ಶೋಭಾ ಕರಂದ್ಲಾಜೆಗೆ ಒಕ್ಕಲಿಗರ ಸಂಘದ ಬಹಿಷ್ಕಾರ?

ಕಾರಣವಿಲ್ಲದೆ ಮುಖ್ಯಮಂತ್ರಿ ಸದಾನಂದ ಗೌಡರನ್ನು ಬದಲಾವಣೆ ಮಾಡಿರುವುದನ್ನು ಖಂಡಿಸಿರುವ ಒಕ್ಕಲಿಗ ಸಮುದಾಯ ತನ್ನ ಆಕ್ರೋಶವನ್ನು ಪ್ರತಿಭಟನೆ ಮೂಲಕ ಎಲ್ಲೆಡೆ ವ್ಯಕ್ತಪಡಿಸುತ್ತಿದೆ.
ಈ ನಡುವೆ ಒಕ್ಕಲಿಗರಿಗೆ ಬೆಂಬಲ ನೀಡಿದರೆ ವಿರೋಧಿ ಬಣದಲ್ಲಿ ಕಾಣಿಸಿಕೊಂಡಿರುವ ಸಚಿವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಒಕ್ಕಲಿಗರ ಸಂಘ ನಿರ್ಧರಿಸಿದೆ. ಶೋಭಾ ಕರಂದ್ಲಾಜೆ ಅವರು ಲಿಂಗಾಯತ ಮುಖಂಡ ಬಿಎಸ್ ಯಡಿಯೂರಪ್ಪ ಅವರ ಜೊತೆ ಸೇರಿಕೊಂಡು ಕುತಂತ್ರ ಮಾಡಿ ಸದಾನಂದ ಗೌಡರನ್ನು ಕೆಳಗಿಳಿಸಿದ್ದಾರೆ.
ಸದಾನಂದ ಗೌಡರಿಂದ ರಾಜಕೀಯದ ಓನಾಮ ಕಲಿತ ಶೋಭಾ ಕರಂದ್ಲಾಜೆ ಅವರು ಗುರುದ್ರೋಹ ಮಾಡಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಸೇರಿದವಳು ಎಂದು ಹೇಳಿಕೊಳ್ಳಲು ಅವರಿಗೆ ಅರ್ಹತೆ ಇಲ್ಲ. ಸದಾನಂದ ಗೌಡರನ್ನು ಅಧಿಕಾರದಿಂದ ಕೆಳಗಿಳಿಸಿ ಹೈಕಮಾಂಡ್ ಕೂಡಾ ತಪ್ಪು ಮಾಡಿದೆ. ಒಕ್ಕಲಿಗರಿಗೆ ಅನ್ಯಾಯವಾದಾಗ ಸ್ಪಂದಿಸದಿರುವ ಶೋಭಾ ಕರಂದ್ಲಾಜೆ ಸೇರಿದಂತೆ ಇತರೆ ಒಕ್ಕಲಿಗ ಸಚಿವ, ಶಾಸಕರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಸಂಘದ ವಕ್ತಾರರು ಹೇಳಿಕೆ ನೀಡಿದೆ.
ಬೆಂಗಳೂರಿನಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ನಮ್ಮ ಸಮುದಾಯದ ಶಕ್ತಿ ಪ್ರದರ್ಶನ ತೋರಿಸಿದ್ದೇವೆ. ಅಗತ್ಯ ಬಿದ್ದರೆ ಇನ್ನೊಂದು ಬೃಹತ್ ಕಾರ್ಯಕ್ರಮ ಆಯೋಜಿಸಿ ವಿರೋಧಿಗಳಿಗೆ ಚುರುಕು ಮುಟ್ಟಿಸಲಾಗುವುದು ಎಂದು ಒಕ್ಕಲಿಗರ ಸಂಘ ಹೇಳಿದೆ.
ಹೋಟೆಲ್ ಕ್ಯಾಪಿಟಲ್ ಗೆ ಮುತ್ತಿಗೆ : ಕೆಆರ್ ರಸ್ತೆಯಲ್ಲಿರುವ ಒಕ್ಕಲಿಗರ ಸಂಘದ ಕೇಂದ್ರ ಕಚೇರಿಯಲ್ಲಿ ಮಂಗಳವಾರ ಮಧ್ಯಾಹ್ನ ಸಭೆ ನಡೆಸಿದ ಒಕ್ಕಲಿಗ ಮುಖಂಡರು ಹೋಟೆಲ್ ಕ್ಯಾಪಿಟಲ್ ಗೆ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡಿದ್ದಾರೆ. ಶಾಸಕಾಂಗ ಸಭೆ ನಡೆಸಲು ಉದ್ದೇಶಿತವಾಗಿರುವ ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್ ನಲ್ಲಿ ಶೋಭಾ ಕರಂದ್ಲಾಜೆ ಅವರು ಪ್ರವೇಶಿಸಿದ್ದಾರೆ. ಒಕ್ಕಲಿಗ ವಿರೋಧಿ ಸಭೆಯನ್ನು ನಡೆಸಲು ಯಾವುದೇ ಕಾರಣಕ್ಕೂ ಬಿಡಬಾರದು ಎಂದು ಒಕ್ಕಲಿಗರ ಸಂಘ ನಿರ್ಧರಿಸಿದೆ.
ಸದಾನಂದಗೌಡರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ: ಶಾಸಕಾಂಗ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೈಕಮಾಂಡ್ ನಾಯಕರಾದ ಅರುಣ್ ಜೇಟ್ಲಿ ಅವರು ಖಡಾಖಂಡಿತವಾಗಿ ಹೇಳಿರುವುದು ಒಕ್ಕಲಿಗರನ್ನು ಕೆರಳಿಸಿದೆ. ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನಕ್ಕೆ ಮಂಗಳವಾರವೇ ರಾಜೀನಾಮೆ ನೀಡಲಿದ್ದಾರೆ. ಅವರನ್ನು ರಾಜ್ಯಾಧ್ಯಕ್ಷರಾಗಿ ಘೋಷಿಸಬೇಕು. ದೆಹಲಿಯಲ್ಲಿ ನಿರ್ಧರಿಸುತ್ತೇವೆ. ನಂತರ ತಿಳಿಸುತ್ತೇವೆ ಎಂದರೆ ಆಗುವುದಿಲ್ಲ ನಮಗೆ ಈಗಲೇ ನಿಮ್ಮ ತೀರ್ಮಾನ ತಿಳಿಸಿ ಎಂದು ಡಿವಿ ಸದಾನಂದ ಗೌಡರ ಬಣ ಪಟ್ಟು ಹಿಡಿದಿದೆ. ಸದಾನಂದ ಗೌಡರ ಬಣ ಈಗ ಹೋಟೆಲ್ ಅಶೋಕ ದತ್ತ ಸಾಗಿದ್ದಾರೆ.












Click it and Unblock the Notifications