ಮಾಯಾವತಿದು ಅಕ್ರಮ ಆಸ್ತಿಯಲ್ಲ: ಸು.ಕೋರ್ಟ್

ಮಾ.ಮು. ಮಾಯಾವತಿ ವಿರುದ್ಧದ ಆರೋಪವನ್ನು ಸಾಬೀತು ಪಡಿಸುವಲ್ಲಿ ಸಿಬಿಐ ವಿಫಲವಾಗಿದೆ. ಆಕೆಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳೇ ಇಲ್ಲ ಎಂದು ಸು. ಕೋರ್ಟ್ ಅಭಿಪ್ರಾಯಪಟ್ಟಿದೆ. ಆದರೂ ಇಲ್ಲಾ! ಪ್ರಕರಣ ಹಾಗೇನಿಲ್ಲ. ಮಾಯಾವತಿ ಅಕ್ರಮ ಆಸ್ತಿ ಗಳಿಸಿದ್ದಾರೆ ಎನ್ನವುದಕ್ಕೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಸಿಬಿಐ ಪ್ರಲಾಪಿಸಿದೆ.
ಇದೇ ವೇಳೆ, 'ಪಕ್ಷದ ನೂರಾರು ಕಾರ್ಯಕರ್ತರು ನೀಡಿದ ಕೋಟ್ಯಂತರ ರು. ದೇಣಿಗೆಯಿಂದ ಅಷ್ಟೆಲ್ಲಾ ಆಸ್ತಿ ಸಂಪಾದಿಸಿದ್ದೇನೆ ಅಷ್ಟೇಯಾ' ಎಂದು ಮಾಯಾ ತಮ್ಮ ಮಾಯದಂತಹ ಆಸ್ತಿ ಕ್ರೋಡೀಕರಣದ ಬಗ್ಗೆ ಹೇಳಿದ್ದಾರೆ.
8 ವರರ್ಷಗಳ ಹಿಂದೆ ತನ್ನ ವಿರುದ್ಧ ಸಿಬಿಐ ದಾಖಲಿಸಿರುವ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಯಾವುದೇ ಹುರುಳಿಲ್ಲ. ಆದ್ದರಿಂದ ಅದನ್ನು ವಜಾಗೊಳಿಸಬೇಕು ಎಂದು ಮಾಯಾವತಿ ಅವರು 2008ರ ಮೇನಲ್ಲಿ ಸುಪ್ರೀಂ ಕೋರ್ಟ್ ಬಾಗಿಲು ತಟ್ಟಿದ್ದರು. ಕೇಂದ್ರದ ಎನ್ ಡಿಎ ಸರಕಾರ ತನ್ನ ತೇಜೋವಧೆ ಮಾಡಲು ಸಿಬಿಐ ಅಸ್ತ್ರವನ್ನು ನನ್ನ ವಿರುದ್ಧ ಝಳಪಿಸಿತ್ತು. ಅದು ನಿಜಕ್ಕೂ ರಾಜಕೀಯ ಪ್ರೇರಿತವಾದ ದೂರಾಗಿತ್ತು ಎಂದು ಮಾಯಾವತಿ ಕೋರ್ಟ್ ಗಮನ ಸೆಳೆದಿದ್ದರು.
ಮಾಯಾ ಟ್ಯೂಶನ್ ತೆಗೆದುಕೊಳ್ಳಬಹುದು: ಮಾಯಾವತಿಯ ಘೋಷಿತ 1 ಕೋಟಿ ರು. ಆದಾಯ ನಾಲ್ಕೇ ವರ್ಷದಲ್ಲಿ 50 ಕೋಟಿ ರುಪಾಯಿಗೆ ನೆಗೆದಿತ್ತು. ಆದರೂ ಈಗ ಕೇಸು ಬಿದ್ಹೋಯಿತು. ಗಮನಾರ್ಹವೆಂದರೆ ಆದಾಯ ತೆರಿಗೆ ಇಲಾಖೆ ನ್ಯಾಯಾಧಿಕರಣವೂ ಸಹ ಮಾಯಾಗೆ ಕ್ಲೀನ್ ಚಿಟ್ ನೀಡಿತ್ತು.
ದೇಶದ ಅರ್ಥ ವ್ಯವಸ್ಥೆಯಲ್ಲಿ ಸಾಮಾನ್ಯವಾಗಿ ಪೋಸ್ಟ್ ಆಫೀಸಿನಲ್ಲಿ ಫಿಕ್ಸೆಡ್ ಡೆಪಾಸಿಟ್ ಇಟ್ಟರೆ ಆ ಹಣ ದ್ವಿಗುಣ ಗೊಳ್ಳುವ ಸಾಧ್ಯತೆಯಿದೆ. ಆದರೆ ಮಾಯಾವತಿ ಮಾಯದಂತೆ ಅದ್ಯಾವ ಆರ್ಥಿಕ ಸಾಧನ ಬಳಸಿ ತಮ್ಮ ಆಸ್ತಿಯನ್ನು 50 ಪಟ್ಟು ಹೆಚ್ಚಿಸಿಕೊಂಡರು ಎಂದು ಜನ ಮೂಗಿನ ಮೇಲೆ ಬೆರಳಿಟ್ಟುಕೊಂಡು ಆಗ ಕೇಳಿದ್ದರು. ಇದೀಗ ಖುದ್ದು ಸುಪ್ರೀಂಕೋರ್ಟಿನಲ್ಲೂ ಮಾಯಾ ನಗೆ ಚೆಲ್ಲಿರುವುದರಿಂದ ಅಕ್ರಮ ಆಸ್ತಿ ಸಂಪಾದಿಸಿರುವ ನಮ್ಮ ಕಳಂಕಿತ ರಾಜಕೀಯ ನಾಯಕರು ಕೇಸು ಗೆಲ್ಲುವುದು ಹೇಗೆ ಎಂಬುದರ ಬಗ್ಗೆ ಮಾಯಾರಿಂದ ಟ್ಯೂಶನ್ ತೆಗೆದುಕೊಳ್ಳಬಹುದು.












Click it and Unblock the Notifications