ಕೆಎಂಎಫ್ ರೆಡ್ಡಿ ಬಂಧಿಸಿ, ಬಾಯ್ಬಿಡಿಸಿ: ಹಿರೇಮಠ್

ಹುಬ್ಬಳ್ಳಿಯಲ್ಲಿ ಸೋಮವಾರ (ಜೂ.4) ಸುದ್ದಿಗೋಷ್ಠಿ ನಡೆಸಿದ ಹಿರೇಮಠ್ ಅವರು, ಸೋಮಶೇಖರ ರೆಡ್ಡಿ ಅವರು ಸಾಕ್ಷಿ ನಾಶ ಮಾಡುವ ಮೊದಲು ಬಂಧಿಸಿದರೆ ಉತ್ತಮ. ಇದು ಭ್ರಷ್ಟಾಚಾರದ ಪರಮಾವಧಿಯಾಗಿದೆ. ಈ ಪ್ರಕರಣದಲ್ಲಿ ಇನ್ನಷ್ಟು ಮಂದಿ ಕೂಡಾ ಸಹಾಯ ನೀಡಿರುವ ಅನುಮಾನವಿದೆ ಎಂದರು.
ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಬಳ್ಳಾರಿ ವಿಶೇಷ ಜಿಲ್ಲಾಧಿಕಾರಿಯಾಗಿದ್ದ ಎಚ್ ರಾಮಾಂಜನೇಯ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳ ನೆರವು ನೀಡಿದ್ದು ತಿಳಿದು ಬಂದಿದೆ. ಇವರುಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕಿದೆ. ಅಧಿಕಾರಿಗಳಾಸ ಎಸ್ ಪಿ ರಾಜು, ಡಿಎಸ್ ಎಫ್ ಮುತ್ತಯ್ಯ ಅವರನ್ನು ಸಿಬಿಐ ವಶಕ್ಕೆ ತೆಗೆದುಕೊಂಡರೆ ಒಳ್ಳೆಯದು ಎಂದು ಹಿರೇಮಠ್ ಅಭಿಪ್ರಾಯಪಟ್ಟಿದ್ದಾರೆ.
ನನ್ನ ಹೋರಾಟ ಭ್ರಷ್ಟಾಚಾರದ ವಿರುದ್ಧವೇ ಹೊರತು ಯಾವುದೇ ವ್ಯಕ್ತಿ, ಪಕ್ಷ, ಸಂಸ್ಥೆ ವಿರುದ್ಧ ಅಲ್ಲ ಎಂದು ಹಿರೇಮಠ್ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಇನ್ನು ಯಾರು ಯಾರು ಭಾಗಿ?: ಜಡ್ಜ್ ಟಿ ಪಟ್ಟಾಭಿರಾಮರಾವ್ ಅವರು ಗಾಲಿ ಜನಾರ್ದನ ರೆಡ್ಡಿಗೆ ಜಾಮೀನು ನೀಡುವಂತೆ ಡೀಲ್ ಕುದುರಿಸಿದ್ದೆ ಕಾನೂನು ಮತ್ತು ಸಂಸದೀಯ ಸಚಿವ ಎರಸು ಪ್ರತಾಪ್ ರೆಡ್ಡಿ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ನಂತರ ಈ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ಎರಸು ಸ್ಪಷ್ಟಪಡಿಸಿದ್ದರು.
ರೆಡ್ಡಿ ಆಪ್ತರಾದ ಕಂಪ್ಲಿ ಶಾಸಕ ಸುರೇಶ್ ಬಾಬು, ಕೂಡ್ಲಿಗಿ ಶಾಸಕ ನಾಗೇಂದ್ರ ಸೇರಿದಂತೆ ಸುಮಾರು 12ಕ್ಕೂ ಅಧಿಕ ಪ್ರಭಾವಿ ನಾಯಕರು ಜಾಮೀನಿಗಾಗಿ ಲಂಚ ಪ್ರಕರಣದಲ್ಲಿ ಗುರುತಿಸಿಕೊಂಡಿದ್ದಾರೆ. ಆದರೆ, ಈ ಬಗ್ಗೆ ಸಿಬಿಐ ಇನ್ನೂ ಯಾವುದೇ ಹೇಳಿಕೆ ನೀಡಿಲ್ಲ, ಎಫ್ಐಆರ್ ಆಗಲಿ ಹಾಕಿಲ್ಲ.
ಓಬಳಾಪುರಂ ಗಣಿ ಸಂಸ್ಥೆ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಎಂಡಿ ಶ್ರೀನಿವಾಸ್ ಅವರಿಗೆ ಹೈದರಾಬಾದಿನ ಸಿಬಿಐ ವಿಶೇಷ ನ್ಯಾಯಾಲಯ ಕಳೆದ ಮೇ 11 ರಂದು ಜಾಮೀನು ಮಂಜೂರು ಮಾಡಿತ್ತು. ಗಮನಾರ್ಹವೆಂದರೆ ಮತ್ತೊಂದು ಗಣಿ ಅಕ್ರಮ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿರುವ ಗಾಲಿ ರೆಡ್ಡಿಗೆ ಬಿಡುಗಡೆ ಭಾಗ್ಯ ಒದಗಿ ಬಂದಿರಲಿಲ್ಲ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಬೇಲ್ ನೀಡಿದ್ದ ನಾಂಪಲ್ಲಿ ಸಿಬಿಐ ನ್ಯಾಯಾಧೀಶ ರಾಮರಾವ್ ಅವರು 5 ಲಕ್ಷ ರೂಪಾಯಿ ಶ್ಯೂರಿಟಿ ಸಲ್ಲಿಸುವಂತೆ ಆದೇಶಿಸಿದ್ದರು. ಜತೆಗೆ, ದೇಶಬಿಟ್ಟು ಹೊರಗೆ ಹೋಗಬಾರದು ಎಂದೂ ಆದೇಶ ನೀಡಿದ್ದರು.












Click it and Unblock the Notifications