ಹಣದಾಸೆಗೆ ಬಡಕೂಸಿನ ಪ್ರಾಣ ತೆಗೆದ ಆಸ್ಪತ್ರೆ

ಡೆಲಿವತಿ ಡೇಟ್ ಗೂ ಮುನ್ನ ಜನಿಸಿದ್ದ ಮಗುವನ್ನು ಇನ್ ಕ್ಯುಬೇಟರ್ ನಲ್ಲಿ ಇರಿಸಿ ಜೋಪಾನ ಮಾಡಲಾಗಿತ್ತು. ಆದರೆ, ಮಗುವಿನ ಹೆತ್ತವರು 200 ರೂ ಪಾವತಿಸಲು ವಿಫಲರಾದರು ಎಂಬ ಕಾರಣಕ್ಕೆ ಪ್ರಾಣ ಉಳಿಸಬೇಕಾದ ವೈದ್ಯರು, ಮಗುವನ್ನು ಇನ್ಕ್ಯುಬೇಟರ್ ನಿಂದ ತೆಗೆದುಹಾಕಿ ಅದರ ಪ್ರಾಣವನ್ನೇ ಕಸಿದುಕೊಂಡಿದ್ದಾರೆ.
ಜುಲೈ 21ರಂದು ಈ ಮಗು ಜನಿಸಿತ್ತು. ಇನ್ ಕ್ಯೂಬೇಟರ್ ಗೆ ಬಳಸಿದ ವಿದ್ಯುತ್ ಶುಲ್ಕ 200 ರೂ ಪಾವತಿಸುವಂತೆ ಮಗುವಿನ ತಂದೆ ಸಂಜೀವ್ ಕುಮಾರ್ ಅವರಿಗೆ ಆಸ್ಪತ್ರೆ ಅಧಿಕಾರಿಗಳು ಸೂಚಿಸಿದ್ದರು. ಆದರೆ ವೃತ್ತಿಯಲ್ಲಿ ಪೇಂಟರ್ ಆಗಿರುವ ಆ ಬಡಪಾಯಿ ಹಣ ಪಾವತಿಸಲು ಶಕ್ತನಾಗಿರಲಿಲ್ಲ. ಇದನ್ನೇ ನೆಪವಾಗಿಸಿದ ಅಧಿಕಾರಿಗಳು ಎಳೆಯ ಮಗುವನ್ನು ಇನ್ಕ್ಯುಬೇಟರ್ ನಿಂದ ಹೊರತೆಗೆದರು.
ಸ್ವಲ್ಪಹೊತ್ತಿನಲ್ಲೇ ಮಗು ಮೃತಪಟ್ಟಿತು ಎನ್ನಲಾಗಿದೆ. ಆದರೆ, ಮಗುವಿನ ಸಾವಿನ ಹೊಣೆ ಹೊರಲು ಆಸ್ಪತ್ರೆ ಆಡಳಿತ ಮಂಡಳಿ ನಿರಾಕರಿಸಿದೆ. ಆಸ್ಪತ್ರೆ ಅಧಿಕಾರಿ ಇಕ್ಬಾಲ್ ಸಿಂಗ್ ನಾನು ಈ ಘಟನೆ ನಡೆದಾಗ ಊರಲ್ಲಿ ಇರಲಿಲ್ಲ. ನನಗೆ ಸರಿಯಾಗಿ ವಿಷಯ ತಿಳಿದಿಲ್ಲ. NRHM ಸಭೆಗೆ ಹೋಗಿದ್ದೆ. ಆದರೂ ಈ ಬಗ್ಗೆ ಮಾಹಿತಿ ಸಂಗ್ರಹಿಸಿ ಆಂತರಿಕ ತನಿಖೆಗೆ ಆದೇಶಿಸಲಾಗಿದೆ.
ಸಿಬ್ಬಂದಿಗಳು ತಪ್ಪಿತಸ್ಥರು ಎಂದು ತಿಳಿದು ಬಂದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಪಂಜಾಬ್ ಆರೋಗ್ಯ ಸಚಿವ ಮದನ್ ಮೋಹನ್ ಮಿತ್ತಲ್ 'ಈ ಸುದ್ದಿ ಕೇಳಿ ದಿಗ್ಭ್ರಮೆಗೊಂಡೆ. ತಕ್ಷಣವೇ ತನಿಖೆ ನಡೆಸಿ ಎರಡು ವಾರದೊಳಗೆ ಸಂಪೂರ್ಣ ನೀಡುವಂತೆ ಸೂಚಿಸಿದ್ದೇನೆ' ಎಂದಿದ್ದಾರೆ.
'ನನ್ನ ಪತ್ನಿ ಅನಿತಾ ಜು.21ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಮಗುವಿಗೆ ಜಾಂಡೀಸ್ ಇರುವ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಎಮೆರ್ಜೆನ್ಸಿ ವಾರ್ಡ್ ಗೆ ತಾಯಿ ಮಗುವನ್ನು ಶಿಫ್ಟ್ ಮಾಡಿದರು. ಜೀವ ಸಂರಕ್ಷಣಾ ಸಾಧನಗಳನ್ನು ಅಳವಡಿಸಲಾಯಿತು. ನಂತರ ಮಗುವನ್ನು ಇನ್ ಕ್ಯುಬೇಟರ್ ನಲ್ಲಿ ಇಡಲಾಗಿತ್ತು.ಆದರೆ, ನನಗೆ ಸಮಯಕ್ಕೆ ಸರಿಯಾಗಿ ಹಣ ಒದಗಿಸಲಾಗಲಿಲ್ಲ. ನರ್ಸ್ ಗಳು ಮಗುವನ್ನು ಇನ್ ಕ್ಯುಬೇಟರ್ ನಿಂದ ಹೊರಕ್ಕೆ ತೆಗೆದುಬಿಟ್ಟರು. ಮಗು ಸಾವನ್ನಪ್ಪಿತು' ಎಂದು ಮಗುವನ್ನು ಕಳೆದುಕೊಂಡ ಅಪ್ಪ ಸಂಜೀವ್ ಕುಮಾರ್ ಗೋಳಾಡಿದ್ದಾರೆ.(ಪಿಟಿಐ)












Click it and Unblock the Notifications