ಬೆಳಗಾವಿ ಪಾಲಿಕೆ ಸೂಪರ್ ಸೀಡ್ ಸರ್ಕಾರ ಆದೇಶ ರದ್ದು

ಡಾ. ಚಂದ್ರಶೇಖರ ಕಂಬಾರ ಸೇರಿದಂತೆ ಕನ್ನಡ ಪರ ಹೋರಾಟಗಾರರು, ಮಹಾಪೌರರು, ಉಪ ಮಹಾಪೌರರಿಗೆ ಮಂದಾ ಬಾಳೇಕುಂದ್ರಿ ನೇತೃತ್ವದ ಮಹಾರಾಷ್ಟ್ರ ಏಕೀಕರಣ ಸಮಿತಿ ಆಡಳಿತ ಅವಮಾನ ಎಸೆಗಿದ ಹಿನ್ನೆಲೆಯಲ್ಲಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರ ಆದೇಶ ಹೊರಡಿಸಿತ್ತು.
ಆದರೆ, ಸಂಜಯ್ ಪ್ರಭು ಎಂಬುವರು ಲತೀಶ್ ಖಾನ್ ಪಠಾಣ್ ಕೋರ್ಟ್ ನಲ್ಲಿ ಸರ್ಕಾರದ ಆದೇಶವನ್ನು ಪ್ರಶ್ನಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಮೋಹನ ಶಾಂತನಗೌಡರು ಪಾಲಿಕೆ ಸೂಪರ್ ಸೀಡ್ ಮಾಡಿದ ಸರ್ಕಾರದ ಕ್ರಮ ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದೊಂದು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಾಳಿಗೆ ತೂರಿದ ಕೈಗೊಳ್ಳಲಾದ ಕ್ರಮವಾಗಿದೆ ಎಂದು ತಮ್ಮ ತೀರ್ಪಿನಲ್ಲಿ ನ್ಯಾ ಶಾಂತನಗೌಡ ಅವರು ಹೇಳಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆಯ 22 ಜನ ಸದಸ್ಯರು ಸರ್ಕಾರ ನೀಡಿದ್ದ ನೋಟಿಸಿಗೆ ಜೂ.25ರ ಒಳಗೆ ಉತ್ತರ ನೀಡುವಂತೆ ನ್ಯಾಯಮೂರ್ತಿಗಳು ಕಾಲಾವಕಾಶ ನೀಡಿದ್ದಾರೆ. ಈ ಪ್ರಕರಣದಲ್ಲಿ ಅರ್ಜಿದಾರರ ಪರವಾಗಿ ಸಂಗ್ರಾಮ ಕುಲಕರ್ಣಿ ವಕಾಲತ್ತು ವಹಿಸಿದ್ದರು.
ಬೆಳಗಾವಿ ಪಾಲಿಕೆಯನ್ನು ಸೂಪರ್ ಸೀಡ್ ಮಾಡಲು 20 ಅಂಶಗಳನ್ನು ಸರಕಾರ ಪಟ್ಟಿ ಮಾಡಿದ್ದು, ಅವುಗಳಲ್ಲಿ ಪ್ರಮುಖವಾದವು, ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ್ದು, ಕನ್ನಡ ವಿರೋಧಿಸಿ ನಾಡದ್ರೋಹ ಎಸಗಿದ್ದು, ಕಂಬಾರರಿಗೆ ಅವಮಾನ ಮಾಡಿದ್ದು, ನಾಡು-ನುಡಿಗೆ ಅಗೌರವ ತೋರಿದ್ದು, ಹಣಕಾಸು ದುರ್ಬಳಕೆ ಮಾಡಿದ್ದು.
ದುರಹಂಕಾರದ ವರ್ತನೆ ತೋರಿದ್ದ ಬೆಳಗಾವಿ ಮೇಯರ್ ಮಂದಾ ಬಾಳೆಕುಂದ್ರಿಗೆ ನ.26ರಂದು ನೋಟೀಸ್ ನೀಡಲಾಗಿತ್ತು. ಮಂದಾ ಡಿ.9 ರಂದು ಪತ್ರಕ್ಕೆ ಉತ್ತರಿಸಿ ಸೂಪರ್ ಸೀಡ್ ಮಾಡಬಾರದು, ಪೂರ್ತಿ ಅವಧಿ ಆಡಳಿತ ನಡೆಸಲು ಅವಕಾಶ ಮಾಡಿಕೊಡಬೇಕು ಎಂದು ಸರಕಾರವನ್ನು ಅಂಗಲಾಚಿದ್ದರು. ಈ ಕೋರಿಕೆಯನ್ನು ಮನ್ನಿಸದ ಸರಕಾರ ಸೂಪರ್ ಸೀಡ್ ಮಾಡಲು ನಿರ್ಧರಿಸಿತ್ತು.












Click it and Unblock the Notifications