ಅಂಬರೀಷ್ ರಾಜಕೀಯ ಜೀವನದ ಏಳುಬೀಳುಗಳು

ರಾಜಕೀಯ ಜೀವನದಲ್ಲಿ ಅವರು ಉತ್ತುಂಗಕ್ಕೆ ಏರಿದ ಸಂದರ್ಭವೆಂದರೆ ಅಕ್ಟೋಬರ್ 2006 ರಿಂದ ಫೆಬ್ರವರಿ 2007ರ ವರೆಗೆ ಮನಮೋಹನ್ ಸಿಂಗ್ ಸಚಿವ ಸಂಪುಟದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರಾಗಿದ್ದು.
ಸಿನಿಮಾರಂಗದಲ್ಲಿ ಬಹಳಷ್ಟು ಜನಪ್ರಿಯತೆ ಗಳಿಸಿದ್ದರೂ ರಾಜಕೀಯ ಕ್ಷೇತ್ರಕ್ಕೆ ಧುಮುಕಿದಾಕ್ಷಣ ಗೆಲುವು ಅವರಿಗೆ ಒಲಿಯಲಿಲ್ಲ. ತನ್ನ ಪ್ರಥಮ ಪ್ರಯತ್ನದಲ್ಲೇ ಸೋಲಿನ ಅನುಭವ ಅಂಬರೀಶ್ ಪಡೆಯಬೇಕಾಯಿತು. 1996ರಲ್ಲಿ ನಡೆದ ರಾಮನಗರ ವಿಧಾನಸಭಾ ಚುನಾವಣೆಯ ಮರುಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಂಬರೀಶ್ ಕಾಂಗ್ರೆಸ್ ಹುರಿಯಾಳು ಸಿ ಎಂ ಲಿಂಗಪ್ಪ ವಿರುದ್ದ ಸೋಲು ಅನುಭವಿಸಿದರು. ಈ ಮೂಲಕ 1994ರ ಚುನಾವಣೆಯಲ್ಲಿನ ಸೋಲಿಗೆ ಕಾಂಗ್ರೆಸ್ ಭರ್ಜರಿ ತಿರುಗೇಟು ನೀಡಿತ್ತು.
1994ರಲ್ಲಿ ಅಂದಿನ ಪ್ರಧಾನಿ ಪಿ ವಿ ನರಸಿಂಹ ರಾವ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಂಬಿ ಸೇರಿದ್ದರು. ಆದರೆ ದೇವೇಗೌಡ ರಾಜ್ಯದ ಮುಖ್ಯಮಂತ್ರಿ ಆದಮೇಲೆ ಜಾತಿ ಲೆಕ್ಕಾಚಾರ ಒಂದು ರೀತಿಯಲ್ಲಿ ವರ್ಕ್ ಔಟ್ ಆಗಿ ಅಂಬರೀಶ್ ಜೆಡಿಎಸ್ ಸೇರಿದ್ದರು. ರಾಮನಗರ ಚುನಾವಣೆಯಲ್ಲಿ ಸೋತರೂ ದೇವೇಗೌಡ ಅಂಬಿ ಮೇಲೆ ಮತ್ತೆ ಭರವಸೆ ಇಟ್ಟು 1998ರ ಲೋಕಸಭಾ ಚುನಾವಣೆಗೆ ಜೆಡಿಎಸ್ ಟಿಕೆಟ್ ನೀಡಿದರು.
ಸಿನಿಮಾರಂಗದ ಜನಪ್ರಿಯತೆ, ಹುಟ್ಟೂರಿನ ಜನರ ಬೆಂಬಲ, ಜಾತಿವಾರು ಲೆಕ್ಕಾಚಾರ ಎಲ್ಲಾ ಅಂಬರೀಶ್ ಪರವಾಗಿ ಮಂಡ್ಯದ ಜನತೆ ಅಂಬರೀಶ್ ಅವರನ್ನು ಪಾರ್ಲಿಮೆಂಟ್ ಗೆ ಆರಿಸಿ ಕಳುಹಿಸಿದರು. ಆದರೆ 12ನೇ ಲೋಕಸಭೆ ಬಹುಬೇಗ ವಿಸರ್ಜನೆಯಾಗಿ 1999ರಲ್ಲಿ ಮತ್ತೊಂದು ಲೋಕಸಭಾ ಚುನಾವಣೆ ಎದುರಾಯಿತು.
ಈ ಮಧ್ಯೆ ಅದೇನಾಯಿತೋ ತಿಳಿಯದು, ದೇವೇಗೌಡರ ಮೇಲಿದ್ದ ಅಖಂಡ ನಿಷ್ಠೆಯನ್ನು ಕಾಂಗ್ರೆಸ್ ಪಕ್ಷಕ್ಕೆ ವರ್ಗಾಯಿಸಿದ ಅಂಬರೀಶ್ ಕಾಂಗ್ರೆಸ್ ಟಿಕೆಟ್ ನಿಂದ ಮತ್ತೆ ಮಂಡ್ಯ ಚುನಾವಣೆಗೆ ನಿಂತರು ಮತ್ತು ಗೆದ್ದರು. ಆಗ ಅಲ್ಲಿ ಅವರ ವೈಯಕ್ತಿಕ ವರ್ಚಸ್ಸು ಗೆದ್ದಿತೇ ಹೊರತು ಪಕ್ಷ ನಗಣ್ಯವಾಯಿತು ಎನ್ನುವುದು ಗಮನಾರ್ಹ.
ಒಕ್ಕಲಿಗ ಸಮುದಾಯದ ಜನತೆಗೆ ಮೈಸೂರು ಪ್ರಾಂತ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಮರ್ಥ ನಾಯಕರಿಲ್ಲ ಎನ್ನುವ ಕೊರತೆಗೆ ಕಾಂಗ್ರೆಸ್ ಪಕ್ಷಕ್ಕೆ ತುರ್ತಾಗಿ ಸ್ಪಂಧಿಸುವ ಅನಿವಾರ್ಯತೆ ಇತ್ತು. 2004ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್ ಪಕ್ಷದ ಟಿಕೆಟ್ ನಿಂದ ಗೆದ್ದು ಅಂಬಿ ಮಂಡ್ಯ ಕ್ಷೇತ್ರವನ್ನು ಪ್ರತಿನಿಧಿಸಿದರು. ಸ್ವಲ್ಪ ಮಟ್ಟಿಗೆ ಈ ಭಾಗದಲ್ಲಿ ಜೆಡಿಎಸ್ ಪ್ರಾಬಲ್ಯವನ್ನು ಮೆಟ್ಟಿ ನಿಲ್ಲುವಲ್ಲಿ ಅಂಬರೀಶ್ ಯಶಸ್ಸು ಕಂಡರೂ ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಪಕ್ಷ ನೆಲಕಚ್ಚಿತು.
ಕಾಂಗ್ರೆಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಜೆಡಿಎಸ್ ಪ್ರಾಬಲ್ಯವನ್ನು ಮೆಟ್ಟಿನಿಲ್ಲುವುದು ಕಷ್ಟವೆಂದರಿತ ಅಂಬರೀಶ್, ಮೇಡಂ ಸೋನಿಯಾ ಗಾಂಧಿಯವರನ್ನು ಭೇಟಿ ಮಾಡಿ ಒಕ್ಕಲಿಗ ಸಮುದಾಯಕ್ಕೆ ಕೇಂದ್ರ ಕ್ಯಾಬಿನೆಟ್ ನಲ್ಲಿ ಸೂಕ್ತವಾದ ಸ್ಥಾನಮಾನ ನೀಡಿಲ್ಲ ಎಂದು ಮನವರಿಕೆ ಮಾಡುವಲ್ಲಿ ಯಶಸ್ವಿಯಾದರು.
ಅಲ್ಲದೆ ಹತ್ತು ವರ್ಷಗಳ ಬಳಿಕ ತನ್ಮೂಲಕ ಒಕ್ಕಲಿಗ ಸಮುದಾಯದ ನಾಯಕರೊಬ್ಬರು ಕೇಂದ್ರದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಈ ಹಿಂದೆ ಎಂ ವಿ ಚಂದ್ರಶೇಖರ್ ಮೂರ್ತಿ, ನರಸಿಂಹ ರಾವ್ ಕ್ಯಾಬಿನೆಟ್ ನಲ್ಲಿ ಸಚಿವರಾಗಿದ್ದರು.
ಜೀವನದಿ ಕಾವೇರಿ ನದಿ ವಿವಾದ ತಾರಕಕ್ಕೇರಿದ್ದ ಸಮಯದಲ್ಲಿ ರಾಜ್ಯದ ಜನತೆಯ ಭಾವನೆಗಳಿಗೆ ಸ್ಪಂಧಿಸುವ ಸಲುವಾಗಿ 15 ಫೆಬ್ರವರಿ 2007ರಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಸ್ಥಾನಕ್ಕೆ ಅಂಬರೀಶ್ ರಾಜೀನಾಮೆ ನೀಡಿದರು. ಅಲ್ಲಿಂದ ಪಕ್ಷದ ಸಾಮಾನ್ಯ ಕಾರ್ಯಕರ್ತನ ರೂಪದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೂ ತನ್ನ ಮೂಲ ಸಿನಿಮಾ ವೃತ್ತಿ ಜೀವನಕ್ಕೆ ಹೆಚ್ಚಿನ ಸಮಯ ಮೀಸಲಿಟ್ಟರು. ಕೆಲ ತಿಂಗಳ ಹಿಂದೆಯಷ್ಟೇ ಕೆಪಿಸಿಸಿ ಉಪಾಧ್ಯಕ್ಷ ಹುದ್ದೆಗೆ ಅಂಬರೀಶ್ ಅವರನ್ನು ನೇಮಿಸಲಾಗಿದೆ ಕೂಡಾ.
ಎಲ್ಲರ ಜೊತೆ ಪ್ರೀತಿಯಿಂದ ನಡೆದುಕೊಳ್ಳುವ, ಬಡವರ ಪಾಲಿಗೆ ಕರ್ಣ, ಕನ್ನಡಚಿತ್ರರಂಗದ ಪಾಲಿಗೆ trouble shooter ಆಗಿರುವ ಅರುವತ್ತರ ಸಂಭ್ರಮದಲ್ಲಿರುವ ಅಂಬರೀಶ್ ಭಿನ್ನಾಭಿಪ್ರಾಯಗಳಿಂದಾಗಿ ಒಡೆದ ಮನೆಯಾಗಿರುವ ಕಾಂಗ್ರೆಸ್ ಪಾಳಯಕ್ಕೆ ನವ ಚೈತನ್ಯ ತುಂಬುವುದು ಯಾವಾಗ?












Click it and Unblock the Notifications