ಜನಾರ್ದನ ರೆಡ್ಡಿ ಇಂದು Free Bird ಆಗುತ್ತಾರಾ?

ಅಕ್ರಮ ಗಣಿಗಾರಿಕೆ ಆರೋಪದ ಮೇಲೆ jail bird ಆಗಿರುವ ಮಾಜಿ ಸಚಿವ, ಗಣಿ ಧಣಿ ಜನಾರ್ದನ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್‌ನ ಜಾಮೀನು ಅರ್ಜಿ ವಿಚಾರಣೆ ಬುಧವಾರ ನಗರದ ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ನಡೆಯಲಿದೆ.
ಅತ್ತ ಆಂಧ್ರದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸಿಬಿಐ ನ್ಯಾಯಾಲಯವು ಇತ್ತೀಚೆಗೆ ಜನಾರ್ದನ ರೆಡ್ಡಿಗೆ ಜಾಮೀನು ನೀಡಿದೆ. ಹೀಗಾಗಿ, ಬುಧವಾರ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ರೆಡ್ಡಿಗೆ ಜಾಮೀನು ದೊರೆತರೆ ರೆಡ್ಡಿ free bird. ಇದನ್ನು ಸಾಧ್ಯವಾಗಿಸಲು ಅಂದರೆ...
ಜನಾರ್ದನ ರೆಡ್ಡಿ ಪರ ಸಿಬಿಐ ನ್ಯಾಯಾಲಯದಲ್ಲಿ ಜಾಮೀನಿಗಾಗಿ ಖ್ಯಾತ ವಕೀಲರಾದ ರಾಮ್ ಜೇಠ್ಮಲಾನಿ ಪ್ರತಿವಾದ ಮಂಡಿಸುವ ಸಾಧ್ಯತೆಯಿದೆ. ಕುತೂಹಲಕಾರಿ ಸಂಗತಿಯೆಂದರೆ ರೆಡ್ಡಿ ಜಾಮೀನು ಕೋರಿರುವುದಕ್ಕೆ ಬೆಂಗಳೂರು ಸಿಬಿಐ ಯಾವುದೇ ಆಕ್ಷೇಪಣೆ ಸಲ್ಲಿಸಿಲ್ಲ. ಹಾಗಾಗಿ, ರೆಡ್ಡಿಗೆ ಇಂದು ಮುಕ್ತಿ ಪ್ರಾಪ್ತಿಯಾಗುವ ಲಕ್ಷಣಗಳಿವೆ.
ರೆಡ್ಡಿಗಾರು ಮತ್ತೆ ಚಂಚಲಗೂಡ ಜೈಲುವಾಸಿ ?: ಆದರೆ ಅದು ಕ್ಷಣಿಕವಾಗಲಿದೆ. ಒಂದು ವೇಳೆ ಇಂದು ಜಾಮೀನು ದೊರೆತು ರೆಡ್ಡಿ ಹೊರಬಂದರೂ ನಾಳಿದ್ದು ಏನೋ, ಹೇಗೋ? ಏಕೆಂದರೆ ರೆಡ್ಡಿಗೆ ಸಿಬಿಐ ಕೋರ್ಟ್ ಮೇ 11 ರಂದು ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸಿಬಿಐ ನಿರ್ದೇಶಕ ವಿವಿ ಲಕ್ಷ್ಮಿನಾರಾಯಣಗಾರು ಅದಾಗಲೇ ಹೈಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಇದರ ವಿಚಾರಣೆ ಮೇ 25 ರಂದು ನಡೆಯಲಿದೆ. ಅಲ್ಲೇನಾದರೂ ರೆಡ್ಡಿಗೆ ಗ್ರಹಚಾರ ಕೈಕೊಟ್ಟು ಜಾಮೀನು ರದ್ದಾದರೆ ರೆಡ್ಡಿಗಾರು ಮತ್ತೆ ಚಂಚಲಗೂಡ ಜೈಲುವಾಸಿಯಾಗಲಿದ್ದಾರೆ.
ಓಬಳಾಪುರಂ ಮೈನಿಂಗ್ ಕಂಪನಿಯು ಆಂಧ್ರದ ಗಡಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪದ ಮೇಲೆ ಆಂಧ್ರ ಸಿಬಿಐ ಪೊಲೀಸರು ಜನಾರ್ದನ ರೆಡ್ಡಿ ಮತ್ತು ಕಂಪನಿ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿಯನ್ನು ಕಳೆದ ವರ್ಷ ಸೆಪ್ಟಂಬರ್‌ನಲ್ಲಿ ಬಳ್ಳಾರಿಯಲ್ಲಿ ಬಂಧಿಸಿದ್ದರು. ಹೀಗಾಗಿ, ಸುಮಾರು ಆರು ತಿಂಗಳು ರೆಡ್ಡಿ ಚಂಚಲಗೂಡ ಜೈಲಿನಲ್ಲಿದ್ದರು.
ಬಳಿಕ ಕರ್ನಾಟಕದಲ್ಲಿ ನಡೆಸಿರುವ ಅಕ್ರಮ ಗಣಿಗಾರಿಕೆ ಅರೋಪಗಳ ಬಗ್ಗೆ ವಿಚಾರಣೆ ನಡೆಸಲು ಇಲ್ಲಿನ ಸಿಬಿಐ ಪೊಲೀಸರು TP ವಾರೆಂಟ್ ಪಡೆದು ಜನಾರ್ದನ ರೆಡ್ಡಿಯನ್ನು ಮಾ. 2ರಂದು ಬೆಂಗಳೂರಿಗೆ ಕರೆ ತಂದಿದ್ದರು. ಸಿಬಿಐ ಪೊಲೀಸರ ವಿಚಾರಣೆ ಬಳಿಕ ರೆಡ್ಡಿ ಮತ್ತು ಅವರ ಆಪ್ತ ಅಲಿಖಾನ್ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿದ್ದಾರೆ.












Click it and Unblock the Notifications