ಮುಸ್ಲಿಂ ಸಮಾವೇಶದಲ್ಲಿ ಶಾಪ ವಿಮೋಚನೆ: ದೇವೇಗೌಡ

Posted By:
Subscribe to Oneindia Kannada
HD Devegowda
ಬೆಂಗಳೂರು, ಜು. 15: ಬೆಂಗಳೂರಿನ ಅರಮನೆ ಮೈದಾನದಲ್ಲಿ ಇಂದು (15 ಜುಲೈ 2012) ಜೆಡಿಎಸ್ ಹಮ್ಮಿಕೊಂಡಿರುವ ಮುಸ್ಲಿಂ ವಿಶೇಷ ಸಮಾವೇಶವನ್ನು ಜೆಡಿಎಸ್ ವರಿಷ್ಠ, ಮಾಜಿ ಮುಖ್ಯಮಂತ್ರಿ ಎಚ್ ಡಿ ದೇವೇಗೌಡ ಉದ್ಘಾಟಿಸಿದ್ದಾರೆ. ಜೆಡಿಎಸ್ ರಾಜ್ಯ ಘಟಕ ಮುಖ್ಯಸ್ಥ ಹಾಗೂ ಮಾಜಿ ಮುಖ್ಯ ಮಂತ್ರಿ ಕುಮಾರಸ್ವಾಮಿ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

ಅನಾರೋಗ್ಯದ ನಿಮಿತ್ತ ಈ ಸಮಾರಂಭದ ವೇದಿಕೆಗೆ ಕ್ರೇನ್ ಮೂಲಕ ಆಗಮಿಸಿದ ದೇವೇಗೌಡರು, "ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಿದ್ದಕ್ಕೆ ನಮ್ಮ ಕುಟುಂಬಕ್ಕೆ ಶಾಪ ತಟ್ಟಿದೆ. ನಮ್ಮ ಕುಟುಂಬಕ್ಕೆ ತಟ್ಟಿರುವ ಶಾಪ ವಿಮೋಚನೆ ಆಗಬೇಕು. ಮುಸ್ಲಿಂ ಧರ್ಮ ಗುರುಗಳು ಆಶೀರ್ವಾದ ಮಾಡಿ. ಈ ಮುಸ್ಲಿಂ ಬೃಹತ್ ಸಮಾವೇಶದ ಮೂಲಕ ನಮ್ಮ ಶಾಪ ವಿಮೋಚನೆ ಆಗಿದೆ" ಎಂದಿದ್ದಾರೆ.

ಅಷ್ಟೇ ಅಲ್ಲ, "ನನ್ನ ಮಗ, ಕುಮಾರಸ್ವಾಮುಗೆ ಮುಸ್ಲಿಂ ಬಾಂಧವರ ಆಶೀರ್ವಾದ ಬೇಕು. ಅಲ್ಪ ಸಂಖ್ಯಾತರಾಗಿರುವ ಮುಸ್ಲಿಂಮರು ಒಗ್ಗೂಡಿಬೇಕು. ತಮ್ಮ ಹಕ್ಕುಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಬೇಕು. ಮೊದಲನೆಯದಾಗಿ ಮುಸ್ಲಿಂ ಜನಾಂಗದ ಏಳಿಗೆಗಾಗಿ ಎಲ್ಲಾ ಪಕ್ಷಗಳು ತಮ್ಮ ಪಕ್ಷಬೇಧ ಮರೆತು ಹೋರಾಡಬೇಕಿದೆ. ಜೆಡಿಎಸ್ ಮುಸ್ಲಿಂ ಜನಾಂಗದ ಏಳ್ಗೆಗೆ ಕಂಕಣಬದ್ಧವಾಗಿದೆ" ಎಂದು ಈ ಸಂದರ್ಭದಲ್ಲಿ ದೇವೇಗೌಡರು ಹೇಳಿದ್ದಾರೆ.

ಈ ಐತಿಹಾಸಿಕ ಸಮಾರಂಭದಲ್ಲಿ ಎಚ್ ಡಿ ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ಅವರಿಗೆ ಮುಸ್ಲಿಂ ಜನಾಂಗದಿಂದ ಸನ್ಮಾನ ಮಾಡಲಾಯಿತು. ಬೃಹತ್ ಮುಸ್ಲಿಂ ಐಕ್ಯತಾ ಈ ಸಮಾರಂಭಕ್ಕೆ ವಿವಿಧ ರಾಜ್ಯಗಳಿಂದಲೂ ಸೇರಿ ಲಕ್ಷಾಂತರ ಮಂದಿ ಆಗಮಿಸಿದ್ದಾರೆ. ಕೋಲಾರ ಹಾಗೂ ರಾಜ್ಯದ ವಿವಿದೆಡೆಗಳಿಂದ ಬಂದಿರುವ ಲಕ್ಷಾಂತರ ಮಂದಿ ಮುಸ್ಲಿಮರು ಸೇರಿ ಭಾರೀ ಜನರು ಅರಮನೆ ಮೈದಾನದಲ್ಲಿ ಆಸೀನರಾಗಿದ್ದಾರೆ.

ಈ ಸಮಾರಂಭಕ್ಕೆ 150 ಮುಸ್ಲಿಂ ಧರ್ಮಗುರುಗಳು ಆಗಮಿಸಿದ್ದಾರೆ. ಜೊತೆಗೆ ಜಮೀರ್ ಅಹಮ್ಮದ್, ಡ್ಯಾನಿಶ್ ಅಲಿ, ಕುಮಾರ್ ಬಂಗಾರಪ್ಪ, ಪಿ ಜಿ ಆರ್ ಸಿಂಧ್ಯ, ನಟಿಯರಾದ ಪೂಜಾ ಗಾಂಧಿ, ಮಾಳವಿಕಾ ಕೂಡ ಆಗಮಿಸಿದ್ದಾರೆ. ಸುರಿಯುತ್ತಿರುವ ಮಳೆಯನ್ನೂ ಲೆಕ್ಕಿಸದೇ ಲಕ್ಷಾಂತರ ಜನರು ಈ ಬೃಹತ್ ಐತಿಹಾಸಿಕ ಸಮಾವೇಶದಲ್ಲಿ ಭಾಗಿಯಾಗಿದ್ದಾರೆ. ಜೆಡಿಎಸ್ ಕಾರ್ಯಕರ್ತರು ಈ ಸಮಾರಂಭಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ.

ಕರ್ನಾಟಕದ ಎರಡು ಪ್ರಬಲ ಜನಾಂಗವಾದ ಲಿಂಗಾಯತರು ಹಾಗೂ ಒಕ್ಕಲಿಗರ ಹೊರತಾಗಿ ಭಾರಿ ಸಂಖ್ಯೆಯಲ್ಲಿ ಇರುವ ಮುಸ್ಲಿಂ ಜನಾಂಗದತ್ತ ಜೆಡಿಎಸ್ ಪಕ್ಷವೀಗ ತನ್ನ ಗಮನ ಕೇಂದ್ರೀಕರಿಸಿದೆ. ಇಲ್ಲಿರುವ ಶೇ. 12 ರಷ್ಟು ಮುಸ್ಲಿಂ ಜನಾಂಗದ ಓಟು ಚುನಾವಣೆಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸಲಿದೆಯೆಂಬುದು ಜೆಡಿಎಸ್ ಗೆ ಗೊತ್ತಿರುವ ವಿಚಾರ. ಹೀಗಾಗಿ ಚುನಾವಣೆ ಪೂರ್ವದಲ್ಲಿ ತಮ್ಮ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಜೆಡಿಎಸ್, ಮುಸ್ಲಿಂ ವಿಶೇಷ ಸಮಾವೇಶವನ್ನು ಹಮ್ಮಿಕೊಂಡಿದೆ.

ಈ ಸಮಾವೇಶದ ಉದ್ದೇಶದ ಕುರಿತು ಈ ಮೊದಲು ಮಾತನಾಡಿದ್ದ ಜೆಡಿಎಸ್ ರಾಜ್ಯ ಘಟಕ ಮುಖ್ಯಸ್ಥ ಕುಮಾರಸ್ವಾಮಿ "ಮುಸ್ಲಿಂ ಜನಾಂಗಕ್ಕೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ನಿರಂತರವಾಗಿ ಅವರು ಸೌಲಭ್ಯಗಳಿಂದ ವಂಚಿತರನ್ನಾಗಿಸಲಾಗಿದೆ. ಈ ಸಮಾವೇಶದ ಮೂಲಕ ಅವರಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ಅವರಿಗಿರುವ ಹಕ್ಕುಗಳ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಲಾಗುವುದು" ಎಂದಿದ್ದರು.

ಅಷ್ಟೇ ಅಲ್ಲದೇ, ಅಸೆಂಬ್ಲಿಯಲ್ಲಿ ಈಗಿರುವ 26ಕ್ಕೆ ಒಬ್ಬ ಮುಸ್ಲಿಂ ಎಂಎಲ್ ಎ ಬದಲಾಗಿ 15 ರಿಂದ 20 ಅಭ್ಯರ್ಥಿಗಳನ್ನು ಮುಂದಿನ ಅಸೆಂಬ್ಲಿಯಲ್ಲಿ ಭರ್ತಿ ಮಾಡಲಾಗುವುದೆಂದು ಎಚ್ಡಿಕೆ ಹೇಳಿಕೆ ನೀಡಿದ್ದರು. ಈ ಎಲ್ಲಾ ಕಾರಣಗಳಿಂದ ಇಂದು ಜೆಡಿಎಸ್ ಹಮ್ಮಿಕೊಂಡಿರುವ ಬೃಹತ್ ಸಮಾವೇಶ ಅತ್ಯಂತ ಮಹತ್ವವಾಗಿದೆ. ಜೆಡಿಎಸ್ ವರಿಷ್ಠ ದೇವೇಗೌಡರಿಂದ ಉದ್ಘಾಟಿಸಲ್ಪಟ್ಟ ಇದು ಐತಿಹಾಸಿಕ ಸಮಾವೇಶ ಎನಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ahead of the 2013 elections, the JDS organized an exclusive convention for Muslims at Bangalore Palace Ground on 15th July 2012. JD(S) Chief HD Devegowda has launched it. And state unit chief H D Kumaraswamy also presented. 
 
Please Wait while comments are loading...