ಬಿಜೆಪಿ: ಗುಜರಾತ್ ಚುನಾವಣೆಗೆ ಧುಮುಕಿದ ನಟಿ ಜೂಹಿ

ಗಮನಾರ್ಹವೆಂದರೆ ಮೋದಿಗೂ ಎಲ್ಲೋ ಒಂದು ಕಡೆ ತಮ್ಮ ನೆಲೆ ನಡುಗುತ್ತಿದೆ ಎಂಬ ಭೀತಿ ಆವರಿಸಿದಂತಿದೆ. ಹಾಗಾಗಿ, ಮುಂಬರುವ ಚುನಾವಣೆಗಳಲ್ಲಿ ಅದರಲ್ಲೂ ವಿರೋಧ ಪಕ್ಷಗಳ ಪ್ರಬಲ ಅಭ್ಯರ್ಥಿಗಳನ್ನು ಎದುರಿಸಲು ಬಲಾಢ್ಯರನ್ನೇ ಪಣಕ್ಕಿಡುವ ನಡೆ ಮೋದಿ ಅವರದ್ದಾಗಿದೆ. ಚುನಾವಣೆ ಪರ್ವದ ನಾಡಿಮಿಡಿತ ಅರಿಯಲು ಬಾಲಿವುಡ್ ನ ಖ್ಯಾತ ನಟಿ ಜೂಹಿ ಚಾವ್ಲಾ ಅವರ ಹೆಸರನ್ನು ತೇಲಿಬಿಟ್ಟಿದ್ದಾರೆ. ಪಕ್ಷದ ವಕ್ತಾರ ವಿಜಯ್ ರುಪಾನಿ ಈ ಬೆಳವಣಿಗೆಯನ್ನು ದೃಢಪಡಿಸಿದ್ದಾರೆ.
ಕುತೂಹಲದ ಸಂಗತಿಯೆಂದರೆ ನಟಿ ಜೂಹಿ ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಅರ್ಜುನ್ ಮೋಧವಾಡಿಯಾ ವಿರುದ್ಧ ಕಣಕ್ಕಿಳಿಸಲು ಮೋದಿ ಮುಂದಾಗಿದ್ದಾರೆ. ಇದರ ಹಿಂದೆ ಒಂದು ಸ್ವಾರಸ್ಯವೂ ಇದೆ. ಈ GPCC ಅಧ್ಯಕ್ಷ ಮಹೋದಯ್ ಅರ್ಜುನ್ ಅವರು ಇತ್ತೀಚೆಗೆ ಮೋದಿಗೆ ಬಹಿರಂಗ ಸವಾಲು ಹಾಕಿದ್ದರು. 'ತಾಕತ್ತಿದ್ದರೆ ನನ್ನ ವಿರುದ್ಧ ಮುಖ್ಯಮಂತ್ರಿಯೇ ಸ್ಪರ್ಧಿಸಲಿ' ಎಂದು ಪಂಥಾಹ್ವಾನ ನೀಡಿದ್ದರು.
ಆದರೆ ಅರ್ಜುನರ ಸವಾಲಿಗೆ ನೇರವಾಗಿ ಉತ್ತರಿಸದ ಮುಖ್ಯಮಂತ್ರಿ ಮೋದಿ, ನಟಿ ಜೂಹಿಯನ್ನು ಕಣಕ್ಕಿಳಿಸುವ ರಾಜಕೀಯ ದಾಳ ಉರುಳಿಸಲಿದ್ದಾರೆ ಎಂದು ಪಕ್ಷದ ವಕ್ತಾರ ವಿಜಯ್ ಪ್ರಕಟಿಸಿದ್ದಾರೆ. ಅಂದಹಾಗೆ ಕ್ಷೇತ್ರ ಯಾವುದಪ್ಪಾ ಅಂದರೆ ಪೋರಬಂದರ್. ಹೇಮ ಮಾಲಿನಿ ಮತ್ತು ಸ್ಮೃತಿ ಇರಾನಿ ಅವರು ನಟಿ ಜೂಹಿಗೆ ಗಾಳ ಹಾಕಿ ಬಿಜೆಪಿ ಹೆಬ್ಬಾಗಿಲಿಗೆ ತಂದು ನಿಲ್ಲಿಸಿದ್ದಾರೆ.
ನಟಿ ಜೂಹಿಗೂ ಪೋರಬಂದರ್ ಗೂ ಏನಪ್ಪಾ ಸಂಬಂಧ?: ಅಂದ್ರೆ ನಟಿ ಜೂಹಿ ಅವರ ಪತಿ ಜೈ ಮೆಹ್ತಾ ಇದ್ದಾರಲ್ಲಾ ಅವರ ಸ್ವಂತ ಸ್ಥಳ ಪೋರಬಂದರ್! ಈ ಜೈ ಮೆಹ್ತಾ ಅವರ ಅಜ್ಜ ನಾನಾಜಿ ಕಾಳಿದಾಸ ಮೆಹ್ತಾಗೆ ಈ ನಗರದಲ್ಲಿ ದೊಡ್ಡ ಹೆಸರಿದೆ. ಇಲ್ಲಿನ ಜನರ ಕ್ಷೇಮಾಭುದ್ಯಯಕ್ಕೆ ಅವರು ಉತ್ತಮ ಕೊಡುಗೆ ಸಲ್ಲಿಸಿದ್ದಾರಂತೆ. ಇನ್ನು, ನಟಿ ಜೂಹಿ ಅವರು ಬಾಲಿವುಡ್ ಬಾದ್ ಷಾ ಶಾರುಖ್ ಖಾನ್ ಜತೆಗೂಡಿ ಅಂದಾಜು 10 ಕೋಟಿ ರುಪಾಯಿ ನಿರ್ಮಾಣ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಣಾಣದಲ್ಲಿ ತೊಡಗಿದ್ದಾರೆ.
ಜೂಹಿ ದಂಪತಿ ಈಗಾಗಲೇ ಇಲ್ಲಿನ ವೋಟರ್ ಲಿಸ್ಟ್ ನಲ್ಲಿ ತಮ್ಮ ಹೆಸರುಗಳನ್ನು ದಾಖಲಿಸಿಕೊಂಡಿದ್ದಾರೆ. ಹರಿಯಾಣಾದಲ್ಲಿ 1967ರಲ್ಲಿ ಜನಿಸಿದ ಜೂಹಿ ತಮ್ಮನ್ನು ಈಗಾಗಲೇ 'ಗುಜರಾತಿನ ಸೊಸೆ' ಎಂದು ಬಣ್ಣಿಸಿಕೊಂಡಿದ್ದಾರೆ. ಪೋರಬಂದರ್ ಯಾವುದಕ್ಕೆ ಜನಪ್ರಿಯವೆಂದರೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹುಟ್ಟೂರು. ಇನ್ನು ಈ ಅರ್ಜುನ್ ಮೋಧವಾಡಿಯಾ ಅವರು ಪೋರಬಂದರ್ ಕ್ಷೇತ್ರದಿಂದ ಒಂದಲ್ಲ, ಎರಡು ಬಾರಿ ಆರಿಸಿ ಬಂದಿದ್ದಾರೆ.
2007ರಲ್ಲಿ ವಿಧಾನಸಭೆಗೆ ನಡೆದ ಚುನಾವಣೆಗಳಲ್ಲಿ ಮುಖ್ಯಮಂತ್ರಿ ಮೋದಿ ಅವರ ಸಾಂಪ್ರದಾಯಿಕ ಕ್ಷೇತ್ರವಾದ ಮಣಿನಗರದಲ್ಲಿ ಕಾಂಗ್ರೆಸ್ ನಾಯಕ, ಕೇಂದ್ರ ಸಚಿವ ದಿನ್ಷಾ ಪಟೇಲ್ ನಿಂತ ನಿಲುವಿನಲ್ಲೇ ಸೋತರು. ಈ ಮಧ್ಯೆ, ಬಿಜೆಪಿಯಿಂದ ಮುನಿಸಿಕೊಂಡಿರುವ ಹಿರಿಯ ನಾಯಕ ಕೇಶೂಭಾಯಿ ಪಟೇಲ್ ಅವರು ರಾಜ್ಯ ಬಿಜೆಪಿ ಮುಖ್ಯಸ್ಥ ಆರ್ ಸಿ ಫಾಲ್ಡು ವಿರುದ್ಧ ಸ್ಪರ್ಧಿಸಲು ನಿರ್ಧರಿಸಿದ್ದಾರೆ.












Click it and Unblock the Notifications