ನಿಪ್ಪಾಣಿ ಬಳಿ ಅಪಘಾತ 10 ಜನ ದಾರುಣ ಸಾವು

ಬೆಳಗಾವಿ ಜಿಲ್ಲೆ ನಿಪ್ಪಾಣಿ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಘಟಿಸಿದ ಈ ದುರ್ಘಟನೆಯಿಂದ ಕೆಲ ಗಂಟೆಗಳ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಪ್ರತ್ಯಕ್ಷದರ್ಶಿಗಳ ಪ್ರಕಾರ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಿನ ಮುಂಬದಿಯ ಚಕ್ರವೊಂದು ಸ್ಫೋಟಗೊಂಡ ಪರಿಣಾಮ, ಕಾರು ನಿಯಂತ್ರಣ ಕಳೆದುಕೊಂಡಿತು. ಎದುರುಗಡೆ ಬರುತ್ತಿದ್ದ ಟ್ಯಾಂಕರ್ ವಾಹನಕ್ಕೆ ಡಿಕ್ಕಿ ಹೊಡೆದು ಮೂರ್ನಾಲ್ಕು ಪಲ್ಟಿ ಹೊಡೆದು ಬಿದ್ದುಬಿಟ್ಟಿತು.
ಮೃತರಲ್ಲಿ ಐವರು ಪುರುಷರು, ನಾಲ್ವರು ಮಹಿಳೆಯರು ಒಂದು ಐದು ವರ್ಷದ ಮಗು ಇತ್ತು. ಅಪಘಾತದಲ್ಲಿ ಬದುಕುಳಿದಿರುವ ಏಕೈಕ ಮಹಿಳೆಯನ್ನು ಕೋಲ್ಹಾಪುರದ ಆಸ್ಪತ್ರೆಗೆ ಸೇರಿಸಿ, ಚಿಕಿತ್ಸೆ ನೀಡಲಾಗುತ್ತಿದೆ.
ಮೃತರನ್ನು ಆನಂದ್ ಪರ್ವತಿಕಾರ್(52), ಅಂಜನಾ(46), ಶೋಭಾ(75), ಜಯಶ್ರೀ ಪದಸಲಗಿ(55) ಹಾಗೂ ಲಕ್ಷ್ಮಿ ನವರತ್ನ(53) ಎಂದು ಗುರುತಿಸಲಾಗಿದೆ. ಶೋಭಾ ಅವರಿಗೆ ನಿಪ್ಪಾಣಿಯ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಶಿರಡಿ ಸಾಯಿಬಾಬಾ ದೇಗುಲ, ಕೋಲ್ಹಾಪುರದ ಮಹಾಲಕ್ಷ್ಮಿ ದೇಗುಲ ದರ್ಶನ ಮಾಡಿ ಹುಬ್ಬಳ್ಳಿಗೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ದುರ್ದೈವಿಗಳು ಇದ್ದ ಇನ್ನೋವಾ ಕಾರಿಗೆ ಸರಕು ವಾಹನವೊಂದು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇನ್ನೋವಾ ಕಾರಿನಲ್ಲಿದ್ದ 9 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೊಬ್ಬರು ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ. ಬದುಕುಳಿದ ಮಹಿಳೆ ಪರಿಸ್ಥಿತಿ ಕೂಡಾ ಗಂಭೀರವಾಗಿದೆ ಎಂದು ನಿಪ್ಪಾಣಿ ಪೊಲೀಸರು ಹೇಳಿದ್ದಾರೆ












Click it and Unblock the Notifications