ರೆಡ್ಡಿ ಬೇಲ್ ಗಾಗಿ ಡೀಲ್: 3ನೇ ಜಡ್ಜ್ ಅಮಾನತು

Gali Janardhan Reddy
ಹೈದರಾಬಾದ್, ಜು.11: ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಬೇಲ್ ಗಾಗಿ ಡೀಲ್ ಪ್ರಕರಣ ಮೂರನೇ ಜಡ್ಜ್ ಬಲಿ ತೆಗೆದುಕೊಂಡಿದೆ. ಸಿಟಿ ಸಿವಿಲ್ ತ್ವರಿತಗತಿ ಕೋರ್ಟ್ ನ್ಯಾ ಲಕ್ಷ್ಮಿನರಸಿಂಹರಾವ್ ಅವರನ್ನು ಅಮಾನತುಗೊಳಿಸಿ ಆಂಧ್ರಪ್ರದೇಶ ಹೈಕೋರ್ಟ್ ಬುಧವಾರ (ಜು.11) ಆದೇಶ ಹೊರಡಿಸಿದೆ.

ಪಟ್ಟಾಭಿರಾಮರಾವ್, ಪ್ರಭಾಕರರಾವ್ ನಂತರ ನ್ಯಾ ಲಕ್ಷ್ಮಿ ನರಸಿಂಹರಾವ್ ಅವರು ಅಮಾನತುಗೊಂಡಿದ್ದಾರೆ. ರಾಜ್ಯ ಚುನಾವಣಾ ಆಯೋಗದ ಕಾನೂನು ಸಲಹೆಗಾರರಾಗಿದ್ದ ಪ್ರಭಾಕರರಾವ್ ಅವರೊಂದಿಗೆ ಲಕ್ಷ್ಮಿನರಸಿಂಹರಾವ್ ಅವರು ಜೊತೆಗೂಡಿ ನ್ಯಾ ಪಟ್ಟಾಭಿರಾಮರಾವ್ ಅವರು 10 ಕೋಟಿ ರು ಪಡೆದು ಗಾಲಿ ರೆಡ್ಡಿ ಪರ ಆದೇಶ ಹೊರಡಿಸಿದ್ದರು ಎನ್ನಲಾಗಿದೆ.ಜು.6 ರಂದು ಪ್ರಭಾಕರರಾವ್ ಅವರನ್ನು ಆಯೋಗದಿಂದ ಹಿಂದಕ್ಕೆ ಕರೆಸಿಕೊಳ್ಳಲಾಗಿತ್ತು ಹಾಗೂ ಸೇವೆಯಿಂದ ಅಮಾನತು ಅಮಾನತುಗೊಳಿಸಲಾಗಿತ್ತು.

ಓಬಳಾಪುರಂ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ರೆಡ್ಡಿಗೆ ಮೇ11 ರಂದು ಜಡ್ಜ್ ಪಟ್ಟಾಭಿರಾಮರಾವ್ ಅವರು ಜಾಮೀನು ನೀಡಿದ್ದರು. ನಂತರ ಸಿಬಿಐ ತನಿಖೆಯಿಂದ ಜಡ್ಜ್ ಹಾಗೂ ಗಾಲಿ ರೆಡ್ಡಿ ನಡುವೆ ನಡೆದಿದ್ದ ಡೀಲ್ ಬಹಿರಂಗಗೊಂಡಿತ್ತು. ಜೂ.19ರಂದು ರಾವ್ ಅವರನ್ನು ಅಮಾನತುಗೊಳಿಸಲಾಗಿತ್ತು ಹಾಗೂ ಬಂಧಿಸಲಾಗಿತ್ತು.

ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಮಧ್ಯವರ್ತಿಯಾಗಿದ್ದ ಶ್ರೀಕಾಕುಲಂ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಡಿ. ಪ್ರಭಾಕರ ರಾವ್‌ ಅವರನ್ನು ಶುಕ್ರವಾರ(ಜು.6) ಹೈಕೋರ್ಟ್‌ ಅಮಾನತುಗೊಳಿಸಿತ್ತು.

ಈ ಮಧ್ಯೆ, ಪಟ್ಟಾಭಿರಾಮರಾವ್ ಪುತ್ರ ರವಿಚಂದ್ರ, ಹಾಗೂ ಅವರ ಬಹುಕಾಲದ ಗೆಳೆಯ ಜಡ್ಜ್ ಚಲಪತಿರಾವ್, ರೌಡಿ ಶೀಟರ್ ಯಾದಗಿರಿರಾವ್ ಹಾಗೂ ಹೈದರಾಬಾದಿನ ಉದ್ಯಮಿ ಬಿ ಸೂರ್ಯ ಪ್ರಕಾಶ್ ಅವರನ್ನು ನ್ಯಾಯಾಂಗ ಬಂಧನದಲ್ಲಿದ್ದು ಚೆರ್ಲಪಲ್ಲಿ ಜೈಲಿನಲ್ಲಿರಿಸಲಾಗಿದೆ.

ಜನಾರ್ದನ ರೆಡ್ಡಿಯ ಜಾಮೀನಿಗಾಗಿ KMF ಸೋಮಶೇಖರ ರೆಡ್ಡಿ ಮತ್ತು ಆತನ ಮತ್ತೊಬ್ಬ ಸಂಬಂಧಿ ದಶರಥ ರೆಡ್ಡಿ ಇಬ್ಬರೂ ನನಗೆ 20 ಕೋಟಿ ರುಪಾಯಿ ಹಣ ನೀಡಿದ್ದರು ಎಂದು ಯಾದಗಿರಿ ರಾವ್ ಹೇಳಿಕೆ ನೀಡಿದ್ದಾನೆ. ಡಿಎಸ್ ಪಿ ಸರ್ವೇಶ್ವರ ರೆಡ್ಡಿಯ ಜಾಮೀನು ವಿಷಯದಲ್ಲೂ ನಾನು ಮಧ್ಯಸ್ಥಿಕೆ ವಹಿಸಿದೆ ಎಂದು ಯಾದಗಿರಿರಾವ್ ತಪ್ಪೊಪ್ಪಿಗೆ ನೀಡಿದ್ದಾನೆ. ಜನಾರ್ದನ ರೆಡ್ಡಿ ಸೋದರ ಸೋಮಶೇಖರ ಹಾಗೂ ಕರ್ನಾಟಕದ ಇಬ್ಬರು ಶಾಸಕರು ಇನ್ನೂ ಎಸಿಬಿಯಾಗಲಿ, ಸಿಬಿಐ ಬಲೆಗಾಗಲಿ ಬಿದ್ದಿಲ್ಲ.

ಪ್ರಕರಣಗಳು : ನ್ಯಾ ಪಟ್ಟಾಭಿರಾಮರಾವ್ ಹಾಗೂ 8 ಜನರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ 13(1)(ಸಿ) ಹಾಗೂ 13(1)(ಡಿ)(ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ), ಐಪಿಸಿ ಸೆಕ್ಷನ್ 120ಬಿ(ಒಳಸಂಚು, ಪಿತೂರಿ), 409(ವಿಶ್ವಾಸ ದ್ರೋಹ), 420(ವಂಚನೆ) ಹಾಗೂ 417(ವಂಚನೆಗೆ ಪ್ರೋತ್ಸಾಹ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಗಾಲಿ ಜನಾರ್ದನರೆಡ್ಡಿ ಅವರು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಕಲಂ 13(1)(ಡಿ), ಐಪಿಸಿ ಸೆಕ್ಷನ್ 120 ಬಿ ಹಾಗೂ ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಆರೋಪ ಎದುರಿಸುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ದೃಶ್ಯಗಳು, ಮೊಬೈಲ್ ಫೋನ್ ಸಂದೇಶ, ಬ್ಯಾಂಕ್ ಕಡತಗಳ ದಾಖಲೆಗಳ ಆಧಾರದ ಮೇಲೆ ಸಿಬಿಐ ಸಲ್ಲಿಸಿದ ಎಫ್ ಐಆರ್ ನ ಆಧಾರ ಮೇಲೆ ಎಸಿಬಿ ಮತ್ತೊಂದು ಎಫ್ ಐಆರ್ ದಾಖಲಿಸುವ ಸಾಧ್ಯತೆಯಿದೆ. ಈ ಬಗ್ಗೆ ಎಸಿಬಿ ನಿರ್ದೇಶಕ ಪ್ರಸಾದ್ ರಾವ್ ಕೂಡಾ ಸ್ಪಷ್ಟಪಡಿಸಿದ್ದಾರೆ.

ಮೊದಲ ಎಫ್ ಐಆರ್ ನಲ್ಲಿ 8 ಜನರ ಹೆಸರಿದೆ. ಇನ್ನೊಂದು ಎಫ್ ಐಆರ್ ನಲ್ಲಿ 5 ಜನರ ಹೆಸರಿದೆ. ಜಾಮೀನಿಗಾಗಿ ಲಂಚ ಡೀಲ್ ಕುದುರಿಸಿದ ಪ್ರಮುಖ ಆರೋಪಿ ಆಂಧ್ರಪ್ರದೇಶ ಸಚಿವ ಎರಸು ಪ್ರತಾಪ್ ರೆಡ್ಡಿ, ಮಾಜಿ ಸಚಿವ ಜನಾರ್ದನ ರೆಡ್ಡಿ, ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಬಳ್ಳಾರಿಯ ಇಬ್ಬರು ರಾಜಕಾರಣಿಗಳ ಮೇಲೆ ಎರಡನೆ ಎಫ್ ಐಆರ್ ದಾಖಲಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+