ಬಿಜೆಪಿ ಶಾಸಕ ನಂದೀಶ್ ರೆಡ್ಡಿ ಶಾಸಕತ್ವ ಅಸಿಂಧು

ನ್ಯಾ ಶೈಲೇಂದ್ರ ಕುಮಾರ್ ಅವರಿದ್ದ ಏಕ ಸದಸ್ಯ ಪೀಠ ಆದೇಶ ಈ ಮಹತ್ವದ ಆದೇಶ ನೀಡಿದ್ದು, ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ಮುಜುಗರ ಉಂಟು ಮಾಡಿದೆ.
2008ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕವಿತಾ ಮಹೇಶ್ ಸ್ಪರ್ಧಿಸಿದ್ದ ರು. ಆದರೆ, ಕವಿತಾ ಮಹೇಶ್ ಅವರ ನಾಮಪತ್ರ ತಿರಸ್ಕಾರವಾಗಿತ್ತು.
ನಾಮಪತ್ರ ತಿರಸ್ಕರಿಸಿದ ಚುನಾವಣಾಧಿಕಾರಿ ಅಶೋಕ್ ಅವರ ಕ್ರಮವನ್ನು ಪ್ರಶ್ನಿಸಿ ಮುಖ್ಯ ಚುನಾವಣಾಧಿಕಾರಿಗಳಿಗೆ ಕವಿತಾ ಪತ್ರ ಬರೆದಿದ್ದರು. ಆದರೆ, ಚುನಾವಣಾಧಿಕಾರಿಗಳಿಂದ ಉತ್ತರ ಬರಲಿಲ್ಲ. ನಂತರ ಕವಿತಾ ಹೈಕೋರ್ಟ್ ಮೇಟ್ಟಿಲೇರಿದ್ದರು.
ಕವಿತಾ ಅವರು ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟಿನ ಏಕಸದಸ್ಯ ಪೀಠ ಮೇಲ್ಕಂಡ ಆದೇಶವನ್ನು ಹೊರಡಿಸಿದೆ.
ಆದರೆ ಚುನಾವಣಾಧಿಕಾರಿಗಳು ಬಿಜೆಪಿ ಅಭ್ಯರ್ಥಿಯಾಗಿದ್ದ ನಂದೀಶ್ ರೆಡ್ಡಿಯವರ ಪ್ರಭಾವಕ್ಕೊಳಗಾಗಿ ನಾಮಪತ್ರವನ್ನು ಸಕಾರಣವಿಲ್ಲದೆ ತಿರಸ್ಕರಿಸಿರುವುದು ಕಂಡು ಬಂದಿದೆ.
ಅಧಿಕಾರಿಯ ನಿರ್ಲಕ್ಷದಿಂದ ಅಭ್ಯರ್ಥಿಯ ಭವಿಷ್ಯ ಕತ್ತಲೆಯಾಗಿದೆ. ಚುನಾವಣಾಧಿಕಾರಿ ಅಶೋಕ್ ವಿರುದ್ಧ ಕ್ರಮ ಜರುಗಿಸುವಂತೆ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶ ನೀಡಿದೆ.
ಮರು ಚುನಾವಣೆ ಸಾಧ್ಯವೇ: ಕೆಆರ್ ಪುರಂ ವಿಧಾನಸಭಾ ಕ್ಷೇತ್ರದ ಶಾಸಕ ನಂದೀಶ್ ರೆಡ್ಡಿ ಎನ್ ಎಸ್ ಅವರ ಶಾಸಕತ್ವ ಅಸಿಂಧುಗೊಂಡಿರುವುದರಿಂದ ಮುಂದಿನ ಆರು ತಿಂಗಳೊಳಗೆ ಮರು ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆದೇಶಿಸಿದೆ.
ಸರ್ಕಾರದ ಅವಧಿ ಒಂದು ವರ್ಷ ಮಾತ್ರ ಇರುವುದರಿಂದ ಮತ್ತೊಮ್ಮೆ ವಿಧಾನಸಭೆ ಚುನಾವಣೆ ನಡೆಸುವ ಸಾಧ್ಯತೆ ಇದೆಯೇ? ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆಯೇ? ಕಾದು ನೋಡಬೇಕಿದೆ.
ಏಕೆ ಈ ಗೊಂದಲ: ವರ್ತೂರು ವಿಧಾನಸಭೆ ವಿಂಗಡಣೆಯಾಗಿ ಮಹದೇವಪುರ, ಸಿವಿ ರಾಮನ್ ನಗರ ಹಾಗೂ ಕೆಆರ್ ಪುರಂ ಕ್ಷೇತ್ರವಾಗಿ ರೂಪುಗೊಂಡಿತ್ತು. ಕವಿತಾ ಮಹೇಶ್ ಅವರ ಹೆಸರು ಸಿವಿ ರಾಮನ್ ನಗರ ಕ್ಷೇತ್ರದ ಪಟ್ಟಿಯಲ್ಲಿತ್ತು. ಕೆಆರ್ ಪುರಂ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದ ಕವಿತಾ ಅವರು 19ನೇ ಏಪ್ರಿಲ್, 2008ರಲ್ಲಿ ಚುನಾವಣಾಧಿಕಾರಿಗಳಿಂದ ನಾಮಪತ್ರ ಅರ್ಜಿ ಪಡೆದಿದ್ದರು.
ಕೆಆರ್ ಪುರಂ ಅಸೆಂಬ್ಲಿ ಕ್ಷೇತ್ರದ ಕ್ರಮ ಸಂಖ್ಯೆ, ವಿಭಾಗ ಸಂಖ್ಯೆ ನೀಡುವಂತೆ ರಿಟರ್ನ್ ಅಧಿಕಾರಿಗೆ ಮನವಿ ಪತ್ರ ಜೊತೆಗೆ ನಾಮಪತ್ರವನ್ನು ಕವಿತಾ ಲಗತ್ತಿಸಿ, ಏಪ್ರಿಲ್ 23, 2008ರ ಮಧ್ಯಾಹ್ನ 2 ಗಂಟೆಗೆ ಸಲ್ಲಿಸಿದರು. ಕೆಆರ್ ಪುರಂನ ಮತದಾರರ ವಿವರಗಳನ್ನು ಪಡೆದು ನಾಮಪತ್ರದ ಅರ್ಜಿಗೆ ಸಹಿ ಹಾಕಿದವರ ವಿವರಗಳನ್ನು ಅಧಿಕೃತಗೊಳಿಸಬೇಕಾಗಿತ್ತು.
ಆದರೆ, ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಅಶೋಕ್ ಅವರು ವಿವರಗಳನ್ನು ನೀಡದೆ ಕಂದಾಯ ಕಚೇರಿಗೆ ಹೋಗಿ ದಾಖಲೆಗಳನ್ನು ಪಡೆಯುವಂತೆ ಸೂಚಿಸಿದರು. ಕಂದಾಯ ಅಧಿಕಾರಿಗಳಿಂದ ಯಾವುದೇ ಸಮರ್ಪಕ ಮಾಹಿತಿ ದೊರೆಯದ ಕಾರಣ, ಮತ್ತೊಮ್ಮೆ ನಾಮಪತ್ರ ಸಲ್ಲಿಸಲು ಕವಿತಾ ಯತ್ನಿಸಿದರು.
ಆದರೆ, ಕವಿತಾ ಅವರ ನಾಮಪತ್ರವನ್ನು ಪಡೆಯಲು ಚುನಾವಣಾಧಿಕಾರಿಗಳು ಸ್ವೀಕರಿಸಲಿಲ್ಲ. 27 ಏಪ್ರಿಲ್ 2008 ರಂದು ಮುಖ್ಯ ಚುನಾವಣಾಧಿಕಾರಿಗಳಿಗೆ ಕವಿತಾ ಅವರು ತಮ್ಮ ಸಮಸ್ಯೆ ಬಗ್ಗೆ ವಿವರಿಸಿ ಪತ್ರ ಬರೆದಿದ್ದಾರೆ.
ಮೇ 10, 2008ರಂದು ಚುನಾವಣೆ ನಡೆದು, ಮೇ,27, 2008ರಂದು ಫಲಿತಾಂಶ ಹೊರಬಿದ್ದಿತ್ತು. ನಂದೀಶ್ ರೆಡ್ಡಿ ಜಯಭೇರಿ ಬಾರಿಸಿದ್ದರು. ನಂದೀಶ್ ರೆಡ್ಡಿ ಆಯ್ಕೆ ಪ್ರಶ್ನಿಸಿ ಶಾಸಕತ್ವ ಅಸಿಂಧುಗೊಳಿಸುವಂತೆ ಕವಿತಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಶುಕ್ರವಾರ(ಜೂ.1) ಕವಿತಾ ಅರ್ಜಿ ಎತ್ತಿ ಹಿಡಿದು ನಂದೀಶ್ ರೆಡ್ಡಿ ಅವರ ಶಾಸಕತ್ವ ರದ್ದುಗೊಳಿಸಿ ಆದೇಶ ನೀಡಿದೆ.












Click it and Unblock the Notifications