ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಆಸ್ಪತ್ರೆಗಳಲ್ಲಿ ಅರ್ಧ ಬೆಲೆಗೆ ಔಷಧಿ ಲಭ್ಯ

By Srinath
|
Google Oneindia Kannada News

ಬೆಂಗಳೂರು, ಜೂನ್ 20: ಹೌದು ರಾಜ್ಯ ಸರಕಾರ ಒಂದು ವಿಷಯದಲ್ಲಾದರೂ ಜನಸಾಮಾನ್ಯರ ನೆರವಿಗೆ ಬಂದಿದೆ. ಅದೂ ಜನರನ್ನು ಹೆಚ್ಚು ಕಾಡುವ ವೈದ್ಯಲೋಕದಲ್ಲಿ ಇಂತಹ ಉತ್ತಮ ನಿರ್ಧಾರ ತೆಗೆದುಕೊಂಡಿದೆ. ಏನಪಾ ಅಂದರೆ ಸರಕಾರಿ ಆಸ್ಪತ್ರೆಗಳಲ್ಲಿ ಇನ್ನು ಮುಂದೆ ಅರ್ಧಕ್ಕೆ ಅರ್ಧ ಕಡಿಮೆ ಬೆಲೆಯಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುವುದು. ಆದರೆ ಇದು ಬ್ರ್ಯಾಂಡೆಡ್ ಔಷಧಗಳಲ್ಲ. ಬದಲಿಗೆ ಪೇಟೆಂಟ್ ಇಲ್ಲದ, ಸಾಮಾನ್ಯ ರೀತಿಯಲ್ಲಿ ಉತ್ಪಾದನೆಗೊಂಡ ಜನರಿಕ್ ಔಷಧಗಳು ಇವಾಗಿವೆ.


ಜನರಿಕ್ ಔಷಧಗಳನ್ನು ಬ್ರ್ಯಾಂಡ್ ಹೆಸರಿನಲ್ಲಿ ಕಂಪನಿಗಳು ಉತ್ಪಾದಿಸಿದರೆ ಅವುಗಳ ಬೆಲೆ ಹೆಚ್ಚಾಗುತ್ತವೆ. ಏಕೆಂದರೆ ಆ ಔಷಧಗಳನ್ನು ಉತ್ಪಾದಿಸಲು ಕಂಪನಿಗಳು ಪೇಟೆಂಟ್, ರೀಸರ್ಚ್ ಅಂಡ್ ಡೆವೆಲಪ್ ಮೆಂಟ್ ಅಂತೆಲ್ಲ ಹೆಚ್ಚು ಹಣ ವೆಚ್ಚ ಮಾಡಿರುತ್ತವೆ. ಆದರೆ ಇಂತಹ ಔಷಧಗಳನ್ನು ಅದೇ ರಾಸಾಯನಿಕ ಸ್ವರೂಪ ಮತ್ತು ಗುಣಮಟ್ಟಗಳನ್ನು ಉಳಿಸಿಕೊಂಡು ಪೇಟೆಂಟ್ ಇಲ್ಲದೆಯೇ ಸಾಮಾನ್ಯ ಕಂಪನಿಗಳೂ ಉತ್ಪಾದಿಸುತ್ತವೆ.

ಇಂತಹ ಔಷಧಗಳು ಯಾವುದೇ ಮಾರಾಟ ಗಿಮಿಕ್ ಗಳಿಲ್ಲದೆ, ಜಾಹೀರಾತು, ತೆರಿಗೆ ರಗಳೆಗಳಿಲ್ಲದೆ, ಔಷಧ ತಯಾರಿಕೆ/ಮಾರಾಟ ನೀತಿಗೆ ಒಳಪಡದೆ ಉತ್ಪಾದನಾ ಕಂಪನಿಯಿಂದ ನೇರವಾಗಿ ಔಷಧ ಅಂಗಡಿಗಳಿಗೆ ಸರಬರಾಜು ಆಗಲಿವೆ.

ಅಲ್ಲಿಗೆ ಒಂದೇ ಔಷಧ ಸಾಮಾನ್ಯವಾಗಿ ಎರಡು ರೂಪಗಳಲ್ಲಿ ಉತ್ಪಾದನೆಯಾಗುತ್ತದೆ ಅಂತಾಯಿತು. ಕಡಿಮೆ ವೆಚ್ಚದ ಈ ಎರಡನೆಯ ಔಷಧಗಳನ್ನೇ ಕರ್ನಾಟಕ ಸರಕಾರ ಈಗ ಶೇ. 50ರಷ್ಟು ಕಡಿಮೆ ದರದಲ್ಲಿ ಸರಕಾರಿ ಆಸ್ಪತ್ರೆಗಳ ಮುಖಾಂತರ ಸರಬರಾಜು ಮಾಡುವ ಬಗ್ಗೆ ತೀರ್ಮಾನ ತೆಗೆದುಕೊಂಡಿರುವುದು. ಆದರೆ ಇದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಬ್ರ್ಯಾಂಡೆಡ್ ಔಷಧಗಳನ್ನೇ ಅರ್ಧ ದರದಲ್ಲಿ ಕೊಡಿ ಎಂದು ಮೆಡಿಕಲ್ ಸ್ಟೋರುಗಳಲ್ಲಿ ಕೇಳಿ ಮುಜುಗುರುಕ್ಕೊಳಗಾಗಬೇಡಿ.

ಎಲ್ಲಕ್ಕಿಂತ ಮುಖ್ಯವಾಗಿ ಇಂತಹ ಜನರಿಕ್ ಔಷಧಗಳನ್ನೇ prescribe ಮಾಡುವಂತೆ ಸರಕಾರಿ ವೈದ್ಯರುಗಳಿಗೆ ರಾಜ್ಯ ಸರಕಾರ ತಾಕೀತು ಮಾಡಿದೆ. ಈ ಮಧ್ಯೆ, ಬಡತನ ರೇಖೆಗಿಂತ ಕಡಿಮೆಯಿರುವವರಿಗೆ ಉಚಿತ ಔಷಧ ವಿತರಣೆ ಮುಂದುವರಿಯಲಿದೆ.

ಇದು ಬಡ ಮತ್ತು ಮಧ್ಯಮ ವರ್ಗದವರಿಗೆ ಜೀವ ರಕ್ಷಕವಾಗಲಿದೆ. ಸರಕಾರದ ಎಲ್ಲ ಆಸ್ಪತ್ರೆಗಳಲ್ಲಿರುವ ಔಷಧ ಮಳಿಗೆಗಳಲ್ಲಿ ಈ ಜನರಿಕ್ ಔಷಧಗಳನ್ನು ಅಗತ್ಯವಿರುವ ಎಲ್ಲ ರೋಗಿಗಳಿಗೂ ಮಾರಾಟ ಮಾಡಲಿದೆ. ಇದಕ್ಕಾಗಿ ಜನತಾ ಬಜಾರ್ ಜನರಿಕ್ ಡ್ರಗ್ ಸ್ಟೋರುಗಳನ್ನೂ ತೆರೆಯಲು ಸರಕಾರ ನಿರ್ಧರಿಸಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಾಳೆ ಗುರುವಾರ ಮುಖ್ಯಮಂತ್ರಿ ಸದಾನಂದ ಗೌಡರು ಇಂತಹ ಮೊದಲ ಜನತಾ ಬಜಾರ್ ಜನರಿಕ್ ಡ್ರಗ್ ಸ್ಟೋರ್ ಅನ್ನು ಉದ್ಘಾಟಿಸಲಿದ್ದಾರೆ.

ಕುತೂಹಲದ ಸಂಗತಿಯೆಂದರೆ ಇಂತಹ ಜನರಿಕ್ ಔಷಧಗಳು ಅತ್ಯಧಿಕ ಪ್ರಮಾಣದಲ್ಲಿ ಉತ್ಪಾದನೆಯಾಗುವುದು ಭಾರತದಲ್ಲೇ. ಆದರೆ ಹಾಗೆ ಉತ್ಪಾದನೆಯಾದ ಔಷಧಗಳನ್ನೆಲ್ಲ ತೃತೀಯ ಬಡ ರಾಷ್ಟ್ರಗಳಿಗೆ ಕಳಿಸುವುದರಿಂದ ಭಾರತದಲ್ಲಿ ಅವುಗಳ ಬಳಕೆ ಕಡಿಮೆಯಾಗಿದೆ.

ಇದು ಎಷ್ಟರಮಟ್ಟಿಗೆ ಸರೀನೋ ಗೊತ್ತಿಲ್ಲ. ಆದರೆ ಒಂದು ಕಚ್ಚಾ ಉದಾಹರಣೆ ನೀಡುವುದಾದರೆ ನಿಮಗೆ ನೆಗಡಿ, ಜ್ವರ, ಹಲ್ಲು ನೋವು ಅಂತೆಲ್ಲ ಬಾಧೆ ಕಾಣಿಸಿಕೊಂಡಾಗ ವೈದ್ಯರನ್ನು ಭೇಟಿ ಮಾಡದೆ ಹತ್ತಿರದ ಯಾವುದಾದರೂ ಮಡಿಕೆಲ್ ಸ್ಟೋರಿಗೆ ಹೋಗಿ, ನಿಮ್ಮ ಬಾಧೆಯನ್ನು ಹೇಳಿಕೊಂಡು 5-10 ರುಪಾಯಿಗೆಲ್ಲ ಔಷಧ ಪಡೆಯುತ್ತೀರಿ. ಮತ್ತು ಬಾಧೆಯಿಂದಲೂ ಮುಕ್ತಿ ಪಡೆಯುತ್ತೀರಿ. ಜತೆಗೆ ಒಳಗೊಳಗೇ ಒಂದು ಸಂತಸ, ಸಮಾಧಾದನವನ್ನು ಪಡೆಯುತ್ತೀರಿ.

ನೋಡಿ ಕೇವಲ ಐದ್ಹತ್ತು ರುಪಾಯಿಯಲ್ಲಿ ರೋಗ ವಾಸಿ ಆಗ್ಹೋಯ್ತು. ಅದೇ, ಡಾಕ್ಟರ್ ಅಹತ್ಯ ಹೋಗಿದ್ದರೆ ಆಯಪ್ಪ 100 ರುಪಾಯಿ ಪೀಕುತ್ತಿದ್ದ. ಮತ್ತೆ ಇದೇ ಔಷಧಗಳನ್ನೇ ಬರೆದುಕೊಡುತ್ತಿದ್ದ. ನಾನು ಜಗಮೊಂಡ ಜತೆಗೆ ಬುದ್ಧಿವಂತ ಅದಕ್ಕೆ ಸೀದಾ ನಾನೇ ಹೋಗಿ ಮಡಿಕಲ್ ಸ್ಟೋರಿನಲ್ಲಿ ಮಾತ್ರೆ ತಗೊಂಬಿಟ್ಟೆ ಅಂತ ಜಂಭಪಡುತ್ತೀರಿ.

ಇದು ತಪ್ಪೋ ಒಪ್ಪೋ ಎಂಬ ಒಣ ಚರ್ಚೆಯನ್ನು ಪಕ್ಕಕ್ಕಿಟ್ಟು ಹೇಳುವುದಾದರೆ ಅಲ್ಲಿ ಮಡಿಕಲ್ ಸ್ಟೋರಿನವನು ಕೊಟ್ಟಿರುವುದೇ ಇದೇ ಜನರಿಕ್ ಔಷಧ ಎಂಬ ಸರಳ ಸಂಗತಿ ನಿಮಗೆ ತಿಳಿಯುವುದೇ ಇಲ್ಲ! ಸೋ ಗೊತ್ತಾಯ್ತಲ್ಲ ಜನರಿಕ್ ಮಡಿಸನ್ ಅಂದ್ರೆ ಹೇಗೆ ಕಡಿಮೆ ಬೆಲೆಗೆ ಸಿಗುತ್ತದೆ ಎಂಬುದು.

English summary
With a view to help the poorer sections of the people, the Karnataka Government has decided to sell generic drugs at 50 percent discount by opening generic drug stores in all Government hospitals. Chief Minister D V Sadnanda Gowda would inaugurate the first Janata Bazaar Generic Drug Store on June 21 in the premises of Victoria Hospital in the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X