ಯುರೋ: ರೊನಾಲ್ಡೊ ಗರ್ವಭಂಗ, ಸ್ಪೇನ್ ಫೈನಲ್ ಗೆ

ಪಂದ್ಯದ ನಿಗದಿತ ಸಮಯ ಮುಗಿದು ಹೆಚ್ಚುವರಿ 30ನಿಮಿಷದಲ್ಲೂ ಎರಡು ತಂಡಗಳು ಗೋಲು ಗಳಿಸಲು ವಿಫಲವಾದ ಮೇಲೆ ಪೆನಾಲ್ಟಿ ಶೂಟೌಟ್ ಅನಿವಾರ್ಯವಾಗಿತ್ತು. ಸ್ಪೇನ್ ರ ಸೆಸ್ಕ್ ಫೆಬ್ರಿಗಾಸ್ ಅಂತಿಮ ಗೋಲು ಬಾರಿಸಿದರೆ, ಪೋರ್ಚುಗಲ್ ನಾಯಕ ರೊನಾಲ್ಡೊ ಕೈಗೆ ಸಿಕ್ಕ ಅವಕಾಶವನ್ನು ಉಪಯೋಗಿಸದೆ ನಿಂತಿದ್ದು ಅಚ್ಚರಿ ಮೂಡಿಸಿತ್ತು.
ಬಹುಶಃ ಐದನೇ ಅವಕಾಶ ತೆಗೆದುಕೊಂಡು ಗೋಲು ಗಳಿಸುವ ಇರಾದೆ ರೊನಾಲ್ಡೊಗೆ ಇತ್ತು ಎಂದು ಕಾಣುತ್ತದೆ. ಆದರೆ, ಫೆಬ್ರಿಗಾಸ್ ಗೋಲು ಗಳಿಸಲು ವಿಫಲರಾಗಿದ್ದರೆ ಮಾತ್ರ ಅವಕಾಶ ಸಿಗುತ್ತಿತ್ತು ಎಂಬ ಸಣ್ಣ ಲೆಕ್ಕಾಚಾರ ಗೊತ್ತಿಲ್ಲದ ಹಸುಗೂಸೆನಲ್ಲ ಈ ರೊನಾಲ್ಡೊ. ಪಂದ್ಯದುದ್ದಕ್ಕೂ ಉತ್ತಮವಾಡಿದ ಪೋರ್ಚುಗಲ್ ವೀರ, ಪೆನಾಲ್ಟಿ ಹೊಡೆಯಲು ಹಿಂದೆ ಸರಿದಿದ್ದು ಪ್ರಶ್ನಾರ್ಹವಾಗಿದೆ.
ಸ್ಪೇನ್ ಪರ ಇನಿಯಾಸ್ಟಾ, ಪಿಕ್ಯು,ರಮೊಸ್,ಫೆಬ್ರಿಗಾಸ್ ಗೋಲು ಹೊಡೆದರೆ, ಅಲಾನ್ಸೋ ವಿಫಲರಾದರು. ಪೋರ್ಚುಗಲ್ ಪರ ಪೆಪೆ, ನಾನಿ ಗೋಲು ಹೊಡೆದರೆ ಮೊಂಟಿನೋ, ಬ್ರುನೋ ಅಲ್ವೆಸ್ ವಿಫಲರಾದರು.
ಸ್ಪೇನ್ ಪರ ಮೊದಲ ಪೆನಾಲ್ಟಿ ಶೂಟ್ ತೆಗೆದುಕೊಳ್ಳುವ ಅವಕಾಶ ಕಳೆದ ಪಂದ್ಯದ ಹೀರೋ ನೂರು ಪಂದ್ಯಗಳನ್ನಾಡಿದ ಅನುಭವಿ ಕ್ಸಾವಿ ಅಲಾನ್ಸೋಗೆ ಸಿಕ್ಕಿತು. ಆದರೆ, ಗೋಲ್ ಕೀಪರ್ ಬಲ ಬದಿಗೆ ಹೊಡೆಯಲು ಯತ್ನಿಸಿ ವಿಫಲರಾದರು.
ಅದರೆ, ನಂತರ ಪೋರ್ಚುಗಲ್ ಪರ ಜೊ ಮಾಂಟಿನೊ ಕೂಡಾ ಎಡಬದಿಗೆ ಹೊಡೆದ ಚೆಂಡನ್ನು ಐಕರ್ ಕಾಸಿಯಸ್ ತಡೆದು ಸ್ಪೇನ್ ಗೆ ಸಮಬಲ ತಂದರು.
ನಂತರ ಇನಿಯಾಸ್ಟಾ ನಿಧಾನಗತಿಯಲ್ಲಿ ಚೆಂಡನ್ನು ಲಿಫ್ಟ್ ಮಾಡಿ ಗೋಲು ಗಳಿಸಿ ರೋನಾಲ್ಡೊ ತಂಡಕ್ಕೆ ಆತಂಕ ಮೂಡಿಸಿದ್ದರು. ಆದರೆ, ಪೋರ್ಚುಗಲ್ ಪರ ಪೆಪೆ ಗೋಲು ಗಳಿಸಿಬಿಟ್ಟರು.
ಮುಂದಿನ ಹೊಡೆತ ಸ್ಪೇನ್ ನ ಪಿಕ್ಯೂ ಪಾಲಿಗೆ ಸಿಕ್ಕಿತು. ಸುಲಭವಾಗಿ ಗೋಲ್ ಬಾಕ್ಸ್ ನಲ್ಲಿ ಚೆಂಡು ಹೊಡೆದರ. ಇದಕ್ಕೆ ನಾನಿ ಸರಿಯಾದ ಉತ್ತರ ನೀಡಿದರು. ಆದರ, ಈ ಸಮಯದಲ್ಲಿ ಮೊದಲಿಗೆ ಅಲ್ವೆಸ್ ಶೂಟ್ ಮಾಡಲು ಬಂದವರು ಹಿಂತಿರುಗಿದರು. ನಾನಿ ಗೋಲು ಹೊಡೆದರು.
ಸ್ಪೇನಿ ಮುಂದಿನ ಗೋಲು ಸೆರ್ಗಿಯೊ ರೊಮೆಸ್ ಹೊಡೆದರೆ, ಬ್ರೂನೂ ಅಲ್ವೆಸ್ ಪೋರ್ಚುಗಲ್ ಗೆ ವಿಲನ್ ಆದರು. ಆದರೆ, ಈ ಹಂತದಲ್ಲಿ ಈ ಋತುವಿನಲ್ಲಿ 65ಕ್ಕೂ ಅಧಿಕ ಗೋಲು ಗಳಿಸಿರುವ ಶೂರ ತಂಡದ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ಪೆನಾಲ್ಟಿ ಶೂಟೌಟ್ ಹೊಡೆಯಲು ಬರುವ ನಿರೀಕ್ಷೆಯಿತ್ತು. ಆದರೆ, ವೈಫಲ್ಯದ ಭಯವೋ, ಯಾವ ಒತ್ತಡವೋ ರೊನಾಲ್ಡೊ ಸುಮ್ಮನೆ ನಿಂತು ಬಿಟ್ಟರು.
ಮುಂದೆ ಫೆಬ್ರಿಗಾಸ್ ಬಾರಿಸಿದ ಚೆಂಡು ಎಡಬದಿಯ ಪೋಸ್ಟ್ ಗೆ ಬಡಿದು ಗೋಲ್ ಬಾಕ್ಸ್ ಒಳ ತಲುಪಿದಾಗ ರೋನಾಲ್ಡೋ ಅಳುವುದೆಂದೆ ಬಾಕಿ. ಸ್ಪೇನ್ ಮತ್ತೊಮ್ಮೆ ಮಹತ್ವದ ಟೂರ್ನಿ ತಲುಪಿದೆ.
ಮೂರನೇ ಬಾರಿ ಫೈನಲ್ (ವಿಶ್ವಕಪ್, ಯುರೋ ಕಪ್ ಎರಡು ಬಾರಿ೦ ತಲುಪಿದ ಮಹತ್ ಸಾಧನೆ ಮಾಡಿದೆ. ಸ್ಪೇನ್ ಶಿಸ್ತುಬದ್ಧ ಆಟಕ್ಕೆ ಕೊನೆಗೂ ಪೋರ್ಚುಗಲ್ ತಲೆಬಾಗಿದೆ. ಜರ್ಮನಿ ಹಾಗೂ ಇಟಲಿ ಪಂದ್ಯದಲ್ಲಿ ಗೆದ್ದ ತಂಡದೊಡನೆ ಸೆಣಸಲಿರುವ ಸ್ಪೇನ್, ಪ್ರಶಸ್ತಿ ಉಳಿಸಿಕೊಂಡು ಇತಿಹಾಸ ರಚಿಸಲು ಸಿದ್ಧವಾಗಿದೆ.
ಇದಕ್ಕೂ ಮುನ್ನ ಪಂದ್ಯದ 90ನೇ ನಿಮಿಷದಲ್ಲಿ ರೋನಾಲ್ಡೊ ಗೋಲು ಗಳಿಸುವ ಅವಕಾಶ ತಪ್ಪಿಸಿಕೊಂಡಿದ್ದು ಅಭಿಮಾನಿಗಳಿಗೆ ನಿರಾಶೆ ಮೂಡಿಸಿತು. ರೋನಾಲ್ಡೊ ಹೊಡೆದ ಕಿಕ್ ಸ್ವಲ್ಪದರಲ್ಲಿ ಗೋಲ್ ಬಾಕ್ಸ್ ತಪ್ಪಿಸಿಕೊಂಡಿತು.












Click it and Unblock the Notifications