ಗಣಿ ಲಂಚ: ಯಡಿಯೂರಪ್ಪಗೆ ಸಿಕ್ತು ನಿರೀಕ್ಷಿತ ಜಾಮೀನು
ಬೆಂಗಳೂರು, ಜೂನ್ 21: ಗಣಿಗಾರಿಕೆ ಲಂಚ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದರಿಂದ ಯಡಿಯೂರಪ್ಪಗೆ ಭಾರಿ ರಿಲೀಫ್ ಸಿಕ್ಕಿದೆ.
ಇದರಿಂದ ಜಿಂದಾಲ್ ಸಮೂಹದ ಗಣಿ ಕಂಪನಿಯಿಂದ ಲಂಚ ಪಡೆದ ಆರೋಪ ಹೊತ್ತ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರರಾದ ಬಿ.ವೈ. ರಾಘವೇಂದ್ರ, ಬಿ.ವೈ. ವಿಜಯೇಂದ್ರ ಹಾಗೂ ಅಳಿಯ ಸೋಹನ್ ಕುಮಾರ್ ಅವರುಗಳು ಸಿಬಿಐ ಬಂಧನದ ಭೀತಿಯಿಂದ ಬಚಾವಾಗಿದ್ದಾರೆ.

ಆರೋಪಿಗಳು ಮತ್ತು ಸಿಬಿಐ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ, ತೀರ್ಪು ಕಾಯ್ದಿರಿಸಿದ್ದ ನ್ಯಾ. ಸುಭಾಷ ಬಿ. ಆದಿ ಅವರ ಏಕ ಸದಸ್ಯ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದ್ದಾರೆ. ಯಡಿಯೂರಪ್ಪ ಅವರ ಪರ ವಕೀಲ ಅಶೋಕ್ ಹಾರ್ನಳ್ಳಿ ಮತ್ತು ಸಿಬಿಐ ಪರ ವಕೀಲ ಸಿಎಚ್ ಜಾಧವ್ ಈ ವೇಳೆ ಕೋರ್ಟಿನಲ್ಲಿ ಹಾಜರಿದ್ದರು. ಪ್ರಸ್ತುತ ಯಡಿಯೂರಪ್ಪ ಅವರು ರೇಸ್ ಕೋರ್ಸ್ ರಸ್ತೆಯಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿದ್ದಾರೆ.
ಈಗಾಗಲೇ, ಯಡಿಯೂರಪ್ಪ ಅವರ ಪುತ್ರರು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಿಬಿಐ ಪರ ವಕೀಲರು ಹೈಕೋರ್ಟ್ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪಗೆ ಜಾಮೀನು ಸಿಕ್ಕಿರುವುದನ್ನು ವಿರೋಧಿಸಿ, ಸಿಬಿಐ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಿದೆ.
ಆರೋಪಿಗಳು ಮತ್ತು ಸಿಬಿಐ ವಕೀಲರ ವಾದ-ಪ್ರತಿವಾದಗಳನ್ನು ಆಲಿಸಿ ಮುಗಿಸಿರುವ ನ್ಯಾಯಮೂರ್ತಿ ಸುಭಾಷ ಬಿ. ಆದಿ ಅವರು ಆದೇಶವನ್ನು ಬುಧವಾರಕ್ಕೆ ಕಾಯ್ದಿರಿಸಿದ್ದರು. ಆದರೆ ಬುಧವಾರವೂ ತೀರ್ಪು ನೀಡದೆ, ಇಂದಿಗೆ ಅಂದರೆ ಗುರುವಾರ ಯಡಿಯೂರಪ್ಪ ಜಾಮೀನು ಅರ್ಜಿ ಭವಿಷ್ಯ ನಿರ್ಧರಿಸುವುದಾಗಿ ಹೇಳಿದ್ದರು. ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ಸಿಬಿಐ ವಿಶೇಷ ನ್ಯಾಯಾಲಯದ ಆದೇಶವನ್ನು ಇವರೆಲ್ಲರೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
2009ರಲ್ಲಿ ಎಸ್ ಆರ್ ಹಿರೇಮಠ್ ಅವರು ಯಡಿಯೂರಪ್ಪ ವಿರುದ್ಧ ಗಣಿ ಲಂಚ ಆರೋಪ ಹೊರಿಸಿ, ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಿಸಿದ್ದರು.











Click it and Unblock the Notifications