ಬಿಎಸ್ಆರ್ ಕಾಂಗ್ರೆಸ್ : ಶ್ರೀರಾಮುಲು ಹೊಸ ಪಕ್ಷ

ಉತ್ತರ ಕರ್ನಾಟಕದ ಬಸವಕಲ್ಯಾಣದಿಂದ 54 ದಿನಗಳ ಕಾಲ 921 ಕಿ.ಮೀ. ಪಾದಯಾತ್ರೆ ಮಾಡಿ ಬೆಂಗಳೂರಿಗೆ ಆಗಮಿಸಿರುವ ಶ್ರೀರಾಮುಲು ಅವರು ರಾಜ್ಯ ಚುನಾವಣಾ ಆಯೋಗದಲ್ಲಿ ಪಕ್ಷದ ಹೊಸ ಹೆಸರನ್ನು ನೊಂದಾವಣಿ ಮಾಡಿಸಿಕೊಂಡಿದ್ದಾರೆ. ಏಪ್ರಿಲ್ 24ರಂದು ಬಸವಕಲ್ಯಾಣದಿಂದ ಶ್ರೀರಾಮುಲು ಪಾದಯಾತ್ರೆ ಆರಂಭಿಸಿದ್ದರು. ಶ್ರೀರಾಮುಲು ಅವರ ಹೊಸ ಪಕ್ಷದಲ್ಲಿನ ಬಿಎಸ್ಆರ್ ಅಂದರೆ ಬಡವ, ಶ್ರಮಿಕ, ರೈತರ ಪಕ್ಷ.
ಪಾದಯಾತ್ರೆ ಮುಗಿಸುವ ಹೊತ್ತಿಗೆ ರಾಜ್ಯ ಸರಕಾರ ಪತನದ ಹಂತದಲ್ಲಿ ತಲುಪಿರುತ್ತದೆ ಎಂದು ಶ್ರೀರಾಮುಲು ಅವರು ಪಾದಯಾತ್ರೆ ಆರಂಭ ಮಾಡುವ ಮುನ್ನ ಹೇಳಿದ್ದರು. ಈಗ ಪಾದಯಾತ್ರೆ ಮುಗಿಸಿರುವ ಹುಮ್ಮಸ್ಸಿನಲ್ಲಿರುವ ಶ್ರೀರಾಮುಲು ಅವರು, ಆಂಧ್ರದಲ್ಲಿ ವೈಎಸ್ಆರ್ ಕಾಂಗ್ರೆಸ್ ಉಳಿದ ಪಕ್ಷಗಳನ್ನು ಧೂಳಿಪಟ ಮಾಡಿದಂತೆ ಕರ್ನಾಟಕದಲ್ಲಿ ಕೂಡ ಬಿಎಸ್ಆರ್ ಕಾಂಗ್ರೆಸ್ ಕೂಡ ಉಳಿದ ಪಕ್ಷಗಳನ್ನು ನಿರ್ನಾಮ ಮಾಡಲಿದೆ ಎಂದು ಆತ್ಮವಿಶ್ವಾಸದಿಂದ ನುಡಿದ್ದಾರೆ.
ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸಮಾವೇಶ : ತಮ್ಮ ಪಾದಯಾತ್ರೆಯ ಕೊನೆಯ ದಿನವಾದ ಜೂನ್ 17ರಂದು ಭಾನುವಾರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಶ್ರೀರಾಮುಲು ಅವರು ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದಾರೆ. ಈ ಸಮಾವೇಶದಲ್ಲಿ ಲಕ್ಷಕ್ಕೂ ಹೆಚ್ಚಿನ ಅಭಿಮಾನಿಗಳು ಬಂದು ಸೇರುವ ನಿರೀಕ್ಷೆಯಿದೆ. ಇದೇ ಸಂದರ್ಭದಲ್ಲಿ ಕಾರ್ಯಕರ್ತರನ್ನು ಹೊಸ ಪಕ್ಷಕ್ಕೆ ನೊಂದಾಯಿಸಿಕೊಳ್ಳುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶ್ರೀರಾಮುಲು ಪಕ್ಷದ ವಕ್ತಾರರು ತಿಳಿಸಿದ್ದಾರೆ. ಈ ಸಮಾವೇಶದಲ್ಲಿ ಇತ್ತೀಚೆಗೆ ಶ್ರೀರಾಮುಲು ಪಕ್ಷ ಸೇರಿರುವ ಖ್ಯಾತ ಚಿತ್ರ ನಟಿ ರಕ್ಷಿತಾ ಕೂಡ ಭಾಗವಹಿಸಲಿದ್ದಾರೆ.
ರೆಡ್ಡಿಗಳು ಏನು ಮಾಡಲಿದ್ದಾರೆ? : ಎಲ್ಲ ರೀತಿಯಲ್ಲೂ ಹೊಡೆತ ತಿನ್ನುತ್ತಿರುವ ರೆಡ್ಡಿ ಬ್ರದರ್ಸ್ ಈ ಸಂದರ್ಭದಲ್ಲಿ ಏನು ಮಾಡಲಿದ್ದಾರೆ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕರುಣಾಕರ ರೆಡ್ಡಿಯನ್ನು ಹೊರತುಪಡಿಸಿದರೆ ಬಿಜೆಪಿಯಲ್ಲಿ ಅಧಿಕೃತವಾಗಿ ಇರುವ ಸೋಮಶೇಖರ ರೆಡ್ಡಿ, ಸಂಸದೆ ಸ್ಥಾನ ಕಳೆದುಕೊಂಡಿರುವ ಶ್ರೀರಾಮುಲು ತಂಗಿ ಜೆ. ಶಾಂತಾ, ಕಂಪ್ಲಿ ಶಾಸಕ ಸುರೇಶ್ ಬಾಬು ಮುಂತಾದವರು ಶ್ರೀರಾಮುಲುವನ್ನು ಬಹಿರಂಗವಾಗಿ ಬೆಂಬಲಿಸುತ್ತ ಬಂದಿದ್ದಾರೆ. ಇವರೆಲ್ಲ ಜೂ.17ರ ಸಮಾವೇಶಕ್ಕೆ ಬರಲಿದ್ದಾರಾ?
ಇವರಲ್ಲಿ ಸೋಮಶೇಖರ ರೆಡ್ಡಿ ಮತ್ತು ಸುರೇಶ್ ಬಾಬು ಅವರಿಬ್ಬರ ಹೆಸರು, ಜನಾರ್ದನ ರೆಡ್ಡಿ ಜಾಮೀನಿಗಾಗಿ ಹೈದರಾಬಾದ್ ಸಿಬಿಐ ನ್ಯಾಯಾಧೀಶರಿಗೆ ಲಂಚ ನೀಡಿದ ಪ್ರಕರಣದಲ್ಲಿ ಕೇಳಿಬಂದಿದೆ. ಅವರು ಶ್ರೀರಾಮುಲುವನ್ನು ಬೆಂಬಲಿಸಿದರೂ, ಲಂಚ ಪ್ರಕರಣದಲ್ಲಿ ಆರೋಪಿಗಳಾಗಿದ್ದರೂ ಕರ್ನಾಟಕ ಬಿಜೆಪಿ ಮಾತ್ರ ತನಗೂ ಅದಕ್ಕೂ ಸಂಬಂಧವಿಲ್ಲ ಎಂದು ಕೈಕಟ್ಟಿ ಕುಳಿತಿದೆ. ಅವರ ವಿರುದ್ಧ ವಿಚಾರಣೆ ನಡೆಸುವ ಅಥವಾ ಕ್ರಮ ತೆಗೆದುಕೊಳ್ಳುವ ಚಿಂತನೆಯನ್ನೂ ನಡೆಸಿಲ್ಲ.












Click it and Unblock the Notifications