ಭಿನ್ನಮತ: ಸಿದ್ದರಾಮಯ್ಯ ಕಾಂಗ್ರೆಸ್ಸಿಗೆ ಗುಡ್ ಬೈ
ಬೆಂಗಳೂರು, ಜೂನ್1: ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ರಾಜ್ಯ ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ಅತೀವ ನೋವಿನೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲು ಗುರುವಾರ ರಾತ್ರಿ ನಿರ್ಧರಿಸಿದ್ದಾರೆ. ಇದರಿಂದ ಪಕ್ಷದಲ್ಲಿ ಮನೆಮಾಡಿದ್ದ ಭಿನ್ನಾಭಿಪ್ರಾಯಗಳು ಮತ್ತು ಭಿನ್ನಮತ ಮತ್ತೊಮ್ಮೆ ಬಯಲಿಗೆ ಬಿದ್ದಿದೆ.

ಈ ನಿರ್ಣಾಯಕ ಬೆಳವಣಿಗೆಗಳಿಗೆ ರಾಜ್ಯ ವಿಧಾನ ಪರಿಷತ್ ಚುನಾವಣೆ ಕಾರಣವಾಗಿದೆ. ತಮ್ಮ ಬೆಂಬಲಿಗರಾದ ಸಿ ಎಂ ಇಬ್ರಾಹಿಂ ಅವರ ಹೆಸರನ್ನು ಪರಿಗಣಿಸಲಿಲ್ಲ ಎಂದು ಸಿಟ್ಟಿಗೆದ್ದಿರುವ ಸಿದ್ದರಾಮಯ್ಯ ಅವರು ನಿನ್ನೆ ರಾತ್ರಿಯಿಂದ ತಮ್ಮ ಆಪ್ತ ಬೆಂಬಲಿಗರೊಂದಿಗೆ ಸರಣಿ ಸಭೆಗಳನ್ನು ನಡೆಸಿದ್ದು, ಅಂತಿಮವಾಗಿ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಗುರುವಾರ ಮಧ್ಯರಾತ್ರಿಯೇ ಸಿದ್ದರಾಮಯ್ಯ ಅವರು ತಮ್ಮರಾಜೀನಾಮೆ ಪತ್ರವನ್ನು AICC ಅಧ್ಯಕ್ಷೆ ಸೋನಿಯಾ ಗಾಂಧಿಗೆ ಫ್ಯಾಕ್ಸ್ ಮಾಡಿದ್ದಾರೆ. ಜತೆಗೆ ರಾಜ್ಯ KPCC ಮುಖಂಡರ ಧೋರಣೆಯಿಂದ ಬೇಸತ್ತು ವಿಧಾನಸಭೆ ಪ್ರತಿಪಕ್ಷದ ಸ್ಥಾನಕ್ಕೂ ಅವರು ರಾಜೀನಾಮೆ ನೀಡಿದ್ದಾರೆ.
ಮೇಲ್ಮನೆ ಚುನಾವಣೆಗಾಗಿ ಕಾಂಗ್ರೆಸ್ ವತಿಯಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಕಸರತ್ತು ನಡೆದಿತ್ತು. ಅಂತಿಮವಾಗಿ ನಿನ್ನೆ ಗುರುವಾರ ಪಕ್ಷವು ತನ್ನ ಅಭ್ಯರ್ಥಿಗಳ ಅಂತಿಮಪಟ್ಟಿಯನ್ನು ಪ್ರಕಟಿಸಿತು. ಆದರೆ ಅದರಲ್ಲಿ ಸಿದ್ದರಾಮಯ್ಯ ಅವರು ಸೂಚಿಸಿದ್ದ ಅಭ್ಯರ್ಥಿಗಳ ಪೈಕಿ ಒಬ್ಬರ ಹೆಸರೂ ಕಾಣಿಸಿಕೊಂಡಿರಲಿಲ್ಲ. ಇದು ಸಿದ್ದರಾಮಯ್ಯ ಅವರನ್ನು ರೊಚ್ಚಿಗೆಬ್ಬಿಸಿದೆ.
ಮೊನ್ನೆಯಷ್ಟೇ ತಮ್ಮ ಆಪ್ತೇಷ್ಟ ಇಬ್ರಾಹಿಂ ಅವರ ಜತೆಗೂಡಿ ಅಜ್ಮೀರ್ ದರ್ಗಾಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದ ಸಿದ್ದರಾಮಯ್ಯ ಅವರು ನಂತರ ದೆಹಲಿಗೂ ತೆರಳಿ, ಪಕ್ಷದಲ್ಲಿ ತಮ್ಮ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಲು ಕಸರತ್ತು ನಡೆಸಿದ್ದರು. ಆದರೆ ಅದೆಲ್ಲ ಈಗ ವ್ಯರ್ಥವಾಗಿದೆ.
ಮೇಲ್ಮನೆ ಚುನಾವಣೆಗಾಗಿ ತಮ್ಮ ಬೆಂಬಲಿಗರನ್ನು ಕಡೆಗಣಿಸಿದ್ದಾರೆ ಎಂಬ ನೋವಿನ ಜತೆಗೆ ಮುಂದೆ ಯಾವುದೇ ಕ್ಷಣದಲ್ಲಿ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಗಲೂ ತಮ್ಮ ಬೆಂಲಿಗರಿಗೆ ಕಾಂಗ್ರೆಸ್ ಮಣೆ ಹಾಕದಿದ್ದರೆ ಗತಿಯೇನು ಎಂಬುದು ಸಿದ್ದರಾಮಯ್ಯನವರನ್ನು ತೀವ್ರವಾಗಿ ಭಾದಿಸಿದೆ ಎನ್ನಲಾಗಿದೆ.
ಅದರಲ್ಲೂ ರಾಜ್ಯ KPCCಯಲ್ಲಿ ತಮ್ಮ ತುಳಿಯುವ ಕೆಲಸಗಳು ಅಂದಿನಿಂದಲೂ ನಡೆಯುತ್ತಾ ಬಂದಿದೆ. ಇದೀಗ ಅದು ನಿರ್ಣಾಯಕ ಹಂತಕ್ಕೆ ತಲುಪಿದೆ. ಇನ್ನು ಪಕ್ಷದಲ್ಲಿ ತಮಗೆ ಉಳಿಗಾಲವಿಲ್ಲ ಎಂದು ಭಾವಿಸಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ನಿರ್ಧಾರಕ್ಕೆ ಬಂದಿದ್ದಾರೆ.
ಇತ್ತ ಆಡಳಿತಾರೂಢ ಬಿಜೆಪಿಯಲ್ಲಿ ಅಂತಃಕಲಹ ಎಂಬುದು ಮೇರೆ ಮೀರಿತ್ತು. ಆದರೆ ಮೇಲ್ಮನೆ ಚುನಾವಣೆ ಸಂದರ್ಭದಲ್ಲಿ ಎಲ್ಲವೂ ರಾಜೀಸೂತ್ರವಾಗಿ ಭಿನ್ನಮತ ನಿಯಂತ್ರಣಕ್ಕೆ ಬಂದಿತ್ತು. ಅದರಲ್ಲೂ ಕಳೆದ 9 ತಿಂಗಳಿಂದ ಭಿನ್ನಮತ ಬಾವುಟ ಬೀಸುತ್ತಲೇ ಬಂದಿರುವ ಯಡಿಯೂರಪ್ಪ ಅವರು ತಮ್ಮ ಬೆಂಬಲಿಗರಿಗೆ ಪಕ್ಷದ ಟಿಕೆಟ್ ಸಿಗುತ್ತಿದ್ದಂತೆ ಗಪ್ ಚುಪ್ ಆಗಿದ್ದಾರೆ.
ಆದರೆ ಇಂತಹ ವೇಳೆಯಲ್ಲಿ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟಗೊಂಡಿರುವುದು ಕುತೂಹಲಕಾರಿಯಾಗಿದೆ. ಹಾಗೆ ನೋಡಿದರೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಹೊಸದೇನೂ ಅಲ್ಲ. ಆದರೆ ವಿಧಾನಸಭೆ ಚುನಾವಣೆಗೆ ಮುನ್ನ ಎದ್ದಿರುವ ಬಿರುಗಾಳಿಯನ್ನು ಕಾಂಗ್ರೆಸ್ ಪಕ್ಷ ಹೇಗೆ ನಿಭಾಯಿಸುತ್ತದೆ ಎಂಬುದು ಕುತೂಹಲಕಾರಿಯಾಗಿದೆ.











Click it and Unblock the Notifications