ರೆಡ್ಡಿ ಜೊತೆ 5ತಾಸು ಮಾತುಕತೆ ನಡೆಸಿದ ರಾಮುಲು

ಅಕ್ರಮ ಗಣಿಗಾರಿಕೆ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ಜೊತೆ ಮಾತುಕತೆ ನಡೆಸಿ ಹೊರಬಂದ ರಾಮುಲು, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ಬಲವರ್ಧನೆ, ಸಂಘಟನೆ ಮತ್ತು ಮುಂದಿಂದ ಯೋಜನೆಗೆ ಬಗ್ಗೆ ಚರ್ಚಿಸಿದ್ದೇನೆ. ಸತತ ಮೂರು ತಿಂಗಳು ನಡೆಸಿದ ಪಾದಯಾತ್ರೆ ಯಶಸ್ವಿಯಾಗಿದೆ ಎಂದು ವಿವರಿಸಿದ್ದೇನೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಾಮೀನಿಗಾಗಿ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಆಂಧ್ರದ ಎಸಿಬಿ ಪೋಲೀಸರ 8ಜನರ ತಂಡ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಭೇಟಿ ನೀಡಿ ಅಧೀಕ್ಷರೊಂದಿಗೆ ಚರ್ಚೆ ನಡೆಸಿ ಅರ್ಜಿ ನೀಡಿದ್ದಾರೆ. ಅರ್ಜಿಯಲ್ಲಿನ ಮಾಹಿತಿಯನ್ನು ಗೌಪ್ಯವಾಗಿರಿಸಲಾಗಿದೆ.
ಸೋಮವಾರ ಬೆಳಗ್ಗೆ ಸುಮಾರು 11 ಗಂಟೆಯ ಸುಮಾರಿಗೆ ಬಂದ ಅಧಿಕಾರಿಗಳು ಮೊದಲು ಅಧೀಕ್ಷಕರನ್ನು ಭೇಟಿ ಮಾಡಿ ನಂತರ ಜನಾರ್ದನ ರೆಡ್ಡಿ ಜೊತೆ ಮಾತುಕತೆ ನಡೆಸಿದ್ದಾರೆನ್ನಲಾಗಿದೆ.
ಅಕ್ರಮ ಗಣಿಗಾರಿಕೆ ಸುಳಿಯಲ್ಲಿ ಸಿಲುಕಿರುವ ರೆಡ್ಡಿ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜುಲೈ ಐದರ ವರೆಗೆ ವಿಸ್ತರಿಸಿ ಸಿಬಿಐ ವಿಶೇಷ ನ್ಯಾಯಾಲಯ ಆದೇಶ ನೀಡಿದೆ. ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನಲೆಯಲ್ಲಿ ಸೋಮಾವಾರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳ ವಿಚಾರಣೆ ನಡೆಸಿದ್ದಾರೆ.
ಈ ವೇಳೆ ರೆಡ್ಡಿ ಮತ್ತು ಅವರ ಆಪ್ತ ಆಲಿಖಾನ್ ನ್ಯಾಯಾಂಗ ಬಂಧನ ಅವಧಿಯನ್ನೂ ಕೂಡಾ ವಿಸ್ತರಿಸಿ ವಿಚಾರಣೆ ಮುಂದೂಡಿದೆ.












Click it and Unblock the Notifications