ಸಂಸದ ಜಗನ್ ಗೆ 14 ದಿನಗಳ ನ್ಯಾಯಾಂಗ ಬಂಧನ

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ಕೋರ್ಟ್ ತಳ್ಳಿಹಾಕಿದೆ. ಆರೋಪಿ ನಂಬರ್ ಒನ್ ಜಗನ್ ರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಗನ್ ಮೋಹನ್ ರೆಡ್ಡಿ ಜೂನ್.11ರ ತನಕ ಹೈದರಾಬಾದಿನ ಚಂಚಲಗೂಡ ಜೈಲಿನಲ್ಲಿ ಕಾಲ ಕಳೆಯಬೇಕಿದೆ.
ನ್ಯಾಯಾಲಯದಲ್ಲಿ ಮೊದಲು ವಾದ ಮಂಡಿಸಿದ ಸಿಬಿಐ ವಕೀಲ ಅಶೋಕ್ ಭಾನ್ ಅವರು 'ಜಗನ್ ಸಿಬಿಐ ವಿಚಾರಣೆಗೆ ಏನೇನೂ ಸಹಕರಿಸುತ್ತಿಲ್ಲ. ಅಕ್ರಮ ಆಸ್ತಿಯ ಪ್ರಮಾಣ ಅಗಾಧವಾಗಿದೆ. ಅದರ ಆಳ ಅಗಲ ವಿಶಾಲವಾಗಿದೆ. ನಿನ್ನೆಯಷ್ಟೇ ಅವರನ್ನು ಬಂಧಿಸಲಾಗಿದೆ. ಹೆಚ್ಚಿವ ವಿಚಾರಣೆಗಾಗಿ ಅವರನ್ನು ಸಿಬಿಐ ವಶಕ್ಕೆ ನೀಡಬೇಕು' ಎಂದು ಕೋರಿದರು.
ಜಗನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಸಿಬಿಐ ಇದುವರೆಗೆ ಮೂರು ಆರೋಪಪಟ್ಟಿಗಳನ್ನು ದಾಖಲಿಸಿದೆ. ಮೊದಲ ಆರೋಪಪಟ್ಟಿಯಲ್ಲಿ ಜಗನ್ ಮತ್ತಿತರೆ 11 ಆರೋಪಿಗಳಿಗೆ ಸಿಬಿಐ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಆದರೆ ಉಳಿದೆರಡು ಆರೋಪಪಟ್ಟಿಗಳಲ್ಲಿ ಅವರಿಗೆ ಜಾಮೀನು ದೊರೆತಿಲ್ಲ.
ವಾದ ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ಜಗನ್ ಮೋಹನ್ ರೆಡ್ಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಜಗನ್ ಅವರ ಮೇಲೆ ಐಪಿಸಿ ಸೆಕ್ಷನ್ 120B, 409, 420 ಮತ್ತು 477A ಅನ್ವಯ ಕೇಸು ದಾಖಲಿಸಲಾಗಿದೆ.
ಜಗನ್ ಬಂಧನ ಹಿನ್ನೆಲೆಯಲ್ಲಿ ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಮೇ.28ರಿಂದ ಮೂರು ದಿನಗಳ ಕಾಲ ಬಂದ್ ಆಚರಿಸಲು ವೈಎಸ್ ಆರ್ ಕಾಂಗ್ರೆಸ್ ಪಕ್ಷ ಕರೆ ನೀಡಿದೆ. ವೈಎಸ್ ಆರ್ ಕುಟುಂಬದವರು ಜಗನ್ ಬಂಧನ ಖಂಡಿಸಿ ಸತ್ಯಾಗ್ರಹ ಮಾಡುತ್ತಿದ್ದಾರೆ.
ಜಗನ್ ಮೋಹನ್ ರೆಡ್ಡಿ ಅವರ ಬಂಧನ ಅಕ್ರಮವಾಗಿದ್ದು, ಚುನಾವಣೆ ದೃಷ್ಟಿಯಿಂದ ಜನಪ್ರಿಯ ನಾಯಕರನ್ನು ಬಂಧಿಸುವ ಕುತಂತ್ರವಾಗಿದೆ. ಜಗನ್ ಬಂಧನವನ್ನು ವೈಎಸ್ ಆರ್ ಪಕ್ಷ ಖಂಡಿಸಿ ಮೂರು ದಿನಗಳ ಕಾಲ ಸಂಪೂರ್ಣ ಬಂದ್ ಆಚರಿಸಲಾಗುತ್ತದೆ ಎಂದು ವೈಎಸ್ ಆರ್ ಪಕ್ಷ ಜಿಲ್ಲಾ ಮುಖ್ಯಸ್ಥ ಬೊಮ್ಮನ ರಾಜಕುಮಾರ್ ಹೇಳಿದ್ದಾರೆ.
ಹೈದರಾಬಾದ್ ನಲ್ಲಿ ನಿಷೇಧಾಜ್ಞೆ ವಿಧಿಸಿರುವ ಪೊಲೀಸರು, ಗೋದಾವರಿ ಜಿಲ್ಲೆಗೆ ಸೇರಿದ ವೈಎಸ್ ಆರ್ ಪಕ್ಷದ 20ಕ್ಕೂ ಅಧಿಕ ನಾಯಕರನ್ನು ಬಂಧಿಸಿದ್ದಾರೆ.












Click it and Unblock the Notifications