ನಾನು 'ಸದಾ' ಯಡಿಯೂರಪ್ಪ ಬೆಂಬಲಿಗ: ಡಿವಿಎಸ್

ಯಡಿಯೂರಪ್ಪ ಅವರು ಜೈಲಿಗೆ ಹೋಗುವುದನ್ನು ತಪ್ಪಿಸುವುದಕ್ಕೆ ಪ್ರಯತ್ನಿಸುವುದಾಗಿ ಘೋಷಿಸಿದ ಮುಖ್ಯಮಂತ್ರಿಗಳು, ಯಡಿಯೂರಪ್ಪಗೆ ನಿರೀಕ್ಷಣ ಜಾಮೀನು ಸಿಕ್ಕಿದ್ದು ಸಂತಸ ತಂದಿದೆ ಎಂದು ನಗೆ ಚೆಲ್ಲಿದ್ದಾರೆ. ಯಡಿಯೂರಪ್ಪ ಎಲ್ಲಾ ಆರೋಪಗಳಿಂದ ಮುಕ್ತರಾಗಲಿದ್ದು, ಅವರು ನಿರಪರಾಧಿ ಎಂದು ಸಾಬೀತಾಗಲಿದೆ ಎಂದೂ ಸದಾನಂದ ಗೌಡ ವಿಶ್ವಾಸ ವ್ಯಕ್ತಪಡಿಸಿದರು.
ಆದರೆ ಶಾಸಕಾಂಗ ಸಭೆ ಕರೆಯುವ ಬಗ್ಗೆ ಯಾವುದೇ ಮೃಧು ಧೋರಣೆ ತಾಳದ ಸದಾನಂದ ಗೌಡರು ಸಭೆ ಕರೆಯುವುದು ವರಿಷ್ಠರ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಸ್ಪಷ್ಟಪಡಿಸಿದ್ದಾರೆ.
ಈ ಮಧ್ಯೆ, ನಿನ್ನೆ ತಮ್ಮ ವಿರುದ್ಧವೇ ಇಲಾಖೆ ತನಿಖೆ ಆದೇಶಿಸಿದ್ದಾರೆ ಎಂದು ಅರ್ಥೈಸಿಕೊಂಡು ಸದಾನಂದ ಗೌಡರ ವಿರುದ್ಧ ಅಬಕಾರಿ ಸಚಿವ ರೇಣುಕಾಚಾರ್ಯ ತೀವ್ರ ವಾಗ್ದಾಳಿ ಮಾಡಿದ್ದಾರೆ. ಸದಾನಂದ ಗೌಡರು ಈ ರಾಜ್ಯಕ್ಕೆ ಮುಖ್ಯಮಂತ್ರಿಯಿರಬಹುದು. ಆದರೆ ನನ್ನ ನಾಯಕರು ಯಡಿಯೂರಪ್ಪನವರು ಎಂದು ಗುಡುಗಿದ್ದಾರೆ.
ಯಡಿಯೂರಪ್ಪ ನನ್ನ ರಾಜಕೀಯ ಗುರುವೂ ಹೌದು. ರಾಜಕೀಯದಲ್ಲಿ ನನಗೆ ಇಂದಿನ ಸ್ಥಾನಮಾನ ದೊರೆಯಲು ಯಡಿಯೂರಪ್ಪ ಕಾರಣಕರ್ತರು. ಎಂದೆಂದಿಗೂ ಅವರೇ ನನಗೆ ನಾಯಕರು ಎಂದು ಹೇಳಿದ್ದಾರೆ.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಬೇಕು ಎಂಬ ಬೇಡಿಕೆಯಲ್ಲಿ ತಪೇನಿಲ್ಲ. ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೂರ್‍ನಾಲ್ಕು ತಿಂಗಳಿಗೊಮ್ಮೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತಿತ್ತು. ಇದೀಗ 10 ತಿಂಗಳಾದರೂ ನಡೆದಿಲ್ಲ. ಶಾಸಕರು ತಮ್ಮ ಸಮಸ್ಯೆ ಹೇಳಿಕೊಳ್ಳಲು ಶಾಸಕಾಂಗ ಸಭೆ ಕರೆಯಲೇಬೇಕು ಎಂದು ಸಚಿವ ರೇಣುಕಾಚಾರ್ಯ ಪುನರುಚ್ಚರಿಸಿದರು.
ಬಿಪಿ ಹರೀಶ್ ಸಹ ಡಿ.ವಿ. ಸದಾನಂದಗೌಡರಿಗೆ ಮತ ಹಾಕಿದ್ದು, ಇದೀಗ ಅದೇ ಹಕ್ಕಿನಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲು ಒತ್ತಾಯಿಸುತ್ತಿದ್ದಾರೆ. ಆದರೆ, ಅವರನ್ನು ಹಾದಿ ಬೀದಿಲಿ ಹೋಗೋರು ಎಂದು ಮಾತನಾಡುವುದು ಸರಿಯಲ್ಲ ಎಂದು ಹರೀಶ್ ಪರ ವಕಾಲತ್ತು ವಹಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಜೆಡಿಎಸ್ ಪದಾಧಿಕಾರಿಯೊಬ್ಬರು ನನ್ನ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ತನಿಖೆಗೆ ವಹಿಸಿರುವುದು ನನಗೆ ಬೇಸರ ತರಿಸಿದೆ. ಒಬ್ಬ ಸಂಪುಟ ಸಹೋದ್ಯೋಗಿಯಾದ ನನ್ನನ್ನು ಸೌಜನ್ಯಕ್ಕಾದರೂ ಕರೆದು ವಿವರಣೆ ಕೇಳಲಿಲ್ಲ. ನಾಳೆ ಮುಖ್ಯಮಂತ್ರಿಯವರ ಮೇಲೆಯೇ ಯಾರಾದರೂ ಕೋಟ್ಯಂತರ ರೂ. ಪಡೆದಿದ್ದಾರೆ ಎಂದು ಆರೋಪ ಮಾಡಿದರೆ ತನಿಖೆಗೆ ಆದೇಶ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.












Click it and Unblock the Notifications