ಕೇರಳದಲ್ಲಿ ಎಬಿವಿಪಿ ಯುವ ನಾಯಕನ ಬರ್ಬರ ಹತ್ಯೆ

ಎಬಿವಿಪಿಯ ಯುವ ನಾಯಕ ವಿಶಾಲ್ ಎಂಬಾತನನ್ನು 'ಕ್ಯಾಂಪಸ್ ಫ್ರಂಟ್' ಎಂಬ ಭಯೋತ್ಪಾದಕ ಸಂಘಟನೆಯ ವಿದ್ಯಾರ್ಥಿ ಘಟಕದ ಸದಸ್ಯರು ಕೊಲೆಗೈದಿದ್ದಾರೆ. ಜು.16ರಂದು ವಿಶಾಲ್ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳ ಮೇಲೆ ಚೆಂಗನ್ನೂರು ಕ್ರಿಶ್ಚಿಯನ್ ಕಾಲೇಜಿನಲ್ಲಿ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ವಿಶಾಲ್ ಮಂಗಳವಾರ, ಜು.17ರಂದು ಬೆಳಗಿನ ಜಾವ ಅಸುನೀಗಿದ್ದಾನೆ.
ಚೆಂಗನ್ನೂರು ನಗರದ ಎಬಿವಿಪಿಯ ಯುವ ನಾಯಕನಾಗಿ ವಿಶಾಲ್ ಕ್ರಿಯಾಶೀಲವಾಗಿ ತೊಡಗಿಕೊಂಡಿದ್ದ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಕ್ಷಾ ವರ್ಗದಲ್ಲಿ ವಿಶಾಲ್ ತರಬೇತಿ ಕೂಡ ಪಡೆದಿದ್ದ. ನಂತರ ಆರ್ಎಸ್ಎಸ್‌ನ ಶಾರೀರಿಕ್ ಪ್ರಮುಖನಾಗಿ ಕಾರ್ಯ ನಿರ್ವಹಿಸುತ್ತಿದ್ದ. ವಿಶಾಲ್‌ನನ್ನು ಚೂರಿಯಿಂದ ಇರಿಯಲಾಗಿತ್ತು. ಆತನನ್ನು ಕೂಡಲೆ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು.
ಆಸ್ಪತ್ರೆಯ ವೈದ್ಯರ ಪ್ರಕಾರ, ಆತನ ಹೊಟ್ಟೆಗೆ ಮತ್ತು ಬೆನ್ನಿಗೆ ಇರಿಯಲಾಗಿತ್ತು ಮತ್ತು ಆತನ ಯಕೃತ್ತು ಮತ್ತಿತರ ಭಾಗಗಳಿಗೆ ತೀವ್ರ ಗಾಯಗಳಾಗಿದ್ದವು. ಆಸ್ಪತ್ರೆಗೆ ಸೇರಿಸಿದಾಗ ಆತನ ರಕ್ತದೊತ್ತಡ ಕೂಡ ಕಡಿಮೆಯಾಗಿತ್ತು. ವಿಶಾಲ್‌ನನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲಾಯಿತಾದರೂ ಆತ ಬದುಕಿ ಉಳಿಯಲಿಲ್ಲ.
ಚೆಂಗನ್ನೂರು ಕ್ರಿಶ್ಚಿಯನ್ ಕಾಲೇಜಿನ ಕ್ಯಾಂಪಸ್ಸಿನಲ್ಲಿಯೇ ವಿಶಾಲ್ ಮತ್ತು ಇತರ ಸ್ನೇಹಿತರಾದ ವಿಷ್ಣುಪ್ರಸಾದ್ ಮತ್ತು ಶ್ರೀಜಿತ್ ಮೇಲೆ ಕೂಡ ಕ್ಯಾಂಪಸ್ ಫ್ರಂಟ್ ಭಯೋತ್ಪಾದಕರು ಹಲ್ಲೆ ಮಾಡಿದ್ದರು. ಅವರಿಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. (ಸುದ್ದಿಮೂಲ : ವಿಶ್ವಸಂವಾದ ಕೇಂದ್ರ)












Click it and Unblock the Notifications