ರಾಜಧಾನಿಯಲ್ಲಿ ಒಬ್ಬಂಟಿ, ACP ಸೋದರಿಯ ಹತ್ಯೆ

ಬೆಂಗಳೂರು, ಜೂನ್ 25: ವಿಜಯನಗರದಲ್ಲಿರುವ ಖ್ಯಾತ ಶರಾವತಿ ಆಸ್ಪತ್ರೆಯ ಸಮೀಪದ ಸರ್ವಿಸ್ ರಸ್ತೆ ನಿವಾಸಿ ಪ್ರೇಮಾ ನಾಯ್ಡು (81) ಎಂಬ ವೃದ್ಧೆಯನ್ನು ಉಸಿರುಗಟ್ಟಿಸಿ ಸಾಯಿಸಿರುವ ಘಟನೆ ಬೆಳಕಿಗೆ ಬಂದಿದೆ. ಅವರ ಪತಿ ವೇಣುಗೋಪಾಲನಾಯ್ಡು ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ವೇಣುಗೋಪಾಲನಾಯ್ಡು, ಒಂಬತ್ತು ವರ್ಷಗಳ ಹಿಂದೆ ಮೃತಪಟ್ಟಿದ್ದರು. ದಂಪತಿಗೆ ಮಕ್ಕಳಿರಲಿಲ್ಲ.

ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಸೋಮವಾರ ಬೆಳಗ್ಗೆ ತಡವಾಗಿ ಬೆಳಕಿಗೆ ಬಂದಿದೆ. ಕೊಲೆಗೀಡಾಗಿರುವ ಪ್ರೇಮಾ ಅವರು ಹೈಕೋರ್ಟ್ ಭದ್ರತಾ ವಿಭಾಗದ ACP ಯಾಗಿರುವ ಕೆ. ರಮೇಶ್‌ಬಾಬು ಎಂಬುವವರ ಸೋದರಿ. ಒಂಟಿಯಾಗಿ ಜೀವಿಸುತ್ತಿದ್ದ ಪ್ರೇಮಾ ಅವರನ್ನು ಪರಿಚಿತರೇ ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಪ್ರೇಮಾ ಅವರು ತಮ್ಮ ತಂಗಿಯ ಮಗ ಸತೀಶ್ ಎಂಬುವರನ್ನು ದತ್ತು ತೆಗೆದುಕೊಂಡಿದ್ದರು. ಮದುವೆಯ ನಂತರ ಸತೀಶ್ ಪತ್ನಿಯ ಜತೆ ಗಿರಿನಗರದಲ್ಲಿ ವಾಸವಿದ್ದಾರೆ. ಮನೆಯಲ್ಲಿ ಪ್ರೇಮಾ ಅವರೊಬ್ಬರೇ ವಾಸವಿದ್ದರು. ಹತ್ತಿರದ ಸಂಬಂಧಿ ಮುರಳಿ ಮತ್ತು ಕುಟುಂಬದವರು ಅವರ ಮನೆಯ ಹಿಂಭಾಗದ ಮನೆಯಲ್ಲಿ (ಔಟ್ ಹೌಸ್) ನೆಲೆಸಿದ್ದಾರೆ.

ಪ್ರೇಮಾ ಅವರ ಬಾಯಿಗೆ ಬಟ್ಟೆ ತುರುಕಿ, ಹತ್ಯೆ ಮಾಡಲಾಗಿದೆ. ಆಕೆಯ ಕೈಯಲ್ಲಿದ್ದ ಚಿನ್ನದ ಬಳೆ, ಇತರೆ ಒಡವೆಗಳನ್ನು ಹಂತಕರು ಮುಟ್ಟಿಲ್ಲ. ಆದ್ದರಿಂದ ಚಿನ್ನಾಭರಣ ದೋಚಲು ಈ ಹತ್ಯೆ ನಡೆದಿರಬಹುದು ಎಂಬ ವಾದವನ್ನು ಪೊಲೀಸರು ಅಲ್ಲಗಳೆದಿದ್ದಾರೆ. ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ACP ರಮೇಶ್ ಅವರಿಗೂ ಮಾಹಿತಿ ನೀಡಲಾಗಿದೆ.

ಆಸ್ತಿ ವಿವಾದ ಕಾರಣ: ಆರ್‌ಪಿಸಿ ಲೇಔಟ್‌ನ ಬಂಟರ ಸಂಘದ ಸಮೀಪ ಇರುವ ಪ್ರೇಮಾ ಅವರ ಮನೆಯ ಮಾರುಕಟ್ಟೆ ಮೌಲ್ಯ ಸುಮಾರು ಏಳೆಂಟು ಕೋಟಿ ರೂಪಾಯಿ ಆಗುತ್ತದೆ. ಅವರು ಆ ಮನೆಯನ್ನು, ದತ್ತು ಪುತ್ರ ಸತೀಶ್ ಹೆಸರಿಗೆ ಉಯಿಲು (ವಿಲ್) ಬರೆದಿದ್ದರು. ಸತೀಶ್ ಬದುಕಿರುವಷ್ಟು ದಿನ ಮನೆ ಆತನ ಸುಪರ್ದಿನಲ್ಲಿರುತ್ತದೆ. ಆ ನಂತರ ಆಸ್ತಿಯು ಬಸವನಗುಡಿಯ ರಾಮಕೃಷ್ಣ ಆಶ್ರಮಕ್ಕೆ ಸೇರುತ್ತದೆ ಎಂದು ಉಯಿಲಿನಲ್ಲಿ ತಿಳಿಸಿದ್ದರು. ಈ ವಿಷಯವಾಗಿ ಅಸಮಾಧಾನಗೊಂಡಿದ್ದ ಸಂಬಂಧಿಕರೇ, ಅವರನ್ನು ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರೇಮಾ ಅವರ ತಂದೆ ಮೇಜರ್ ಪಿ.ಎಂ. ಕನ್ನಯ್ಯ ಅವರು ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್‌ನಲ್ಲಿ ಹಿರಿಯ ಅಧಿಕಾರಿಯಾಗಿದ್ದರು. ಅವರು ಬಳೇಪೇಟೆಯ ರಂಗಸ್ವಾಮಿ ದೇವಾಲಯ ರಸ್ತೆಯಲ್ಲಿ ವಾಸವಿದ್ದರು. ಕೆನಡಾದ ಟೊರಂಟೊದಲ್ಲಿ ಆಟೊಮೊಬೈಲ್ ಎಂಜಿನಿಯರ್ ಆಗಿದ್ದ ವೇಣುಗೋಪಾಲನಾಯ್ಡು ಅವರೊಂದಿಗೆ ಪ್ರೇಮಾ ಅವರ ವಿವಾಹವಾಗಿತ್ತು. ಆ ನಂತರ ಅವರು ಕೆಲ ಕಾಲ ಪತಿಯೊಂದಿಗೆ ಕೆನಡಾದಲ್ಲಿ ವಾಸವಿದ್ದರು.

ಭಾರತಕ್ಕೆ ಹಿಂದಿರುಗಿದ ನಂತರ ವೇಣುಗೋಪಾಲನಾಯ್ಡು ಅವರು ಸಾರಿಗೆ ಇಲಾಖೆಯಲ್ಲಿ ಸೇವೆಗೆ ಸೇರಿದ್ದರು. ಪ್ರೇಮಾ ಅವರು ಯೌವನದ ದಿನಗಳಲ್ಲಿ ಕರ್ನಾಟಕ ಸಂಗೀತ ಪ್ರಕಾರದ ಗಾಯಕಿಯಾಗಿದ್ದರು. ಇಳಿವಯಸ್ಸಿನಲ್ಲಿ ಅಧ್ಯಾತ್ಮದ ಕಡೆಗೆ ಒಲವು ಹೊಂದಿದ್ದ ಅವರು ರಾಮಕೃಷ್ಣ ಆಶ್ರಮದ ಭಕ್ತೆಯಾಗಿದ್ದರು ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+