ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಶೋಭಾ ಮೇಡಂ ಅರ್ಜಿ

ಮುಖ್ಯಮಂತ್ರಿ ಪದಚ್ಯುತಿ ವೇಳೆ ಕಾಣೆಯಾಗಿದ್ದ ಶೋಭಾ ಮೇಡಂ ಅವರು ಇದೀಗ ಡಿಸಿಎಂ ಹುದ್ದೆಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ ಎನ್ನಲಾಗಿದೆ. ಸದಾ ನಿರ್ಗಮನದ ನಂತರದ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾ.ಮು. ಯಡಿಯೂರಪ್ಪ ಅವರ ನಿವಾಸದಲ್ಲಿ ಇಂದು ಒಂದೇ ಸಮನೆ ಸಭೆ ನಡೆಯುತ್ತಿದೆ.
ಈ ಮಧ್ಯೆ ಯಡಿಯೂರಪ್ಪ ಅವರು ಸದಾನಂದ ಗೌಡರನ್ನು ಸ್ಥಾನಪಲ್ಲಟ ಮಾಡುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಭಾರಿ ಅನ್ಯಾಯ, ಅಪಮಾನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ, ಒಕ್ಕಲಿಗ ಮುಖಂಡರು ರಾಜಧಾನಿಯಲ್ಲಿ ಭಾರಿ ಪ್ರತಿಭಟನೆ ನಡೆಸಿದ್ದಾರೆ.
ಇದರ ಬಿಸಿ ಧವಳಗಿರಿವರೆಗೂ ತಲುಪಿ, ಯಡಿಯೂರಪ್ಪ ಅವರು ಪರಿಸ್ಥಿತಿಯನ್ನು ಅವಲೋಕಿಸಲು ತಮ್ಮ ನಿವಾಸದಲ್ಲಿ ನಡೆದ ಸಭೆಯಲ್ಲಿ ವಿಷಯವನ್ನು ಚರ್ಚಿಸಿದ್ದಾರೆ. ಆ ವೇಳೆ ಒಕ್ಕಲಿಗ ಸಮುದಾಯದ ವಿರೋಧ ಜೋರಾಗಿದೆ. ಅವರನ್ನು ಸಮಾಧಾನಪಡಿಸುವ ಜರೂರತ್ತು ಬಹಳಷ್ಟಿದೆ ಎಂದು ಬೆಂಬಲಿಗರು ಯಡಿಯೂರಪ್ಪ ಅವರನ್ನು ಅಲವತ್ತುಕೊಂಡಿದ್ದಾರೆ. ಆಗ ಶೋಭಾ ಮೇಡಂ ಅವರ ಹೆಸರೂ ಕಾಣಿಸಿಕೊಂಡಿದೆ.
'ಮುಖ್ಯಮಂತ್ರಿ ಪಟ್ಟವನ್ನು ಎರಡನೆಯ ಬಾರಿಗೂ ತಪ್ಪಿಸಿದಿರಿ. ಆಗಿದ್ದಾಯ್ತು. ಈಗ ಅವರನ್ನು ಉಪ ಮುಖ್ಯಮಂತ್ರಿಯನ್ನಾಗಿಯಾದರೂ ಮಾಡಿ' ಎಂದು ಶೋಭಾ ಬೆಂಬಲಿಗರು petition ಇಟ್ಟಿದ್ದಾರೆ ಎಂದು ಆಪ್ತ ಮೂಲಗಳು ಹೇಳಿವೆ.
ಇದಕ್ಕೂ ಮುನ್ನ 'ಶೋಭಾ ಕರಂದ್ಲಾಜೆ ಅವರು ಒಕ್ಕಲಿಗ ಸಮುದಾಯಕ್ಕೆ ಭಾರಿ ಅನ್ಯಾಯ ಮಾಡುತ್ತಿದ್ದಾರೆ' ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯದಿಂದ ಹೊರಹೋಗಿರುವ ಶೋಭಾ ಅವರು ಬೆಂಗಳೂರಿಗೆ ವಾಪಸಾಗುತ್ತಿದ್ದಂತೆ ವಿಮಾನ ನಿಲ್ದಾಣದಲ್ಲೇ ಅವರಿಗೆ ಮುತ್ತಿಗೆ ಹಾಕುವುದಾಗಿಯೂ ನಾರಾಯಣ ಗೌಡರು ಗುಡುಗಿದ್ದಾರೆ.
ಜುಲೈ 12ಕ್ಕೆ ಶೋಭಾ ವಾಪಸ್: ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿತರ ಸ್ನೇಹಿತರ ಜತೆ ಮಾನಸ ಸರೋವರ ಯಾತ್ರೆಗೆ ತೆರಳಿರುವ ಶೋಭಾ ಅವರು ಜುಲೈ 12ರಂದು ಬೆಂಗಳೂರಿಗೆ ವಾಪಸಾಗಲಿದ್ದಾರೆ. ಆಗ ಈ ಊಹಾಪೋಹಗಳಿಗೆಲ್ಲ ತೆರೆ ಬೀಳುವ ಸಾಧ್ಯತೆಯಿದೆ.












Click it and Unblock the Notifications