ಹಾಲಾಡಿ ಬೆಂಬಲಿಸಿ ಜು.13ರಂದು ಕುಂದಾಪುರ ಬಂದ್

Posted By:
Subscribe to Oneindia Kannada
Halady Srinivas Shetty
ಬೆಂಗಳೂರು, ಜು.12: ಕರಾವಳಿಯ ಶಾಸಕರಿಗೆ ಯಾವುದೇ ಸಚಿವ ಸ್ಥಾನ ನೀಡದಿರುವ ಬಗ್ಗೆ ಕಣ್ಣೀರ ಕೊಡಿ ಹರಿದ ಮೇಲೆ ಅಸಮಾಧಾನದ ಹೊಗೆಯಾಡುತ್ತಿದೆ. ಕುಂದಾಪುರದ ವಾಜಪೇಯಿ ಎಂದೇ ಖ್ಯಾತರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿರುವುದನ್ನು ಖಂಡಿಸಿ ಶುಕ್ರವಾರ(ಜು.13) ಕುಂದಾಪುರ ತಾಲೂಕ್ ಬಂದ್ ಗೆ ಕರೆ ನೀಡಲಾಗಿದೆ.

ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಮೊದಲಿಗೆ ಸಚಿವ ಸ್ಥಾನದ ಭರವಸೆ ನೀಡಲಾಗಿತ್ತು. ಆದರೆ, ಅಂತಿಮ ಗಳಿಗೆಯಲ್ಲಿ ಎಂಎಲ್ ಸಿ ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸ್ಥಾನ ಕಲ್ಪಿಸಲಾಯಿತು. ಇದರಿಂದ ತೀವ್ರವಾಗಿ ನೊಂದ ಮೃದು ಮನಸ್ಸಿನ ನಾಯಕ ಹಾಲಾಡಿ ಶೆಟ್ಟಿ ಅವರು ಕಣ್ಣೀರಿಟ್ಟಿದ್ದರು.

ಉಡುಪಿ ಕ್ಷೇತ್ರದ ಶಾಸಕ ರಘುಪತಿಭಟ್, ಸಚಿವ ಸಂಪುಟ ವಿಸ್ತರಣೆ ವೇಳೆ ಮೋಸದ ರಾಜಕೀಯ ಮಾಡಲಾಗಿದೆ. ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಹೇಳಿ ವಂಚನೆ ಮಾಡಲಾಗಿದೆ. ಹೀಗಾಗಿ ನಾವು ಶಾಸಕರಾಗಿ ಮುಂದುವರೆಯುವುದರಲ್ಲಿ ಅರ್ಥವಿಲ್ಲ. ಈ ಕೂಡಲೇ ನಾವಿಬ್ಬರೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇವೆ ಎಂದು ಘೋಷಿಸಿದರು.

ಹಾಲಾಡಿ ಶ್ರೀನಿವಾಸಶೆಟ್ಟಿ ಅವರಿಗೆ ಸಚಿವ ಸ್ಥಾನ ದೊರೆಯದ ಹಿನ್ನೆಲೆಯಲ್ಲಿ ಬೇಸತ್ತಿರುವ ಮಾಜಿ ಸಚಿವ ಬಿ.ನಾಗರಾಜಶೆಟ್ಟಿ, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ತಮ್ಮ ನಾಯಕನಿಗೆ ಸಚಿವ ಸ್ಥಾನ ಸಿಗದಿರುವ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿದ ಕುಂದಾಪುರ ಪುರಸಭೆ, ತಾಲೂಕು ಪಂಚಾಯತ್, ಗ್ರಾಮ ಪಂಚಾಯಿತಿ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ರಾಜೀನಾಮೆ ನೀಡಿದ್ದಾರೆ.

ಮೂರು ಸಲ ಶಾಸಕರಾಗಿ ಆಯ್ಕೆಯಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಸಚಿವ ಸ್ಥಾನ ತಪ್ಪಿರುವುದು ಹಾಗೂ ಕರಾವಳಿ ಭಾಗಕ್ಕೆ ಸೂಕ್ತ ಪ್ರಾತಿನಿಧ್ಯ ದೊರೆಯದಿರುವುದಕ್ಕೆ ಹಾಲಾಡಿ ಶೆಟ್ಟಿ ಅವರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್, ಉಡುಪಿ ಕ್ಷೇತ್ರದ ಶಾಸಕ ರಘುಪತಿಭಟ್, ಬೈಂದೂರು ಕ್ಷೇತ್ರದ ಶಾಸಕ ಲಕ್ಷ್ಮೀನಾರಾಯಣ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರ ಸಭೆಯಲ್ಲಿ ಸಂಪುಟ ವಿಸ್ತರಣೆ ಕುರಿತ ಚರ್ಚೆ ನಡೆಸಿ ಪ್ರತಿಭಟನೆ ಬಗ್ಗೆ ನಿರ್ಧರಿಸಿದರು.

ಮಾತಿಗೆ ತಪ್ಪಿದ ಬಿಜೆಪಿ: ಸಂಪುಟ ವಿಸ್ತರಣೆ ಸಂದರ್ಭದಲ್ಲಿ ತಮಗೆ ಸಚಿವ ಸ್ಥಾನ ನೀಡುವ ಖಚಿತ ಭರವಸೆಯನ್ನು ವರಿಷ್ಟರು ನೀಡಿದ್ದರು. ನಿನ್ನೆ ಸಂಜೆ ಸಹ ನನಗೆ ಸಚಿವ ಸ್ಥಾನ ನೀಡಲಾಗಿದ್ದು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದರು. ಆ ಹಿನ್ನೆಲೆಯಲ್ಲಿ ನಾನು ಬೆಂಗಳೂರಿಗೆ ಆಗಮಿಸಿದ್ದೆ. ಆದರೆ, ಸಚಿವ ಸ್ಥಾನ ನೀಡುವ ಸಂಬಂಧ ಅಧಿಕೃತ ಪತ್ರ ಬರಲಿ ಎಂದು ಕಾದು ಕುಳಿತಿದ್ದ ತಮಗೆ ಭಾರೀ ನಿರಾಶೆ ಉಂಟಾಯಿತು ಎಂದು ಹಾಲಾಡಿ ಶ್ರೀನಿವಾಸ ಶೆಟ್ಟಿ ದುಃಖ ತೋಡಿಕೊಂಡಿದ್ದಾರೆ.

ಗುರುವಾರ ಬೆಳಿಗ್ಗೆ 11 ಗಂಟೆವರೆಗೂ ಸಚಿವ ಸ್ಥಾನ ಸಿಗುವ ಭರವಸೆ ಹೊತ್ತುಕೊಂಡಿದ್ದ ಹಾಲಾಡಿ ಶೆಟ್ಟಿ ಅವರಿಗೆ ತಮ್ಮ ಬದಲು ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂಬ ಮಾಹಿತಿ ಒಂದು ಕ್ಷಣ ದಿಗ್ಬ್ರಮೆ ಉಂಟು ಮಾಡಿತು.

ನಾನೆಂದು ಅಧಿಕಾರಕ್ಕೆ ಆಸೆ ಪಟ್ಟವನಲ್ಲ. ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ, ಹಿರಿಯ ನಾಯಕರು ಕೊಟ್ಟ ಭರವಸೆ ಮೇರೆಗೆ ಪ್ರಮಾಣ ವಚನ ಸಮಾರಂಭಕ್ಕೆ ಬಂದಿದ್ದೆ ಎಂದು ಶೆಟ್ಟಿ ಹೇಳಿದ್ದಾರೆ. ನನಗೆ ಸಚಿವ ಸ್ಥಾನ ನೀಡದಿದ್ದರೂ ನನಗೆ ಬೇಸರವಾಗುತ್ತಿರಲಿಲ್ಲ. ಆದರೆ, ಪಕ್ಷದ ಹಿರಿಯರು ಸಚಿವ ಸ್ಥಾನ ನೀಡಲಾಗಿದೆ.

ಬೆಂಗಳೂರಿಗೆ ಬರುವಂತೆ ಹೇಳಿ ಕೊನೆಗಳಿಗೆಯಲ್ಲಿ ನನ್ನ ಹೆಸರು ಕೈ ಬಿಟ್ಟಿರುವುದು ನಿಜಕ್ಕೂ ನನಗೆ ಮತ್ತು ನನ್ನ ಕ್ಷೇತ್ರದ ಜನರಿಗೆ ಮಾಡಿದ ಅವಮಾನ. ಇದನ್ನು ಸಹಿಸಲು ಸಾಧ್ಯವೇ ಇಲ್ಲ. ತತ್ವ, ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನನಗೆ ಬಿಜೆಪಿ ನಾಯಕರು ನಂಬಿಕೆದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೆ ಪಕ್ಷದ ವರಿಷ್ಟರು ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Halady Srinivasa Shetty, who is populary known as 'Vajapayee of Kundapur' has won the elections four times from Kundapur but today failed to qualify for Jagadish Shettar cabinet instead MLC Kota Srinivas Poojary gets cabinet berth. In support of Haladi Srinivas Shetty Kundapura is observing Bandh on July 13.
Please Wait while comments are loading...