಂದು ಅವರು ನುಡಿದಿದ್ದಾರೆ. "ಪರ್ಯಾಯ ರಾಜಕೀಯ ಪಕ್ಷ ಸ್ಥಾಪಿಸದೆ, ಉಪವಾಸ ಸತ್ಯಾಗ್ರಹಗಳನ್ನು ನಡೆಸದೆ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡುವುದು ಸಾಧ್ಯವಿದೆ. ಅಣ್ಣಾ ಹಜಾರೆ ಅವರು ಈಗ ಕೂಡ ದೇಶದ ಉದ್ದಗಲಲ್ಲೂ ಸಂಚರಿಸಬೇಕು. ಯುವಜನತೆಯನ್ನು ಭ್ರಷ್ಟರ ವಿರುದ್ಧ ಬಡಿದೆಬ್ಬಿಸಬೇಕು" ಎಂದು ಅವರು ಆಗ್ರಹಿಸಿದರು. (ಪಿಟಿಐ)












Click it and Unblock the Notifications