• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕಳಂಕಿತರನ್ನು ಕೈಬಿಡಿ, ಕರುಣಾ ಭಿನ್ನಮತದ ಹೊಗೆ

By Prasad
|
Karunakara Reddy
ಬೆಂಗಳೂರು, ಜು. 15 : ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಕಳಂಕಿತರನ್ನು ಸಂಪುಟದಲ್ಲಿ ಸೇರಿಸಿಕೊಳ್ಳಬೇಡಿ ಎಂಬ ಬುದ್ಧಿಮಾತನ್ನು ಕಡೆಗಣಿಸಲಾಗಿದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಆಕ್ರೋಶಕ್ಕೆ ಗುರಿಯಾಗಿದ್ದ ಜಗದೀಶ್ ಶೆಟ್ಟರ್ ಅವರಿಗೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ಕಂದಾಯ ಸಚಿವ ಕರುಣಾಕರ ರೆಡ್ಡಿ ಅವರಿಂದ ಭಾರೀ ಪ್ರತಿರೋಧ ವ್ಯಕ್ತವಾಗಿದೆ.

ಇಷ್ಟುದಿನ ತೆರೆಮರೆಯಲ್ಲೇ ಇದ್ದ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿರುವ ಜನಾರ್ದನ ರೆಡ್ಡಿ ಅವರ ಸಹೋದರ ಗಾಲಿ ಕರುಣಾಕರ ರೆಡ್ಡಿ ಅವರು ಸಂಪುಟ ಪುನಾರಚನೆ, ಜಾತಿವಾರು ಪ್ರಾತಿನಿಧ್ಯಗಳಿಗೆ ಸಂಬಂಧಿಸಿದಂತೆ ಜಗದೀಶ್ ಶೆಟ್ಟರ್ ಅವರ ವಿರುದ್ಧ ಬಂಡಾಯವೆದ್ದಿದ್ದಾರೆ. ತಮ್ಮ ಜೊತೆ 20ಕ್ಕೂ ಹೆಚ್ಚು ಶಾಸಕರಿದ್ದು, ತಮ್ಮ ಬೇಡಿಕೆಗಳಿಗೆ ಮಣಿಯದಿದ್ದರೆ ನಮ್ಮ ದಾರಿ ನಮಗೆ, ನಿಮ್ಮ ದಾರಿ ನಿಮಗೆ ಎಂದು ಎಚ್ಚರಿಕೆ ನೀಡಿದ್ದಾರೆ.

ಭಾನುವಾರ ನಗರದ ಅಶೋಕ ಹೋಟೆಲಿನಲ್ಲಿ ಕರುಣಾಕರ ರೆಡ್ಡಿ, ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಜೊತೆ ಅನೇಕ ಭೂಹಗರಣಗಳಲ್ಲಿ ಭಾಗಿಯಾಗಿರುವ ಮಾಲೂರು ಶಾಸಕ ಕೃಷ್ಣಯ್ಯ ಶೆಟ್ಟಿ ಮುಂತಾದವರು ಭೇಟಿಯಾಗಿ ತಮ್ಮ ಮುಂದಿನ ನಡೆಗಳ ಬಗ್ಗೆ ಚರ್ಚೆ ನಡೆಸಿದರು.

ಸಭೆಯ ನಂತರ ಮಾಧ್ಯಮದವರೊಡನೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಅವರು, ಸಂಪುಟದಲ್ಲಿ ಸೇರಿಸಿಕೊಂಡಿರುವ ಕಳಂಕಿತ ಶಾಸಕರನ್ನು ಕೈಬಿಡಲೇಬೇಕು. ಇದನ್ನು ರಾಜ್ಯಪಾಲರು ಕೂಡ ಹೇಳಿದ್ದಾರೆ. ಸಂಪುಟದಲ್ಲಿ ಜಾತಿವಾರು ಪ್ರಾತಿನಿಧ್ಯ ನೀಡುವಾಗ ತಾರತಮ್ಯ ಮಾಡಲಾಗಿದೆ. ಅಲ್ಲದೆ, ಜಿಲ್ಲಾವಾರು ಪ್ರಾತಿನಿಧ್ಯ ನೀಡುವಾಗಲೂ ಅನೇಕ ಜಿಲ್ಲೆಗಳಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.

ಸದ್ಯದಲ್ಲಿಯೇ ಈ ಎಲ್ಲ ಬೇಡಿಕೆಗಳನ್ನು ಪಟ್ಟಿ ಮಾಡಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ದೆಹಲಿಯ ಹಿರಿಯರಿಗೆ ಮನವಿ ಪತ್ರ ಸಲ್ಲಿಸುವುದಾಗಿ ಕರುಣಾಕರ ರೆಡ್ಡಿ ಪತ್ರಕರ್ತರಿಗೆ ತಿಳಿಸಿದರು. ಬೇಡಿಕೆಗಳಿಗೆ ಮಣಿಯದಿದ್ದರೆ ಜು.20ರಂದು ಮತ್ತೆ ಭೇಟಿಯಾಗಿ ಭವಿಷ್ಯದ ಬಗ್ಗೆ ಖಚಿತ ನಿರ್ಧಾರಕ್ಕೆ ಬರುವುದಾಗಿ ಹೇಳಿ, ಮುಂಬರುವ ರಾಜಕೀಯ ಸುನಾಮಿಯ ಬಗ್ಗೆ ಸೂಚನೆ ನೀಡಿದರು.

ಸಂಪುಟದಲ್ಲಿ ಸ್ಥಾನ ಸಿಗಲಿಲ್ಲವೆಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಯಾರಾದರೂ ಜೈಲಿಗೆ ಹೋದಾಗ ಸ್ಥಾನ ಸಿಗಬಹುದೆಂದು ಲೇವಡಿ ಮಾಡಿದ್ದಾರೆ, ಕಾಮುಕ ಶಾಸಕರ ಕುಮ್ಮಕ್ಕಿನಿಂದ ಸ್ಥಾನ ತಪ್ಪಿದೆ ಎಂದು ಬೇಳೂರು ಗೋಳಾಡುತ್ತಿದ್ದಾರೆ, ರಾಜ್ಯಪಾಲರೂ ತಮ್ಮ ಕೆಂಗಣ್ಣು ಬೀರಿದ್ದಾರೆ. ಇಷ್ಟೆಲ್ಲ ಅಡೆತಡೆಗಳನ್ನು ಜಗದೀಶ್ ಶೆಟ್ಟರ್ ಸರಕಾರ ಎದುರಿಸುತ್ತಿದ್ದರೂ ಶೆಟ್ಟರ್ ಮತ್ತು ಈಶ್ವರಪ್ಪ ಅವರು ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ, ಇನ್ನೇನಿದ್ದರೂ ಒಗ್ಗಟ್ಟಿನ ಪ್ರದರ್ಶನ ಎಂದು ಹೋದಲ್ಲೆಲ್ಲ ಹೇಳಿಕೊಂಡು ತಿರುಗುತ್ತಿದ್ದಾರೆ.

ಒಂದು ಮೂಲದ ಪ್ರಕಾರ, ಸಂಪುಟದಲ್ಲಿ ಸ್ಥಾನ ಸಿಗದವರು, ಫಲಪ್ರದವಾದ ಖಾತೆ ಸಿಗದವರು, ಸೇಡಿಗಾಗಿ ಕತ್ತಿ ಮಸೆಯುತ್ತಿರುವವರನೇಕರು ಈಗಾಗಲೆ ಕರುಣಾಕರ ರೆಡ್ಡಿಯ ಬಣದೊಂದಿಗೆ ಕೈಜೋಡಿಸಿದ್ದಾರೆ. ಇದರೊಂದಿಗೆ ಯಡಿಯೂರಪ್ಪ, ಸದಾನಂದ ಗೌಡರ ಬಣದ ಜೊತೆಗೆ ಕರುಣಾಕರ ರೆಡ್ಡಿಯ ಮತ್ತೊಂದು ಬಣವೂ ಹುಟ್ಟಿಕೊಂಡಂತಾಗಿದೆ. ಇವರಲ್ಲಿ ಕೆಲವರು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಜೊತೆಗೂ ಕೈಜೋಡಿಸಲು ತೆರೆಮರೆಯಲ್ಲಿ ಪ್ರಯತ್ನ ನಡೆಸಿದ್ದಾರೆ.

ರಾಷ್ಟ್ರಪತಿ ಚುನಾವಣೆ ನಡೆಯುವ ಜುಲೈ 19ರಂದೇ ಕರ್ನಾಟಕದಲ್ಲಿ ವಿಧಾನಸಭೆ ಮುಂಗಾರು ಅಧಿವೇಶನ ಆರಂಭವಾಗಲಿದೆ. ಮುಂದಿಟ್ಟಿರುವ ನಾನಾ ಬೇಡಿಕೆಗಳಿಗೆ ಜಗದೀಶ್ ಶೆಟ್ಟರ್ ಅವರು ಸೊಪ್ಪು ಹಾಕದಿದ್ದರೆ, ರಾಜ್ಯಪಾಲರು ಶೆಟ್ಟರ್ ಅವರು ವಿಶ್ವಾಸಮತ ಯಾಚಿಸಲು ಸೂಚಿಸಿದರೆ ಸರಕಾರ ತೊಂದರೆಗೆ ಈಡಾಗುವುದು ಖಚಿತ. ಭಾನುವಾರವೇ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್‌ನ ಬೃಹತ್ ಸಮಾವೇಶದಲ್ಲಿ ಕುಮಾರಸ್ವಾಮಿಯವರು ಚುನಾವಣೆಯ ಕಹಳೆಯೂದಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಜಗದೀಶ್ ಶೆಟ್ಟರ್ ಸುದ್ದಿಗಳುView All

English summary
In the line of Governor Hansraj Bhardwaj, former Revenue minister G Karunakara Reddy and 20 other MLAs have asked Jagadish Shettar to drop tained ministers from the cabinet. They all met in Ashoka Hotel in Bangalore to chalk out their next plan.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more