ಸಿದ್ದರಾಮಯ್ಯ ರಾಜೀನಾಮೆ ಅಂಗೀಕೃತವಾಗುತ್ತದೋ?

ಮೇಲ್ಮನೆಗೆ ತಾವು ಸೂಚಿಸಿದ ಅಭ್ಯರ್ಥಿಗಳಿಗೆ ಮಣೆಹಾಕಿಲ್ಲ ಎಂದು ಸಿದ್ದರಾಮಯ್ಯ ಅವರು ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಹೊರನಡೆದಿದ್ದು, ಇನ್ನು ಇಂದಿನ ಸಭೆಯೊಳಗೆ ಪ್ರವೇಶಿಸುವುದು ಅನುಮಾನದ ಸಂಗತಿ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಸೋನಿಯಾಗಾಂಧಿ ಅವರಿಗೆ ರಾಜೀನಾಮೆ ಕಳಿಸಿರುವ ಸಿದ್ದರಾಮಯ್ಯ ಅವರು ಪ್ರತಿಪಕ್ಷದ ನಾಯಕನ ಸ್ಥಾನವನ್ನೂ ತ್ಯಜಿಸಲು ಮುಂದಾಗಿದ್ದಾರೆ. ಇಂದು ಈ ರಾಜೀನಾಮೆ ಪತ್ರವನ್ನು ಸ್ಪೀಕರ್ ಗೆ ಕಳಿಸಲಿದ್ದಾರೆ.
ಈ ಎಲ್ಲ ಬೆಳವಣಿಗೆಗಳಿಂದ ಜೂನ್ 11 ರಂದು ವಿಧಾನ ಪರಿಷತ್ತಿನ 11 ಸ್ಥಾನಗಳಿಗೆ ನಡೆಯಲಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ನಾಮಪತ್ರ ಸಲ್ಲಿಸಲು ಇಂದು ಶುಕ್ರವಾರವೇ ಅಂತಿಮ ದಿನವಾಗಿದೆ. ಆದ್ದರಿಂದ ಸಿದ್ದರಾಮಯ್ಯ ಅವರು ತಮ್ಮ ಬೆಂಬಲಿಗರನ್ನು ಕಣಕ್ಕಿಳಿಸುವ ಬಗ್ಗೆ ತಕ್ಷಣ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಕಾಂಗ್ರೆಸ್ ಪಕ್ಷ ತಮ್ಮ ರಾಜೀನಾಮೆಯನ್ನು ಅಂಗೀಕರಿಸುತ್ತದೋ, ಬಿಡುತ್ತದೂ ಆದರೆ ತಮ್ಮ ಅಭ್ಯರ್ಥಿಗಳನ್ನಂತೂ ತಕ್ಷಣ ಅವರು ಕಣಕ್ಕಿಳಿಸುವ ಸಂದಿಗ್ಧತೆಗೆ ಸಿಲುಕಿದ್ದಾರೆ.
ಈ ಮಧ್ಯೆ ಇಬ್ಬರನ್ನು ಬಂಡಾಯ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎನ್ನಲಾಗಿದೆ. ತಮ್ಮ ಅಭ್ಯರ್ಥಿಗಳಿಗೆ ಗೆಲುವು ದಕ್ಕಿಸಿಕೊಡುವ ಸಂಬಂಧ ಅವರು ಇತರೆ ಪಕ್ಷಗಳ ಜತೆ ಮಾತುಕತೆ ನಡೆಸಿದ್ದು, ಲಿಖಿತ ರೂಪದಲ್ಲಿ ಬೆಂಬಲವನ್ನೂ ಯಾಚಿಸಿದ್ದಾರೆ. ಬಿಎಸ್ಆರ್ ಕಾಂಗ್ರೆಸ್ಸಿನ ಅಧಿನಾಯಕ ಶ್ರೀರಾಮುಲು ಈಗಾಗಲೇ ಸಿದ್ದರಾಮಯ್ಯಗೆ ಬೆಂಬಲ ಸೂಚಿಸಿದ್ದಾರೆ ಎನ್ನವುದು ಗಮನಾರ್ಹ.
ಈ ಮಧ್ಯೆ ಕಾಂಗ್ರೆಸ್ ಅಂತಿಮಗೊಳಿಸಿರುವ ಅಭ್ಯರ್ಥಿಗಳ ಪೈಕಿ ಒಂದಿಬ್ಬರ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲೇ ಅಪಸ್ವರ ಎದ್ದಿದೆ. ಹೀಗಾಗಿ, ಒಂದಷ್ಟು ಕಾಂಗ್ರೆಸ್ ಮತಗಳೂ ಸಿದ್ದರಾಮಯ್ಯನವರತ್ತ ಹರಿಯುವ ಸಾಧ್ಯತೆಯೂ ಇದೆ. ಜತೆಗೆ ಜೆಡಿಎಸ್ ಮತ್ತು ಸ್ವತಂತ್ರ ಅಭ್ಯರ್ಥಿಗಳು ಪರಿಸ್ಥಿತಿಯ ಲಾಭ ಪಡೆಯಲು ಮುಂದಾಗಿದ್ದು, ಸಿದ್ದರಾಮಯ್ಯನವರಿಗೆ ಷರತ್ತುರಹಿತ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಇದರಿಂದ ಸಿದ್ದರಾಮಯ್ಯ ಬಂಡಾಯ ಅಭ್ಯರ್ಥಿ ಭೈರತಿ ಸುರೇಶ್ ಸುಸೂತ್ರವಾಗಿ ಗೆಲ್ಲಲಿದ್ದಾರೆ ಎಂದು ವಿಶ್ಲೇಷಣೆಗಳೂ ಕೇಳಿಬರುತ್ತಿವೆ.
ಮಧುಸೂದನ್ ಮಿಸ್ರ್ತಿಬಳಿ ಅಂಗಾಲಾಚಿರಲಿಲ್ಲ: 'ನಾನೇನೂ ಅತ್ತುಕರೆದು ಆಮಂತ್ರಣ ತೆಗೆದುಕೊಂಡಿರಲಿಲ್ಲ. ನನಗೆ ಟಿಕೆಟ್ ನೀಡಿ ಎಂದು ಕಾಂಗ್ರೆಸ್ ನಾಯಕರನ್ನು ಬೇಡಿಕೊಂಡಿರಲಿಲ್ಲ. ಏನೂ ನನ್ನ ಆತ್ಮೀಯರಾದ ಸಿದ್ರಾಮಣ್ಣ ಅವರು ಮೇಲ್ಮನೆಗೆ ನನ್ನನ್ನು ಆರಿಸಿ, ಕಳಿಸಲು ಉತ್ಸುಕರಾಗಿದ್ದರು. ಆದರೆ ಕಾಂಗ್ರೆಸ್ ಪಾರ್ಟಿ ಈ ರೀತೀನಾ ಮಾಡೋದು, ನೋಡಿ ಈಗ ನಮ್ಮ ನಾಯಕ ಸಿದ್ರಾಮಣ್ಣ ಅವರೇ ರಾಜೀನಾಮೆ ಸಲ್ಲಿಸುವ ಪರಿಸ್ಥಿತಿ ನಿರ್ಮಾಣ ಮಾಡಿಬಿಟ್ಟಿದ್ದಾರೆ' ಎಂದು ಕಾಂಗ್ರೆಸ್ ಟಿಕೆಟ್ ವಂಚಿತ ಸಿಎಂ ಇಬ್ರಾಹಿಂ ಅವರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications