ಸಿಸಿಬಿ ಕ್ರೈಂ ಬ್ರಾಂಚ್ ಕೈಗೆ ಮಹಾಂತೇಶ್ ಕೇಸ್

ಎಸಿಪಿ ಗುಳೇದ್ ನೇತೃತ್ವದ ಸಿಸಿಬಿ ಕ್ರೈಂ ಬ್ರ್ಯಾಂಚ್ ತಂಡಕ್ಕೆ ಮಹಾಂತೇಶ್ ಪ್ರಕರಣವನ್ನು ಒಪ್ಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ದಾಖಲೆಗಳನ್ನು ತಂಡಕ್ಕೆ ನೀಡಲಾಗಿದೆ ಎಂದು ಜ್ಯೋತಿ ಪ್ರಕಾಶ್ ಮಿರ್ಜಿ ಹೇಳಿದರು.
ಆದರೆ, ಸಿಸಿಬಿ ಅಪರಾಧ ವಿಭಾಗದ ಪೊಲೀಸರಿಗೆ ಈ ಪ್ರಕರಣ ಬಗ್ಗೆ ಅಗತ್ಯ ಮಾಹಿತಿ, ಅಧಿಕಾರ ನೀಡಲಾಗಿದ್ದರೂ, ತನಿಖಾವಧಿಯನ್ನು ನಿಗದಿ ಮಾಡದಿರುವುದು ಕುತೂಹಲ ಕೆರಳಿಸಿದೆ. ಸಾಮಾನ್ಯವಾಗಿ ಈ ರೀತಿಯ ಪ್ರಮುಖ ಕೊಲೆ ಪ್ರಕರಣಗಳಲ್ಲಿ ತನಿಖೆ ಇಂತಿಷ್ಟು ಅವಧಿಯಲ್ಲಿ ಪೂರೈಸುವ ಕಾಲಾವಧಿಯನ್ನು ಹಾಕಿಕೊಳ್ಳಲಾಗುತ್ತದೆ. ಆದರೆ, ಮಹಾಂತೇಶ್ ಪ್ರಕರಣಕ್ಕೆ ಕಾಲಾವಧಿ ನಿಗದಿಪಡಿಸಿಲ್ಲ.
ಈವರೆಗಿನ ತನಿಖೆ ವಿವರ: ತನಿಖಾಧಿಕಾರಿ ಡಿಸಿಪಿ ರವಿಕಾಂತೇ ಗೌಡರು ಅವರು ಕುಶಾಲನಗರದ ಯುವತಿಯನ್ನು ವಿಚಾರಣೆ ನಡೆಸಿದ ಮೇಲೆ ಪ್ರಕರಣದ ನಿಗೂಢತೆ ಇನ್ನಷ್ಟು ಹೆಚ್ಚಾಗಿತ್ತು. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಕಾಲ್ ಗರ್ಲ್ ಹಾಗೂ ಚೆನ್ನೈ ಮೂಲದ ಯುವಕನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗಿತ್ತು
ಮಹಾಂತೇಶ್ ಅವರ ಸಾವಿಗೆ ಪ್ರಾಮಾಣಿಕತೆಗಿಂತ ಪರಸ್ತ್ರೀ ಸಹವಾಸವೇ ಕಾರಣ ಎಂದು ಸದ್ಯಕ್ಕೆ ಅನುಮಾನ ಹುಟ್ಟಿಕೊಂಡಿತ್ತು. ಮಹಾಂತೇಶ್ ಅವರ ಮೊಬೈಲ್ ಹಾಗೂ ಈಗ ಸೆರೆ ಸಿಕ್ಕಿರುವ ಕಾಲ್ ಗರ್ಲ್ 2 ಮೊಬೈಲ್ ಫೋನ್ ಪರಿಶೀಲಿಸಿದಾಗ ಇಬ್ಬರ ನಡುವೆ ಆಪ್ತ ಸಂಬಂಧ ಇರುವುದು ಸ್ಪಷ್ಟವಾಗಿತ್ತು. 4 ತಿಂಗಳಿನಿಂದ 154 ನಿಮಿಷಗಳ ಮಾತುಕತೆ ನಡೆದಿರುವುದು ತಿಳಿದು ಬಂದಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದರು.
ಮಹಾಂತೇಶ್ ಮೊಬೈಲ್ ನಲ್ಲಿ ನೀಲಿಚಿತ್ರಗಳು, ಅಶ್ಲೀಲ ಚಿತ್ರಗಳು ಹೇರಳವಾಗಿ ಸಿಕ್ಕಿತ್ತು. ಜೊತೆಗೆ ಹಲವು ಕಾಲ್ ಗರ್ಲ್(ಬೆಲೆವೆಣ್ಣು)ಗಳ ನಂಬರ್ ಗಳು ಕಾಣಿಸಿತ್ತು. ಮಹಾಂತೇಶ್ ಅವರ ಸಂಪರ್ಕ ಚೆನ್ನೈ, ಕೇರಳ, ಕುಶಾಲನಗರ ಅಲ್ಲದೆ ಇನ್ನೂ ಅನೇಕ ಕಡೆ ಇರುವ ಶಂಕೆ ಮೂಡಿದೆ.
ಯಾರು ಆ ಎಸಿಪಿ?: ಮಹಾಂತೇಶ್ ಅವರ ಕೊಲೆ ಪ್ರಕರಣದ ತನಿಖಾ ತಂಡದಲ್ಲೇ ಇರುವ ಎಸಿಪಿಯೊಬ್ಬರ ಮೊಬೈಲ್ ಫೋನ್ ನಂಬರ್ ಕಾಲ್ ಗರ್ಲ್ ಮೊಬೈಲಿನಲ್ಲಿರುವುದು ಪತ್ತೆಯಾಗಿದೆ. ಎಸಿಪಿ ಅವರ ಹೆಸರು ಎಸ್ ಅಕ್ಷರದಿಂದ ಆರಂಭವಾಗುತ್ತದೆ ಎಂಬ ಸುಳಿವು ಕೆಲ ಮಾಧ್ಯಮಗಳಿಗೆ ಸಿಕ್ಕಿದೆಯಾದರೂ ಯಾರು ಅವರ ಹೆಸರು ಬಹಿರಂಗಪಡಿಸುವ ಗೋಜಿಗೆ ಹೋಗಿಲ್ಲ.
ಮಹಾಂತೇಶ್ ಸತ್ತಿದ್ದು ಅಪಘಾತದಿಂದ, ಕೊಲೆ ನಡೆದಿಲ್ಲ ಎಂದು ಇದೇ ಅಧಿಕಾರಿ ಮತ್ತೆ ಮತ್ತೆ ಹೇಳುತ್ತಿದ್ದರು ಎಂದು ಮಹಾಂತೇಶ್ ಕುಟುಂಬ ವರ್ಗ ದೂರಿದೆ. ಆದರೆ, ಎಸಿಪಿ ಯಾರು ಎಂದು ಈವರೆಗೂ ಯಾರಿಗೂ ತಿಳಿಯುತ್ತಿಲ್ಲ.
ನಗರ ಪೊಲೀಸ್ ಆಯುಕ್ತ ಜ್ಯೋತಿ ಪ್ರಕಾಶ್ ಮಿರ್ಜಿ ಅವರು ಮಾತ್ರ ಎಸಿಪಿ ಹೆಸರು ಹೇಳದೆ ನುಣಚಿಕೊಂಡಿದ್ದಾರೆ. 100ಕ್ಕೂ ಅಧಿಕ ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ. ಸತ್ಯ ಸದ್ಯದಲ್ಲೇ ಹೊರಬೀಳಲಿದೆ ಎಂದು ಹೇಳಿದ್ದಾರೆ. ಕೋರ್ಟ್ ನೀಡಿರುವ ನೋಟಿಸ್ ಬಗ್ಗೆ ಕೂಡಾ ಮಿರ್ಜಿ ಅವರು ಪ್ರತಿಕ್ರಿಯಿಸಿಲ್ಲ.












Click it and Unblock the Notifications