ರಾಜಸ್ತಾನದಲ್ಲಿ ಒಂದು ಅಮಾನವೀಯ ಘಟನೆ, ಶೇಮ್

ಕಾನೂನನ್ನು ಕೈಗೆ ತೆಗೆದುಕೊಂಡಿದ್ದು ಗ್ರಾಮ ಪಂಚಾಯಿತಿಯ ಸದಸ್ಯರು. ಎಲ್ಲಕ್ಕಿಂತ ಹೇಯವಾದ ಸಂಗತಿಯೆಂದರೆ, ಆ ಮಹಿಳೆಯನ್ನು ವಿವಸ್ತ್ರಳನ್ನಾಗಿ ಮಾಡಿದ್ದು ಸ್ವತಃ ಆಕೆಯ ಗಂಡ ಹಂಜಿ ಮೀನಾ. ಸಾಲದೆಂಬಂತೆ, ತೀವ್ರವಾಗಿ ಗಾಯಗೊಂಡಿದ್ದ ಅವರಿಬ್ಬರನ್ನು ರಕ್ಷಿಸಲು ಬಂದ ಪೊಲೀಸರ ಮೇಲೆ ಹಳ್ಳಿಗರು ಕಲ್ಲು ತೂರಾಟ ನಡೆಸಿದ್ದರಿಂದ ಇಬ್ಬರು ಪೊಲೀಸರು ಕೂಡ ಗಾಯಗೊಂಡಿದ್ದಾರೆ.
ಉದ್ರಿಕ್ತ ಗ್ರಾಮಸ್ಥರ ಗುಂಪಿನಿಂದ ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯತಮನನ್ನು ಪಾರುಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ, ಇಲ್ಲಿಯವರೆಗೆ ಯಾರನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿಲ್ಲ. ಈ ಘಟನೆ ನಡೆಯುತ್ತಿದ್ದಂತೆ ಎಚ್ಚತ್ತಿರುವ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಮಮತಾ ಶರ್ಮಾ ಅವರು ತನ್ನ ಸದಸ್ಯರನ್ನು ಸೋಮವಾರ ಆ ಗ್ರಾಮಕ್ಕೆ ರವಾನಿಸಿದ್ದಾರೆ.
ಘಟನೆಯ ವಿವರ : ಪ್ರಕಾಶ್ ಮೀನಾ ಎಂಬ 27 ವರ್ಷದ ಯುವಕ ನೆರೆಹೊರೆಯಲ್ಲಿರುವ 22 ವರ್ಷದ, ಒಂದು ಹೆಣ್ಣುಮಗುವಿರುವ ಮಹಿಳೆಯೊಡನೆ ಸಂಬಂಧವಿರಿಸಿಕೊಂಡಿದ್ದ. ಆ ಮಹಿಳೆಯ ಗಂಡ ಅಹ್ಮದಾಬಾದ್‌ನಲ್ಲಿ ಇರುತ್ತಿದ್ದರಿಂದ ಇವರಿಬ್ಬರ ಪ್ರೇಮಸಲ್ಲಾಪ ಅವ್ಯಾಹತವಾಗಿ ನಡೆದಿತ್ತು. ಇವರಿಬ್ಬರ ಸಂಬಂಧದ ಬಗ್ಗೆ ಗಂಡನಿಗೂ ಗುಮಾನಿಯಿತ್ತು.
ತಮ್ಮಿಬ್ಬರ ಪ್ರೇಮ ಪ್ರಕರಣ ಬಹಿರಂಗವಾಗಿರುವುದು ತಿಳಿಯುತ್ತಿದ್ದಂತೆ ತನ್ನ ಮೂರು ವರ್ಷದ ಮಗಳನ್ನು ತೊರೆದು ಮಹಿಳೆ ತನ್ನ ಪ್ರಿಯತಮನೊಂದಿಗೆ ಪರಾರಿಯಾಗಿದ್ದಾಳೆ. ಕದ್ದುಮುಚ್ಚಿ ಈ ವ್ಯವಹಾರ ನಡೆಯುವುದಾದರೂ ಎಷ್ಟು ದಿನ? ಇಬ್ಬರು ಶನಿವಾರ ಹತ್ತಿರದ ಹಳ್ಳಿಯಲ್ಲಿ ಗ್ರಾಮಸ್ಥರಿಗೆ ಸಿಕ್ಕುಬಿದ್ದಿದ್ದಾರೆ. ಅವರನ್ನು ಗ್ರಾಮಕ್ಕೆ ಎಳೆತಂದು ಕೋಣೆಯಲ್ಲಿ ಇಡೀ ರಾತ್ರಿ ಕೂಡಿಹಾಕಲಾಗಿದೆ.
ಮರುದಿನ ಆಕೆಯ ಗಂಡ ಮತ್ತು ಕುಟುಂಬದ ಸಮ್ಮುಖದಲ್ಲಿ ಪಂಚಾಯತಿ ನಡೆಸಿ ಅವರಿಬ್ಬರನ್ನು ಶಿಕ್ಷಿಸಲು ಪಂಚಾಯಿತಿ ಸದಸ್ಯರು ತೀರ್ಮಾನಿಸಿದ್ದಾರೆ. ಅವರನ್ನು ಮರಕ್ಕೆ ಕಟ್ಟಿಹಾಕುತ್ತಿದ್ದಂತೆ ಗಂಡನೇ ಸ್ವತಃ ಹೆಂಡತಿಯ ಬಟ್ಟೆಯನ್ನು ಕಿತ್ತುಬಿಸಾಡಿದ್ದಾನೆ. ಪ್ರೇಮಿಗಳಿಬ್ಬರು ಬೇರೆಬೇರೆ ಕೋಮಿಗೆ ಸೇರಿದ್ದು ಗ್ರಾಮಸ್ಥರನ್ನು ಮತ್ತಷ್ಟು ಕೆರಳಿಸಿದೆ. ನಂತರ ಮೂರು ಗಂಟೆಗಳ ಕಾಲ ಗ್ರಾಮಸ್ಥರು ಅವರಿಬ್ಬರನ್ನು ಥಳಿಸಿದ್ದಾರೆ.
ದೌರ್ಜನ್ಯಕ್ಕೊಳಗಾಗಿರುವ ಮಹಿಳೆಯ ಗಂಡ, ಆರು ಜನ ಪಂಚಾಯಿತಿ ಸದಸ್ಯರು ಮತ್ತು ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನಿಸಿದ ನೂರಕ್ಕೂ ಹೆಚ್ಚು ಗ್ರಾಮಸ್ಥರ ವಿರುದ್ಧ ಕೇಸನ್ನು ದಾಖಲಿಸಲಾಗಿದೆ. ಕಾನೂನಿನ ಪ್ರಕಾರ, ಅನೈತಿಕ ಸಂಬಂಧವಿರಿಸಿಕೊಂಡಿದ್ದ ಪ್ರೇಮಿಗಳ ವಿರುದ್ಧ ಕ್ರಮ ಜರುಗಿಸುವ ಬದಲು ತಾವೇ ಸ್ವತಃ ಕಾನೂನನ್ನು ಕೈಗೆ ತೆಗೆದುಕೊಂಡಿರುವುದು ಅಮಾನವೀಯ, ಇದು ಸಮಾಜಕ್ಕೆ ಒಳ್ಳೆಯದಲ್ಲ ಎಂದು ಪ್ರಜ್ಞಾವಂತ ಗ್ರಾಮಸ್ಥರು ಹೇಳುತ್ತಿದ್ದಾರೆ.












Click it and Unblock the Notifications