ಸಚಿವ ಯೋಗೀಶ್ವರ್ ಮೇಲೆ ಜಾಮೀನು ರಹಿತ ವಾರೆಂಟ್

ಮೆಗಾ ಸಿಟಿ ಮೆಗಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆ ನಡೆಸಿದ 6ನೇ ಎಸಿಎಂಎಂ ನ್ಯಾಯಾಲಯ, ಯೋಗೀಶ್ವರ್ ವಿರುದ್ಧ ವಾರೆಂಟ್ ಹೊರಡಿಸಿದೆ. ಮುಂದಿನ ವಿಚಾರಣೆಯನ್ನು ಸೆ.3ಕ್ಕೆ ಮುಂದೂಡಲಾಗಿದೆ.
ಮೆಗಾಸಿಟಿ ವಂಚನೆ ಪ್ರಕರಣದಲ್ಲಿ ಅರಣ್ಯ ಸಚಿವ ಸಿಪಿ ಯೋಗೇಶ್ವರ್ ವಿರುದ್ಧ ಸುಮಾರು 14 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದರು.
SFIO ವರದಿ (Serious Fraud Investigation Office) ಆಧಾರದ ಮೇಲೆ ಒಟ್ಟು 6 ಖಾಸಗಿ ಪ್ರಕರಣ ಹಾಗೂ 8 ಕ್ರಿಮಿನಲ್ ಪ್ರಕರಣಗಳು 2009ರಲ್ಲಿ ದಾಖಲಾಗಿತ್ತು.
ಮೆಗಾ ಡೆವಲಪರ್ಸ್ ಮತ್ತು ಬಿಲ್ಡರ್ಸ್ ಯೋಜನೆಯಲ್ಲಿ ವಿಶ್ವದರ್ಜೆಯ ವಜ್ರಗಿರಿ ಟೌನ್‌ಶಿಪ್ ಅಡಿಯಲ್ಲಿ ಬೆಂಗಳೂರು-ಮೈಸೂರು ರಸ್ತೆಯ ಬಿಡದಿ ಬಳಿ 500 ಎಕರೆ ಭೂಮಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡುವುದಾಗಿ 1995-2006ರ ವೇಳೆ ಸುಮಾರು 9 ಸಾವಿರ ಮಂದಿಯಿಂದ 64 ಕೋಟಿ ರೂ.ಗಳನ್ನು ಸಂಗ್ರಹಿಸಿದ್ದಾರೆ. ಇದರಲ್ಲಿ ಕಂಪನಿಯ 3.60 ಕೋಟಿ ರೂ.ಗಳನ್ನು ಯೋಗೀಶ್ವರ್ ಲಪಟಾಯಿಸಿದ್ದಾರೆ ಎಂಬ ಆರೋಪವಿದೆ. ಈ ವಂಚನೆ ಪ್ರಕರಣದಲ್ಲಿ ಸಿಐಡಿ 2010ರಲ್ಲಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿತ್ತು
ಇದಲ್ಲದೆ, ಬಿಡದಿ ಸಮೀಪದ ಅರ್ಚಕರಹಳ್ಳಿಯಲ್ಲಿ ವಜ್ರಗಿರಿ ಟೌನ್ ಶಿಪ್ ಗಾಗಿ ರೈತರ ಫಲವತ್ತಾದ ಬೆಲೆಬಾಳುವ ಖರೀದಿಸಿ, ಪರಿಹಾರ ನೀಡಿರಲಿಲ್ಲ.
ಆಸ್ತಿ ವಿವರ: 2006-07ರಲ್ಲಿ ಶಾಸಕರಾಗಿದ್ದ ಯೋಗೇಶ್ವರ್, 35.82 ಲಕ್ಷ ರೂ ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ವಿವರಣೆ ಸಲ್ಲಿಸಿದ್ದರು.
ಆದರೆ, ಚನ್ನಪಟ್ಟಣ ವಿಧಾನಸಭೆ ಉಪ ಚುನಾವಣೆ ಸಂದರ್ಭದಲ್ಲಿ ತಮ್ಮ ಆಸ್ತಿ ವಿವರವನ್ನು 3.24 ಕೋಟಿ ರು ಎಂದು ಘೋಷಿಸಿದ್ದರು. ನಾಲ್ಕೈದು ವರ್ಷಗಳಲ್ಲಿ ಲಕ್ಷದಿಂದ ಕೋಟಿ ರೂ ಗಳಿಸಿದ್ದಾದರೂ ಹೇಗೆ ಎಂದು ಪ್ರಶ್ನಿಸಲಾಗಿದೆ.
ಕೇಂದ್ರ ಕಂಪನಿ ವ್ಯವಹಾರ ಇಲಾಖೆಯ ಗುರುತರ ವಂಚನೆಗಳ ತನಿಖಾ ವಿಭಾಗವು (ಎಸ್‌ಎಫ್‌ಐಒ) ಸಿ.ಪಿ. ಯೋಗೀಶ್ವರ್ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮೆಗಾಸಿಟಿ (ಬೆಂಗಳೂರು) ಡೆವಲಪರ್ಸ್ ಮತ್ತು ಬಿಲ್ಡರ್ಸ್ ಲಿಮಿಟೆಡ್, 450 ಸುಳ್ಳು ಕ್ರಯಪತ್ರ (ಸೇಲ್ ಅಗ್ರಿಮೆಂಟ್)ಗಳನ್ನು ಸೃಷ್ಟಿಸಿ, ಮೆಗಾಸಿಟಿ ಯೋಜನೆ ವ್ಯಾಪ್ತಿಯಲ್ಲಿನ ಭೂ ಮಾಲೀಕರಿಗೆ 37 ಕೋಟಿ ರೂ.ಗಳನ್ನು ವಂಚಿಸಿರುವ ಆರೋಪದ ಕುರಿತು ತನಿಖೆ ನಡೆಸಿ, ವರದಿಯನ್ನು ಸಿದ್ಧಪಡಿಸಿತ್ತು.
ಇದಲ್ಲದೆ ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್ ಪ್ರೈಸಸ್ ಲಿ(NICE) ಕಂಪನಿಗೆ 2 ಕೋಟಿ ವಂಚನೆ ಮಾಡಿದ ಆರೋಪದ ಮೇಲೆ ಕ್ರಿಮಿನಲ್ ಕೇಸ್ ಕೂಡಾ ಎದುರಿಸುತ್ತಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಬಿಎಂಐಸಿ ನೈಸ್ ಕಂಪನಿ ಮಾಲೀಕ ಅಶೋಕ್ ಖೇಣಿ ಅವರು ದೂರು ನೀಡಿದ್ದರು. ಕೊನೆಗೆ 2005ರಲ್ಲಿ ತಲಾ 1 ಕೋಟಿ ರು ಇದ್ದ ಎರಡು ಚೆಕ್ ನೈಸ್ ಕಂಪನಿ ಸೇರಿತ್ತು.












Click it and Unblock the Notifications