Get Updates
Get notified of breaking news, exclusive insights, and must-see stories!

ಲಿಂಗಾಯತ ಮುಖಂಡರ ಮೇಲೆ ತಿರುಗಿಬಿದ್ದ ಒಕ್ಕಲಿಗರು

Nanjavadhuta Swamiji
ಬೆಂಗಳೂರು, ಜು. 9 : ಲಿಂಗಾಯತ ಸಮುದಾಯದ ನಾಯಕ ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಪದವಿ ಸ್ವೀಕರಿಸಲು ದಿನಗಣನೆ ಪ್ರಾರಂಭವಾಗಿರುವ ಹೊತ್ತಿನಲ್ಲಿಯೇ, ಕರ್ನಾಟಕದ ಇಡೀ ಒಕ್ಕಲಿಗ ಸಮುದಾಯ ಲಿಂಗಾಯತ ರಾಜಕೀಯ ಮುಖಂಡರ ವಿರುದ್ಧ ತಿರುಗಿಬಿದ್ದಿದೆ. ಏನೇ ಆಗಲಿ ಒಕ್ಕಲಿಗರ ದಬ್ಬಾಳಿಕೆಯನ್ನು ಸಹಿಸುವುದಿಲ್ಲ ಎಂದು ಒಕ್ಕಲಿಗರು ಒಕ್ಕೊರಲ ಧ್ವನಿ ತೆಗೆದಿದ್ದಾರೆ.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯಲ್ಲಿರುವ ಗುರುಗುಂಡ ಬ್ರಹ್ಮೇಶ್ವರ ಮಠದ ಸ್ವಾಮೀಜಿ ನಂಜಾವದೂತ ಸ್ವಾಮೀಜಿಗಳ ನೇತೃತ್ವದಲ್ಲಿ ಬೆಂಗಳೂರಿನ ಪುರಭವನದಲ್ಲಿ ಪ್ರತಿಭಟನಾ ಸಭೆಯನ್ನು ಸೋಮವಾರ ಆಯೋಜಿಸಲಾಗಿತ್ತು. ನಂತರ ಅಖಿಲ ಕರ್ನಾಟಕ ಒಕ್ಕಲಿಗರ ರಾಜಕೀಯ ವೇದಿಕೆ ವಿಶ್ವೇಶ್ವರ ಪುರದಲ್ಲಿರುವ ಒಕ್ಕಲಿಗರ ಸಂಘದಿಂದ ಟೌನ್ ಹಾಲ್ ವರೆಗೆ ಮೆರವಣಿಗೆ ನಡೆಸಿ ಸದಾನಂದ ಗೌಡರನ್ನು ಕೆಳಗಿಳಿಸಿದ್ದರ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿತು.

ಶಿವಮೊಗ್ಗ, ಸೂಳ್ಯ, ಮೈಸೂರು ಸೇರಿದಂತೆ ರಾಜ್ಯದ ಅನೇಕ ಕಡೆಗಳಲ್ಲಿ, ಡಿವಿ ಸದಾನಂದ ಗೌಡರನ್ನು ಪದಚ್ಯುತಿಗೊಳಿಸಿದ್ದನ್ನು ವಿರೋಧಿಸಿ ಒಕ್ಕಲಿಗರು ಭಾರೀ ಪ್ರತಿಭಟನೆಗಿಳಿದಿದ್ದಾರೆ. ಲಿಂಗಾಯತ ಸಮುದಾಯದ ನಾಯಕರ ಪ್ರತಿಕೃತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಲಿಂಗಾಯತ ನಾಯಕರು ರಾಜ್ಯವನ್ನು ಇಬ್ಭಾಗ ಮಾಡಲು ಹವಣಿಸುತ್ತಿದ್ದಾರೆ ಎಂದು ಅವರು ಕೆಂಡ ಕಾರಿದ್ದಾರೆ.

ಸ್ವಾಮೀಜಿ ಉವಾಚ : ಬೆಂಗಳೂರಿನ ಟೌನ್ ಹಾಲ್‌ನಲ್ಲಿ ನಡೆದ ಸಭೆಯಲ್ಲಿ ನಂಜಾವಧೂತ ಸ್ವಾಮೀಜಿಗಳು, ಲಿಂಗಾಯತ ರಾಜಕೀಯ ನಾಯಕರು ಒಕ್ಕಲಿಗರನ್ನು ತುಳಿಯಲು ನೋಡುತ್ತಿದ್ದಾರೆ. ಆದರೆ, ಒಕ್ಕಲಿಗರು ಯಾರಿಗೂ ಅನ್ಯಾಯ ಬಯಸಿದವರಲ್ಲ, ಯಾರನ್ನೂ ತುಳಿದವರಲ್ಲ. ಒಕ್ಕಲಿಗರ ಮೇಲಿನ ದಬ್ಬಾಳಿಕೆ ಹೀಗೇ ಮುಂದುವರಿದರೆ ಒಕ್ಕಲಿಗರು ಕೂಡ ಲಿಂಗಾಯತ ಸಮುದಾಯಕ್ಕೆ ಅಷ್ಟೇ ಪ್ರಮಾಣದ ಹೊಡೆತ ನೀಡಲಿದ್ದಾರೆ ಎಂದು ಚಿತಾವಣೆ ನೀಡಿದರು. ಪ್ರತಿಭಟಿಸುವಾಗ ಕೈಗೆ ಕೆಲಸ ನೀಡಬೇಡಿ, ಬುದ್ಧಿಗೆ ಕೆಲಸ ನೀಡಿ ಎಂದು ಪ್ರತಿಭಟನಾಕಾರರಿಗೆ ಸ್ವಾಮೀಜಿ ಬುದ್ಧಿಮಾತು ಹೇಳಿದರು.

ಹಿಂದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾಗ ರೈತರ ಸಾಲ ಮನ್ನಾ ಮಾಡುವಂತಹ ಧೈರ್ಯ ತೋರಿದವರು ಒಕ್ಕಲಿಗ ರಾಜಕೀಯ ನಾಯಕರು. ರಾಜ್ಯದಲ್ಲಿ ಇಂದು ಕೂಡ ರೈತರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ರೈತರ ರಕ್ಷಣೆಗೆ ಬರುವುದು ಒಕ್ಕಲಿಗ ರಾಜಕಾರಣಿಗಳಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು. ಒಕ್ಕಲಿಗರಾದ ಸದಾನಂದ ಗೌಡರನ್ನು ಅವಮಾನಕರ ರೀತಿಯಲ್ಲಿ ಕೆಳಗಿಳಿಸಿದ್ದನ್ನು ಸಹಿಸಲು ಸಾಧ್ಯವೇ ಇಲ್ಲ. ಒಕ್ಕಲಿಗರು ತಿರುಗಿಬಿದ್ದರೆ ಯಾರೂ ಉಳಿಯಲು ಸಾಧ್ಯವಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ, ಶಾಂತಿನಾಥ ಸ್ವಾಮಿಜಿ, ಸಿದ್ದರಾಮ ಚೈತನ್ಯ ಸ್ವಾಮೀಜಿ, ಒಕ್ಕಲಿಗರ ಒಕ್ಕೂಟ, ಒಕ್ಕಲಿಗರ ಸಂಘದ ಪದಾಧಿಕಾರಿಗಳು ಭಾಗವಹಿಸಿ, ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದವರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಕಳಂಕವಿಲ್ಲದೆ ರಾಜ್ಯಭಾರ ಮಾಡಿದ ಸದಾನಂದ ಗೌಡರನ್ನು ಮತ್ತೆ ಮುಖ್ಯಮಂತ್ರಿ ಪದವಿಯ ಮೇಲೆ ಕೂಡಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜಭವನ ಮುತ್ತಿಗೆ : ಜಗದೀಶ್ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ದಿನ ಹತ್ತಿರವಾಗುತ್ತಿದ್ದಂತೆ ದೆಹಲಿಯ ಬಿಜೆಪಿ ನಾಯಕರು ಒಬ್ಬೊಬ್ಬರಾಗಿ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ. ಧರ್ಮೇಂದ್ರ ಪ್ರಧಾನ್ ಈಗಾಗಲೆ ಬೆಂಗಳೂರಿಗೆ ಬಂದಿದ್ದಾರೆ. ಆದರೆ, ಬಿಜೆಪಿಯ ಉಳಿದ ರಾಷ್ಟ್ರೀಯ ನಾಯಕರು ಬೆಂಗಳೂರ ಒಳಗೆ ಕಾಲಿಡದಂತೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಲಗ್ಗೆ ಹಾಕುವುದಾಗಿ ನಾರಾಯಣ ಗೌಡ ಗುಡುಗು ಹಾಕಿದ್ದಾರೆ.

ಒಲ್ಲಗಿರ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಬಿಜೆಪಿ ನಾಯಕರನ್ನು ನಗರದ ಒಳಗೆ ಬರಲು ಬಿಡುವುದಿಲ್ಲ. ಇಷ್ಟೇ ಅಲ್ಲ, ಜಗದೀಶ್ ಶೆಟ್ಟರ್ ಪ್ರಮಾಣ ವಚನ ಸ್ವೀಕರಿಸುವ ದಿನ ರಾಜಭವನಕ್ಕೆ ಒಕ್ಕಲಿಗರೆಲ್ಲರು ಮುತ್ತಿಗೆ ಹಾಕಲಿದ್ದಾರೆ ಎಂದು ಕರವೇ ಅಧ್ಯಕ್ಷ ನಾರಾಯಣ ಗೌಡ ಘೋಷಿಸಿದರು. ಜೈಲಿಗೆ ಹೋದರೂ ಸರಿ, ಪ್ರಾಣ ಹೋದರೂ ಸರಿ ಒಕ್ಕಲಿಗರ ವಿರೋಧಿ ಜಗದೀಶ್ ಶೆಟ್ಟರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ ಎಂದು ನಾರಾಯಣ ಗೌಡ ನುಡಿದರು.

ಈ ನಡುವೆ ಬಂದಿರುವ ಮತ್ತೊಂದು ಸುದ್ದಿಯೆಂದರೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎಲ್ಲ ಒಕ್ಕಲಿಗ ಸಮುದಾಯ ಸಭೆ ಸೇರಲಿದ್ದಾರೆ. ಹಾಗೆಯೆ, ಶೆಟ್ಟರ್ ಅವರ ಪದಗ್ರಹಣವನ್ನು ವಿರೋಧಿಸಿ ಸಂಪುಟಕ್ಕೆ ಒಕ್ಕಲಿಗ ಸಮುದಾಯದ ಶಾಸಕರು ರಾಜೀನಾಮೆ ನೀಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದೆಲ್ಲ ಸಾಲದು ಎಂಬಂತೆ, ಉಪ ಮುಖ್ಯಮಂತ್ರಿ ಪದವಿಗೂ ಭಾರೀ ಪೈಪೋಟಿ ಶುರುವಾಗಿದೆ. ಮಂಗಳವಾರ ಕ್ಯಾಪಿಟೋಲ್ ಹೋಟೆಲಿನಲ್ಲಿ ನಾಯಕರ ಸಭೆ ನಡೆಯಲಿದ್ದು, ಉಪಮುಖ್ಯಮಂತ್ರಿ ಪದವಿ ಸೃಷ್ಟಿ, ಸಂಪುಟ ವಿಸ್ತರಣೆ ಕುರಿತಂತೆ ಇಡೀ ದಿನ ಚರ್ಚೆ ನಡೆಯಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+