ಶುಕ್ರವಾರ ಸತ್ತ ಬಾಬಾರ 12000 ಕೋಟಿ ಆಸ್ತಿ ಯಾರಿಗೆ?

ಸರಳ ಜೀವನ ಬೋಧಿಸಿ, ಸ್ವತಃ ಸರಳ ಜೀವನ ನಡೆಸುತ್ತಿದ್ದ 'ಪರಮಸಂತ ತುಳಸೀದಾಸ ಮಹಾರಾಜ್' ಅಲಿಯಾಸ್ ಬಾಬಾ ಜೈ ಗುರುದೇವ ದೀರ್ಘಕಾಲದ ಅನಾರೋಗ್ಯದಿಂದ ಕಳೆದ ಶುಕ್ರವಾರ (ಮೇ 18) ಮಥುರಾದಲ್ಲಿ ಮೃತಪಟ್ಟಿದ್ದಾರೆ.
ಇಂತಿಪ್ಪ ಬಾಬಾ ಗುರುದೇವ 12,000 ಕೋಟಿ ರುಪಾಯಿ ಆಸ್ತಿಯ ಒಡೆಯರಾಗಿದ್ದರು ಎಂಬ ಸಂಗತಿಯನ್ನು ನೀವು ಒಪ್ಪಲೇಬೇಕು. ಆದರೆ ಈಗಿನ 12,000 ಕೋಟಿ ರುಪಾಯಿ ಪ್ರಶ್ನೆ ಏನಪಾ ಅಂದರೆ ಈ ಪಾಟಿಯ ಆಸ್ತಿ ಯಾರ ಪಾಲಾಗುತ್ತದೆ ಎಂಬುದು?
ಈ ಬಾಬಾ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಚಿರೌಲಿ ಗ್ರಾಮದವರು. ನೋಡಿ, ಬಾಬಾ ಜೈ ಗುರುದೇವ ಅವರು ಸುಮಾರು ಆರು ಬ್ಯಾಂಕುಗಳಲ್ಲಿ ಫಿಕ್ಸೆಡ್ ಡೆಪಾಸಿಟ್, ಮತ್ತಿತರ ಖಾತೆಗಳನ್ನು ಹೊಂದಿದ್ದರು. ಇವರು ಇಲ್ಲಿನ SBI ಮಂಡಿ ಸಮಿತಿ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದರಲ್ಲಿ 100 ಕೋಟಿ ರುಪಾಯಿ ಶೇಖರಿಸಿಟ್ಟಿದ್ದರು.
ಮಥುರಾ- ದೆಹಲಿ ಹೆದ್ದಾರಿಯಲ್ಲಿ ಸುವಿಶಾಲ ಆಶ್ರಮ ಸೇರಿದಂತೆ ಮತ್ತಿತರ ಅಪಾರ ಆಸ್ತಿಗಳು ಇವರ ಹೆಸರಿನಲ್ಲಿವೆ. 1952ರಿಂದ ಬಾಬಾ ಇವುಗಳನ್ನು ಸ್ಥಾಪಿಸಿಕೊಂಡು ಬಂದಿದ್ದಾರೆ. ಅಂದಹಾಗೆ, ಬಾಬಾ ತಮ್ಮ 116ನೇ ವರ್ಷದಲ್ಲಿ ಸಾವನ್ನಪ್ಪಿದ್ದಾರೆ.
ಬಾಬಾ ಜೈ ಗುರುದೇವ ಹೆಸರಿನಲ್ಲಿ 4,000 ಕೋಟಿ ರು. ಭೂ ಆಸ್ತಿಯೇ ಇದೆ. ಜೈ ಗುರುದೇವ ಟ್ರಸ್ಟ್ ಹೆಸರಿನಲ್ಲಿ ಮಥುರಾದಲ್ಲಿ ಶಾಲೆ, ಪೆಟ್ರೋಲ್ ಬಂಕ್ ಇದೆ. ಹಲವಾರು ಐಷಾರಾಮಿ Plymouth, Mercedes, Skoda, BMW ಕಾರುಗಳು ಇವರ ಸಾರೋಟಗಳಾಗಿದ್ದವು. ಈ ಕಾರುಗಳ ಮೌಲ್ಯವೇ 150 ಕೋಟಿ ರು. ದಾಟುತ್ತದೆ ಎನ್ನಲಾಗಿದೆ.
ಬಾಬಾ ಆಶ್ರಮಕ್ಕೆ ಭೇಟಿ ನೀಡುತ್ತಿದ್ದ ಭಕ್ತರಿಂದ ದಿನಂಪ್ರತಿ 10 ಲಕ್ಷ ರುಪಾಯಿ ಕಾಣಿಕೆ ರೂಪದಲ್ಲಿ ಸಂದಾಯವಾಗುತ್ತಿತ್ತು. ಹುಣ್ಣಿಮೆ, ಹೋಳಿ, ಗುರು ಪೂರ್ಣಿಮೆ ಅಂತಹ ವಿಶೇಷ ದಿನಗಳಲ್ಲಿ ಬಾಬಾ ಆಶ್ರಮದತ್ತ ಇನ್ನೂ ಹೆಚ್ಚಿನ ಸಂಖ್ಯೆಯ ಭಕ್ತರು ಹರಿದುಬರುತ್ತಿದ್ದರು. ಹಾಗೆಯೇ, ಕಾಣಿಕೆ ಪ್ರಮಾಣವೂ ವಿಪರೀತ ಎನಿಸುವಷ್ಟು ಬರುತ್ತಿತ್ತು.
ಅತ್ಯಂತ ಶ್ರೀಮಂತ ಬಾಬಾ ಜೈ ಗುರುದೇವ ಅವರ ಅನುಯಾಯಿಗಳ ಸಾಲಿನಲ್ಲಿ ಇಂದಿರಾ ಗಾಂಧಿ, ಎನ್ ಡಿ ತಿವಾರಿ, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಮತ್ತು ಆತನ ಕಿರಿಯ ಸೋದರ ಲೋಕೋಪಯೋಗಿ ಸಚಿವ ಶಿವಪಾಲ್ ಸಿಂಗ್ ಯಾದವ್ ಪ್ರಮುಖವಾಗಿ ಕಾಣಿಸಿಕೊಳ್ಳುತ್ತಿದ್ದರು.












Click it and Unblock the Notifications